ದೇವದುರ್ಗ: ‘ಎರಡು ವರ್ಷ ಆರು ತಿಂಗಳ ಅವಧಿಯಲ್ಲಿ ದೇವದುರ್ಗ ಮತ್ತು ಅರಕೇರಾ ತಾಲ್ಲೂಕಿನಾದ್ಯಂತ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳಿಗೆ ಜನಸಾಮಾನ್ಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಉಳಿದ ಅವಧಿಯಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು. ಹಂತ ಹಂತವಾಗಿ ಅಖಂಡ ದೇವದುರ್ಗ ಅಭಿವೃದ್ಧಿಪಡಿಸುವ ಉದ್ದೇಶವಿದೆ’ ಎಂದು ಶಾಸಕಿ ಕರೆಮ್ಮ ಜಿ. ನಾಯಕ ಹೇಳಿದರು.
ಅರಕೇರಾ ಮತ್ತು ದೇವದುರ್ಗ ತಾಲ್ಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ಕಾರ್ಯಕ್ರಮಗಳ ಭಾಗವಾಗಿ ಮಸರಕಲ್ ಗ್ರಾಮದಲ್ಲಿ ₹19 ಕೋಟಿ ವೆಚ್ಚದ 110/11 ಸಬ್ ಸ್ಟೇಷನ್ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.
‘ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಮಾರ್ಗಸೂಚಿಗಳಂತೆ ಶಿಕ್ಷಣ ಮತ್ತು ಮೂಲಸೌಕರ್ಯಗಳಿಗೆ ಆದ್ಯತೆಯ ಮೇರೆಗೆ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.
ಅವಳಿ ತಾಲ್ಲೂಕಿನ ಗ್ರಾಮಗಳಾದ ಕಾಕರಗಲ್, ರಾಮದುರ್ಗ, ಸುಂಕೇಶ್ವರಹಾಳ, ಖಾನಾಪೂರ, ಹೊನ್ನಟಗಿ, ಕೊಳ್ಳೂರು, ಶಾವಂತಗೇರಾ ಮತ್ತು ಹಿರೇರಾಯಕುಂಪಿ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಾದ ಸಿ.ಸಿ. ರಸ್ತೆ, ಚರಂಡಿ, ಸೇತುವೆ, ಶೌಚಾಲಯ, ಶಾಲಾ ಕಟ್ಟಡ ಮತ್ತು ಅಡುಗೆ ಕೋಣೆ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸಿದರು.
ಶರಣಗೌಡ ಜೇರಬಂಡಿ, ಸಿಕ್ರೇಸ್ ಪಾಟೀಲ, ಶರಣಪ್ಪ, ನಾಗರಾಜ ಪಾಟೀಲ ಗೌರಂಪೇಟ, ತಮ್ಮಣ್ಣ ವಕೀಲ, ಶಾಲಂ, ತಾ.ಪಂ ಮಾಜಿ ಸದಸ್ಯ ಗೋವಿಂದರಾಜ ನಾಯಕ, ನಾಗರಾಜ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.