ರಾಯಚೂರು: ಮನೆ ನಿರ್ಮಿಸಿಕೊಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿಕರ್ನಾಟಕ ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘ ಜಿಲ್ಲಾ ಘಟಕದ ಸದಸ್ಯೆಯರುಜಿಲ್ಲಾ ದೇವದಾಸಿ ಪುನರ್ ವಸತಿ ಯೋಜನಾ ಕಚೇರಿಗೆ ಮಂಗಳವಾರ ಮುತ್ತಿಗೆ ಹಾಕಿದ್ದರಿಂದ ಪೊಲೀಸರು ಅವರನ್ನು ಬಂಧಿಸಿ, ಆನಂತರ ಬಿಡುಗಡೆ ಮಾಡಿದರು.
ನಗರದ ಆಶಾಪೂರ ಮಾರ್ಗದಲ್ಲಿ 205 ಮನೆಗಳನ್ನು ನಿರ್ಮಿಸುವುದಕ್ಕಾಗಿ ಐದು ಎಕರೆ ಜಾಗ ಮೀಸಲಿಡಲಾಗಿದೆ. ಒಂದು ವರ್ಷವಾದರೂ ಮನೆಗಳನ್ನು ನಿರ್ಮಿಸಿಲ್ಲ. ಹಕ್ಕುಪತ್ರಗಳನ್ನು ನೀಡಿದ್ದರೂ ಪ್ರಯೋಜನ ಇಲ್ಲದಂತಾಗಿದೆ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಮುತ್ತ್ಯಾಲಮ್ಮ ದೇವಸ್ಥಾನದಿಂದ ಪ್ರತಿಭಟನೆ ಆರಂಭಿಸಿ ಸದಸ್ಯೆಯರು ಕಚೇರಿಗೆ ಮುತ್ತಿಗೆ ಹಾಕಿದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಎಲ್ಲರನ್ನು ಪೊಲೀಸ್ ವಾಹನಗಳನ್ನು ತೆಗೆದುಕೊಂಡು ಹೋದರು.
ಮನೆಗಳ ನಿರ್ಮಾಣ ಕಾರ್ಯವನ್ನು ಕೊಳಗೇರಿ ಅಭಿವೃದ್ಧಿ ಮಂಡಳಿ ಬದಲಾಗಿ ಮಹಿಳಾ ಅಭಿವೃದ್ಧಿ ನಿಗಮಕ್ಕೆ ಒಪ್ಪಿಸಬೇಕು. ಪ್ರತಿ ಒಂದು ಮನೆಯ ವೆಚ್ಚಕ್ಕೆ ₹ 5.80 ಲಕ್ಷ ನಿಗಮದಿಂದ ಬಿಡುಗಡೆ ಮಾಡಬೇಕು ಎಂದು ಜಿಲ್ಲಾ ದೇವದಾಸಿ ಪುನರ್ ವಸತಿ ಕಛೇರಿಯ ಯೋಜನಾ ಅಧಿಕಾರಿಗೆ ಮನವಿ ಸಲ್ಲಿಸಿದರು.
ಮಾಶಾಸನ ನೀಡಲು ವಯೋಮಿತಿಯನ್ನು ತೆಗೆದು ಹಾಕಬೇಕು. ಎಲ್ಲಾ ದೇವದಾಸಿ ಮಹಿಳೆಯರಿಗೆ 5 ಎಕರೆ ಕೃಷಿಗೆ ಯೋಗ್ಯವಾದ ಭೂಮಿಯನ್ನು ನೀಡಬೇಕು. ಸ್ವಯಂ ಉದ್ಯೋಗ ಕಲ್ಪಿಸಿಕೊಳ್ಳಲು ದೇವದಾಸಿ ಮಹಿಳೆಯರಿಗೆ ಮತ್ತು ಅವರ ಮಕ್ಕಳಿಗೆ ಶೇ 75 ರಷ್ಟು ಸಹಾಯಧನ ಇರುವಂತೆ ಸಾಲ ನೀಡಬೇಕು ಎಂದು ಕೋರಿದರು.
ದೇವದಾಸಿ ಮಹಿಳೆಯರ ಮಕ್ಕಳ ವಿದ್ಯಾಭ್ಯಾಸಕ್ಕೆ ಉನ್ನತ ಹಂತದವರೆಗೆ ಉಚಿತವಾದ ಮತ್ತು ನೇರವಾದ ಪ್ರವೇಶ ಅವಕಾಶ ಕಲ್ಪಿಸಬೇಕು. ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಹಾಗೂ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ಮಕ್ಕಳ ಹೋರಾಟ ಸಮಿತಿ ರಾಜ್ಯ ಘಟಕದಿಂದ ಡಿಸೆಂಬರ್15 ರಿಂದ 25 ರವರೆಗೆ ರಾಜ್ಯದಾದ್ಯಂತ ರಸ್ತೆ ತಡೆ ಚಳವಳಿ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಎಚ್.ಪದ್ಮಾ, ಅಯ್ಯಮ್ಮ, ಜೆ.ತಾಯಮ್ಮ, ಕೆ.ಜಿ.ವೀರೇಶ ಸೇರಿದಂತೆ ಸಂಘದ ಸದಸ್ಯೆಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.