ಸಿಂಧನೂರು: ಎಲ್ಲ ದೇವದಾಸಿಯರಿಗೆ ಸಹಾಯಧನ ಹೆಚ್ಚಳ, ಮನೆ ನಿರ್ಮಿಸಿ ಕೊಡುವುದು, ಸ್ವಯಂ ಉದ್ಯೋಗಕ್ಕಾಗಿ ಸಾಲ ಸೌಲಭ್ಯ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ತಾಲ್ಲೂಕು ಘಟಕದಿಂದ ಬುಧವಾರ ಇಲ್ಲಿನ ಮಿನಿವಿಧಾಸೌಧ ಕಚೇರಿಗೆ ಮುತ್ತಿಗೆ ಹಾಕಲಾಯಿತು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಗರ ಸೇರಿ ವಿವಿಧ ಗ್ರಾಮಗಳ ದೇವದಾಸಿಯರು ಜಮಾಯಿಸಿದ್ದರು. ನಂತರ ಆರಂಭಗೊಂಡ ಮೆರವಣಿಗೆಯು ಅಪ್ನಾಮಂಡಿ ಮಾರುಕಟ್ಟೆ, ಮಹಾತ್ಮಗಾಂಧಿ ವೃತ್ತದ ಮೂಲಕ ಮಿನಿವಿಧಾನಸೌಧ ತಲುಪಿತು.
ಮಹಿಳೆಯರು ಘೋಷಣೆಗಳನ್ನು ಕೂಗುತ್ತಾ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಅವರನ್ನು ತಡೆದರು.
ದೇವದಾಸಿಯರಿಗೆ ಮಾಸಿಕ ₹5 ಸಾವಿರ ಸಹಾಯಧನ ನೀಡಬೇಕು. ದೇವದಾಸಿಯರ ಮಕ್ಕಳು ಮತ್ತು ಕುಟುಂಬದ ಸದಸ್ಯರನ್ನು ತಕ್ಷಣ ಗಣತಿ ಮಾಡಿ ಅವರಿಗೂ ಪುನರ್ವಸತಿ ಕಲ್ಪಿಸಬೇಕು. ದೇವದಾಸಿ ಮಕ್ಕಳಿಗೆ ಉನ್ನತ ಶಿಕ್ಷಣದವರೆಗೆ ತಗುಲುವ ಶುಲ್ಕವನ್ನು ಸರ್ಕಾರವೇ ಭರಿಸಬೇಕು. ವಿವಾಹಕ್ಕೆ ₹5 ಲಕ್ಷ ನೆರವು ನೀಡಬೇಕು. ದೇವದಾಸಿಯರು ಸ್ತ್ರೀಶಕ್ತಿ ಹಾಗೂ ಸ್ವಸಹಾಯ ಸಂಘಗಳಲ್ಲಿ ಪಡೆದ ಸಾಲ ಮನ್ನಾ ಮಾಡಬೇಕು ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಎಚ್.ಪದ್ಮಾ ಒತ್ತಾಯಿಸಿದರು.
ದೇವದಾಸಿಯರು ಕೃಷಿ ಚಟುವಟಿಕೆಯಲ್ಲಿ ತೊಡಗಲು ತಲಾ 2 ಎಕರೆ ಭೂಮಿ ನೀಡಬೇಕು. ನಿವೇಶನ ರಹಿತರಿಗೆ 80*80 ಚದರ ಅಡಿ ಜಾಗ ನೀಡಿ ಮನೆಗಳನ್ನು ನಿರ್ಮಿಸಿಕೊಡಬೇಕು.
ಸ್ವಯಂ ಉದ್ಯೋಗ ಕೈಗೊಳ್ಳಲು ವೃತ್ತಿ ತರಬೇತಿ ಶಿಬಿರಗಳನ್ನು ಹೋಬಳಿಗೊಂದರಂತೆ ಆರಂಭಿಸಿ, ಪ್ರತಿ ತಿಂಗಳು ಕನಿಷ್ಠ ₹4,000 ಭತ್ಯೆ ಜತೆಗೆ ಊಟ, ವಸತಿ ಸೌಲಭ್ಯ ಕಲ್ಪಿಸಬೇಕು. ಉದ್ಯೋಗ ಖಾತ್ರಿ ಯೋಜನೆ ಅಡಿ ಕನಿಷ್ಠ 200 ದಿನ ಕೆಲಸ ನೀಡಬೇಕು ಎಂದು ಸಂಘದ ಗೌರವಾಧ್ಯಕ್ಷ ನರಸಿಂಹಪ್ಪ ಆಗ್ರಹಿಸಿದರು.
ನಂತರ ತಹಶೀಲ್ದಾರ್ ಶಿವಾನಂದ ಸಾಗರ ಮನವಿ ಪತ್ರ ಸ್ವೀಕರಿಸಿದರು. ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ಯಲ್ಲಮ್ಮ, ಕಾರ್ಯದರ್ಶಿ ಕರಿಯಮ್ಮ, ಖಜಾಂಚಿ ಪಾಪಮ್ಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.