
ಮಸ್ಕಿ: ರಾಯಚೂರು ಜಿಲ್ಲಾ ಉತ್ಸವ ಯಶಸ್ವಿಗೊಳಿಸಲು ಕ್ಷೇತ್ರದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಶಾಸಕ ಹಾಗೂ ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಆರ್. ಬಸನಗೌಡ ತುರ್ವಿಹಾಳ ಕರೆ ನೀಡಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಉತ್ಸವದ ನಿಮಿತ್ತ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮೂರು ದಿನಗಳ ಕಾಲ ನಡೆಯುವ ಜಿಲ್ಲಾ ಉತ್ಸವಕ್ಕೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ಹಲವು ಸಚಿವರು ಆಗಮಿಸಲಿದ್ದು, ಖ್ಯಾತ ಗಾಯಕರು ಹಾಗೂ ಕಲಾವಿದರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದರು.
ಕ್ರೀಡಾ ಸ್ಪರ್ಧೆಗಳು, ಜನಪದ ಕಲಾ ಪ್ರದರ್ಶನಗಳು ಹಾಗೂ ವಿವಿಧ ಆಕರ್ಷಕ ಕಾರ್ಯಕ್ರಮಗಳು ಉತ್ಸವದ ಭಾಗವಾಗಲಿವೆ ಎಂದು ವಿವರಿಸಿದರು.
ಮಸ್ಕಿ ಇತಿಹಾಸ ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಶೀಘ್ರದಲ್ಲೇ ‘ಮಸ್ಕಿ ಉತ್ಸವ’ ಆಯೋಜನೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು.
ಸಭೆಯಲ್ಲಿ ತಹಶೀಲ್ದಾರ್ ಮಂಜುನಾಥ ಬೋಗಾವತಿ, ಪುರಸಭೆ ಅಧ್ಯಕ್ಷ ಸುರೇಶ ಹರಸೂರು, ಗ್ಯಾರಂಟಿ ಸಮಿತಿ ಅಧ್ಯಕ್ಷ ಮೈಬುಸಾಬ ಮುದ್ದಾಪೂರ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಯಾದವ್, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಪಂಪಾಪತಿ ಹೂಗಾರ, ಸಿಪಿಐ ರಾಮಪ್ಪ ಉಪಸ್ಥಿತರಿದ್ದರು.
ತಾಲ್ಲೂಕಿನ ವಿವಿಧ ಇಲಾಖೆ ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ವ್ಯಾಪಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಮಸ್ಕಿ ಶಾಸನೋತ್ಸವಕ್ಕೆ ಮನವಿ: ಸಭೆಯಲ್ಲಿ ಪುರಸಭೆ ಅಧ್ಯಕ್ಷ ಸುರೇಶ ಹರಸೂರು ಮಾತನಾಡಿ,‘ಪಟ್ಟಣಕ್ಕೆ ಸುಮಾರು ಐದು ಸಾವಿರ ವರ್ಷಗಳ ಇತಿಹಾಸವಿದ್ದು, ಅಶೋಕನ ಶಾಸನದಿಂದ ವಿಶ್ವವಿಖ್ಯಾತಿಯಾಗಿದೆ. ಮುಂದಿನ ದಿನಗಳಲ್ಲಿ ‘ಮಸ್ಕಿ ಶಾಸನೋತ್ಸವ’ ಆಚರಿಸಲು ಶಾಸಕರು ಮುಂದಾಗಬೇಕು ಎಂದು ಅವರು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.