ದೇವದುರ್ಗ: ತಾಲ್ಲೂಕಿನ ಅಮರಾಪುರ ಹಳ್ಳದ ಬಸವೇಶ್ವರ ರಥೋತ್ಸವ ಸೋಮವಾರ ಸಡಗರ ಸಂಭ್ರಮದಿಂದ ನಡೆಯಿತು.
ದೇವಾಲಯದಲ್ಲಿ ಬೆಳಿಗ್ಗೆ ರುದ್ರಾಭಿಷೇಕ, ವಿಶೇಷ ಪೂಜಾ ಕಾರ್ಯಗಳು ನೆರವೇರಿದವು. ಸುತ್ತಮುತ್ತಲ ಗ್ರಾಮಗಳಿಂದ ಅಪಾರ ಸಂಖ್ಯೆಯಲ್ಲಿ ಬಂದಿದ್ದ ಭಕ್ತರು ದೇವರಿಗೆ ಹಣ್ಣು ಕಾಯಿ ಸಮರ್ಪಿಸಿ ಪೂಜೆ ಸಲ್ಲಿಸಿ ತಮ್ಮ ಪಶು ಸಂಪತ್ತನ್ನು ಸಂರಕ್ಷಿಸುವಂತೆ ಪ್ರಾರ್ಥನೆ ಸಲ್ಲಿಸಿದರು.
ಸಂಜೆ ದೇವಸ್ಥಾನದಿಂದ ಸ್ವಾಮಿಯ ಉತ್ಸವ ಮೂರ್ತಿಯನ್ನು ಭವ್ಯ ಮೆರವಣಿಗೆಯಲ್ಲಿ ಕರೆತಂದು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ರಥಕ್ಕೆ ವಿಶೇಷ ಪೂಜೆ ನೆರವೇರಿಸುತ್ತಿದ್ದಂತೆ ‘ಹರ ಹರ ಮಹಾದೇವ’ ಎಂಬ ಭಕ್ತರ ಜಯಘೋಷ, ಹರ್ಷೋದ್ಘಾರದೊಂದಿಗೆ ರಥೋತ್ಸವ ಪ್ರಾರಂಭವಾಯಿತು.
ರಥ ಬೀದಿಯಲ್ಲಿ ನೆರೆದಿದ್ದ ಭಕ್ತ ಸಮೂಹ ಬಾಳೆಹಣ್ಣು, ಉತ್ತತ್ತಿ ಎಸೆದು ಭಕ್ತಿ ಸಮರ್ಪಿಸಿತು. ರಥವು ಪಾದಗಟ್ಟೆವರೆಗೂ ತೆರಳಿ ಮೂಲ ಸ್ಥಳಕ್ಕೆ ಹಿಂತಿರುಗಿತು. ಸಮಾಳ, ಡೋಲು, ಹಲಗೆ ಮಂಗಳ ವಾದ್ಯಗಳು ರಥೋತ್ಸವಕ್ಕೆ ಮೆರುಗು ತಂದವು.
ನೆರೆಯ ಗ್ರಾಮಗಳಾದ ಹದ್ದಿನಾಳ, ಸುಂಕೇಶ್ವರಹಾಳ, ರಾಮದುರ್ಗ, ಮಲದಕಲ್, ಗಬ್ಬೂರು ಮತ್ತು ಜಿನ್ನಾಪುರ ಗ್ರಾಮದ ಭಕ್ತರು ರಥೋತ್ಸವ ದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.