ರಾಯಚೂರಿನ ಹಮದರ್ದ್ ಶಾಲೆಯಲ್ಲಿ ಶನಿವಾರ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮವನ್ನು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ನಜೀರ್‌ಅಹ್ಮದ್ ಕನವಳ್ಳಿ ಉದ್ಘಾಟಿಸಿದರು.
ರಾಯಚೂರು: ‘ಜಿಲ್ಲೆಯಲ್ಲಿ ಐತಿಹಾಸಿಕ ಸ್ಮಾರಕಗಳನ್ನು ಗುರುತಿಸುವ ಕಾರ್ಯ ಆರಂಭವಾಗಿದ್ದು, ಡಿಜಿಟಲ್ ಸಮೀಕ್ಷೆ ಮಾಡಲಾಗುತ್ತಿದೆ’ ಎಂದು ರಾಜ್ಯ ಪುರಾತತ್ವ, ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಕ್ಯುರೇಟರ್ ಶಿವಪ್ರಕಾಶ ಹೇಳಿದರು.
ಜಿಲ್ಲಾಡಳಿತ ಹಮದರ್ದ್ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಕಂದಾಯ ಇಲಾಖೆಯಿಂದ ಮಾಹಿತಿ ಪಡೆದು ದಾಖಲೀಕರಣ ಮಾಡುವ ಪ್ರಕ್ರಿಯೆ ನಡೆದಿದೆ. ಈಗಾಗಲೇ ರಾಯಚೂರು, ಸಿರವಾರ, ಮಾನ್ವಿ ತಾಲ್ಲೂಕಿನಲ್ಲಿ ಸಮೀಕ್ಷೆ ಪೂರ್ಣಗೊಳಿಸಲಾಗಿದೆ. ಲಿಂಗಸುಗೂರು, ಮಸ್ಕಿ ಹಾಗೂ ಸಿಂಧನೂರು ತಾಲ್ಲೂಕಿನಲ್ಲೂ ಸಮೀಕ್ಷೆ ನಡೆಸಲಾಗುವುದು’ ಎಂದು ತಿಳಿಸಿದರು.
‘ನಗರದಲ್ಲಿರುವ ಬೆಟ್ಟದ ಕೋಟೆಗೆ ನಾಲ್ಕು ಮಹಾದ್ವಾರಗಳಿದ್ದವು. ಪ್ರಸ್ತುತ ಮೆಕ್ಕಾ ದರ್ವಾಜಾ, ಕಾಟೇ ದರ್ವಾಜಾ, ನವರಂಗ ದರ್ವಾಜಾ ಮಾತ್ರ ಉಳಿದಿವೆ. ಒಂದು ಅಸ್ತಿತ್ವ ಕಳೆದುಕೊಂಡು ಕಾಲಗರ್ಭ ಸೇರಿದೆ. ರಾಯಚೂರಿನ ಏಕಮಿನಾರ್, ದೇವದುರ್ಗ, ಜಲದುರ್ಗ ಹಾಗೂ ಮಲಿಯಾಬಾದ್ ಕೋಟೆ ಇಲಾಖೆಯ ಅಧೀನದಲ್ಲಿದೆ’ ಎಂದು ಹೇಳಿದರು.
‘ರಾಜ್ಯ ಪುರಾತತ್ವ, ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ರಾಯಚೂರು ಕಚೇರಿಯಲ್ಲಿ ಐದು ಹುದ್ದೆಗಳಿದ್ದರೂ ಎಲ್ಲವೂ ಖಾಲಿ ಇವೆ. ಅಟೆಂಡರ್ ಒಬ್ಬರೇ ಕಚೇರಿ ನೋಡಿಕೊಳ್ಳುತ್ತಿದ್ದಾರೆ. ಹೊರ ಗುತ್ತಿಗೆ ಆಧಾರದ ಮೇಲೆ ಕಾವಲುಗಾರನನ್ನು ನೇಮಕ ಮಾಡಿಕೊಳ್ಳಲಾಗಿದೆ. ಬೀದರ್, ಕಲಬುರಗಿ ಹಾಗೂ ರಾಯಚೂರು ಜಿಲ್ಲೆಗೆ ನಾನೊಬ್ಬನೇ ಕ್ಯುರೇಟರ್. ಇಲಾಖೆಯಲ್ಲಿ ಸಿಬ್ಬಂದಿ ನೇಮಕ ಆಗಬೇಕಿದೆ’ ಎಂದು ಹೇಳಿದರು.
ಕುರ್ವಕಲ ಅಭಿವೃದ್ಧಿಗೆ ಡಿಪಿಆರ್:
ಕಾರ್ಯಕ್ರಮ ಉದ್ಘಾಟಿಸಿದ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ನಜೀರ್‌ಅಹ್ಮದ್ ಕನವಳ್ಳಿ ಮಾತನಾಡಿ, ‘ರಾಯಚೂರು ತಾಲ್ಲೂಕಿನ ಕುರ್ವಕಲ (ಕುರ್ವಾಪುರ) ನಡುಗಡ್ಡೆ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆಯಿಂದ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದೆ. ಯೋಜನೆ ಅನುಷ್ಠಾನಗೊಂಡರೆ ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ’ ಎಂದು ತಿಳಿಸಿದರು.
‘ಕುರ್ವಕಲ ಹಾಗೂ ನಾರದಗಡ್ಡೆ ಕೃಷ್ಣಾ ನದಿ ಮಧ್ಯದಲ್ಲಿವೆ. ಅಲ್ಲಿ ದೋಣಿಗಳ ಮೂಲಕ ಹೋಗಲು ಸಾಧ್ಯ. ಅಭಿವೃದ್ಧಿಯಾದರೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ’ ಎಂದು ಹೇಳಿದರು.
‘ಪ್ರವಾಸಿ ತಾಣಗಳನ್ನು ಗುರುತಿಸುವುದು, ಅಲ್ಲಿನ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸುವುದು, ಮೂಲಸೌಕರ್ಯ ಕಲ್ಪಿಸುವುದು ಪ್ರವಾಸೋದ್ಯಮ ಇಲಾಖೆಯ ಮುಖ್ಯ ಕಾರ್ಯವಾಗಿದೆ’ ಎಂದು ತಿಳಿಸಿದರು.
ಪದವಿ ಕಾಲೇಜಿನ ಉಪನ್ಯಾಸಕ ಚಿನ್ನಾರೆಡ್ಡಿ ಎಸ್., ‘ರಾಯಚೂರು ಜಿಲ್ಲೆಗೆ ನಾಲ್ಕು ಸಾವಿರ ವರ್ಷಗಳ ಇತಿಹಾಸವಿದೆ. ಪ್ರವಾಸೋದ್ಯಮ ಇಲಾಖೆ ಹಾಗೂ ಪುರಾತತ್ವ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಜಿಲ್ಲೆಯಲ್ಲಿನ ಸ್ಮಾರಕಗಳು ಮಹತ್ವ ಕಳೆದುಕೊಂಡಿವೆ. ಪ್ರವಾಸಿ ತಾಣಗಳಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿದರೆ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯಲಿದೆ’ ಎಂದು ತಿಳಿಸಿದರು.
‘ಪ್ರವಾಸೋದ್ಯಮ ಸ್ಥಳೀಯರ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿದೆ. ಪ್ರವಾಸೋದ್ಯಮ ಇಲಾಖೆಯವರು ಸಮುದಾಯವನ್ನು ಸೇರಿಸಿಕೊಂಡು ಅಭಿವೃದ್ಧಿ ಮಾಡಬೇಕು. ಇದರಿಂದ ಸ್ಥಳೀಯ ಬದುಕು ಸಹ ಗಟ್ಟಿಗೊಳ್ಳುತ್ತದೆ’ ಎಂದು ಹೇಳಿದರು.
ಸರ್ಕಾರಿ ಮಹಿಳಾ ಪದವಿ ಕಾಲೇಜಿನ ಪ್ರಾಚಾರ್ಯೆ ಸುಗುಣ ಬಸವರಾಜ, ಚಿತ್ರಕಲಾ ಶಾಲೆಯ ಚಂದ್ರಶೇಖರ, ಹಮದರ್ದ್ ಕಾಲೇಜಿನ ಕಾಶಪ್ಪ ಉಪ್ಪಾ ಉಪಸ್ಥಿತರಿದ್ದರು.
ರಾಧಾ ಪ್ರಾರ್ಥಿಸಿದರು. ದಂಡಪ್ಪ ಬಿರಾದಾರ ನಿರೂಪಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಯಚೂರು ಮಹಾನಗರ ಪಾಲಿಕೆ, ಶಾಲಾ ಶಿಕ್ಷಣ ಇಲಾಖೆ, ಪುರತತ್ವ ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.
ಕವಿತಾಳ ಸಮೀಪದ ಕೋಟೆಕಲ್ ಬೆಟ್ಟದ ಮೇಲೆ ಆದಿಮಾನವರ ಅವಶೇಷಗಳು ದೊರೆತಿವೆ. ಗಬ್ಬೂರಲ್ಲಿ 28 ಪುರಾತನ ದೇಗುಲ 27 ಶಿಲಾಶಾಸನಗಳಿವೆಚಿನ್ನಾರೆಡ್ಡಿ ಎಸ್. ಪದವಿ ಕಾಲೇಜಿನ ಉಪನ್ಯಾಸಕ
ಜನಪ್ರತಿನಿಧಿಗಳು ಅಧಿಕಾರಿಗಳು ಗೈರು
ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬರಬೇಕಿದ್ದ ಸಚಿವರು ಶಾಸಕರು ಸರ್ಕಾರದ ನಾಮನಿರ್ದೇಶಿತ ಸದಸ್ಯರು ಹಾಗೂ ಜಿಲ್ಲಾ ತಾಲ್ಲೂಕುಮಟ್ಟದ ಅಧಿಕಾರಿಗಳು ಗೈರಾಗಿದ್ದರು. ಶಾಲೆಗಳಿಗೆ ದಸರಾ ರಜೆ ಇರುವ ಕಾರಣ ಶಾಲೆಗೆ ಬಂದಿರಲಿಲ್ಲ. ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಮನೆಗೆ ಹೋಗಿದ್ದರು. ಹೀಗಾಗಿ ಕೊನೆಯ ಹಂತದಲ್ಲಿ ಪ್ರಯಾಸಪಟ್ಟು ಮಹಿಳಾ ಪದವಿ ಕಾಲೇಜಿನ ವಿದ್ಯಾರ್ಥಿನಿಯರನ್ನು ಕರೆಯಿಸಿಕೊಳ್ಳಲಾಯಿತು. ಪ್ರೇಕ್ಷಕರ ಕೊರತೆಯಿಂದಾಗಿ ಕಾರ್ಯಕ್ರಮ ಒಂದು ತಾಸು ವಿಳಂಬವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.