ADVERTISEMENT

ಸಂಚಾರ ನಿಮಯಗಳ ಪಾಲನೆ ನಿರ್ಲಕ್ಷ್ಯ ಸಲ್ಲದು

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ವೇದಮೂರ್ತಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2019, 13:46 IST
Last Updated 13 ಜುಲೈ 2019, 13:46 IST
ರಾಯಚೂರು ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ವಾಹನ ಸುರಕ್ಷಾ ಜಾಗೃತಿ ಕಾರ್ಯಾಗಾರದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ವೇದಮೂರ್ತಿ ಮಾತನಾಡಿದರು
ರಾಯಚೂರು ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ವಾಹನ ಸುರಕ್ಷಾ ಜಾಗೃತಿ ಕಾರ್ಯಾಗಾರದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ವೇದಮೂರ್ತಿ ಮಾತನಾಡಿದರು   

ರಾಯಚೂರು:ಪ್ರಯಾಣಿಕರು ರಸ್ತೆಯಲ್ಲಿ ಸಂಚರಿಸುವಾಗ ಸಂಚಾರ ನಿಯಮಗಳನ್ನು ಪಾಲನೆ ಮಾಡದೆ ನಿರ್ಲಕ್ಷ್ಯ ಧೋರಣೆ ಅನುಸರಿಸುವುದು ಸರಿಯಲ್ಲ ಎಂದುಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಹೇಳಿದರು.

ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶನಿವಾರ ಆಯೋಜಿಸಿದ್ದವಾಹನ ಸುರಕ್ಷಾ ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಪ್ರಯಾಣಿಕರು ಪದೇಪದೆ ತಪ್ಪುಗಳನ್ನು ಮಾಡುತ್ತಿದ್ದು, ಅದಕ್ಕೆ ಕಡಿವಾಣ ಹಾಕುವುದಕ್ಕಾಗಿ ಕಠಿಣ ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ. ಇನ್ನುಮುಂದೆ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡು ಬಂದರೆ, ಭಾರೀ ಪ್ರಮಾಣದ ದಂಡ ಕಟ್ಟಬೇಕಾಗುತ್ತದೆ. ತಪ್ಪುಗಳು ಪುನರಾವರ್ತನೆಯಾದರೆ ಇತರೆ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದರು.

ADVERTISEMENT

ಸಂಚಾರ ನಿಯಮ ಪಾಲಿಸದೆ ಇರುವುದಕ್ಕಾಗಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಕೇವಲ ನಮ್ಮ ರಕ್ಷಣೆ ಮಾತ್ರವಲ್ಲದೇ ಎದುರಿಗಿರುವ ಪ್ರಯಾಣಿಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ವಾಹನಗಳನ್ನು ಚಲಾಯಿಸಬೇಕಿದೆ. ಇದಕ್ಕಾಗಿಯೇ ಎಲ್ಲರೂ ಸಂಚಾರ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಬೇಕು ಎಂದರು.

ರಸ್ತೆಗೆ ನೇರ ಮತ್ತು ಬೇರೆ ವಾಹನ ಸವಾರರನ್ನು ಗಮನಿಸಿಕೊಂಡು ವಾಹನ ಚಲಾಯಿಸಬೇಕಾಗುತ್ತದೆ.ವಾಹನ ಓಡಿಸುವಾಗ ಮೊಬೈಲ್ ಪೋನ್ ಬಳಸುವುದು, ಬೈಕ್ ಮೇಲೆ ಮೂವರು ಹೋಗುವುದು ನಿಯಮಗಳ ಉಲ್ಲಂಘನೆಯಾಗುತ್ತದೆ. ಅದೇ ರೀತಿ ವಿಮಾ ರಹಿತ ವಾಹನ ಚಾಲನೆ ಮಾಡಿದವರಿಗೆ ಒಂದು ಸಾವಿರ, ನೋಂದಣಿ ರಹಿತ ವಾಹನ ಚಾಲನೆ ಮಾಡಿದರೆ ₹5 ಸಾವಿರ ದಂಡ ವಿಧಿಸಲಾಗುವುದು. ಯುವಕರು ವೀಲಿಂಗ್ ಮಾಡುವುದು, ಹುಡುಗಿಯರಿಗೆ ಚುಡಾಯಿಸುವುದು ಕೂಡಾ ಅಪರಾಧ. ಇದು ಕಂಡು ಬಂದರೆ ತಕ್ಕಪಾಠ ಕಲಿಯಬೇಕಾಗುತ್ತದೆ. ಪಾಲಕರು ತಮ್ಮ ಮಕ್ಕಳಿಗೆ ಸಭ್ಯತೆಯಿಂದ ನಡೆದುಕೊಳ್ಳುವಂತೆ ಬುದ್ಧಿವಾದ ಹೇಳಬೇಕು. ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.

ಆಟೋ ಚಾಲಕರು ಆರು ಜನರಿಗಿಂತ ಹೆಚ್ಚು ಪ್ರಯಾಣಿಕರನ್ನು ವಾಹನದಲ್ಲಿ ಕೂಡಿಸಿಕೊಂಡು ಹೋಗಬಾರದು. ಸರಕು ಸಾಗಿರುವ ವಾಹನಗಳಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಹೋಗುವಂತಿಲ್ಲ. ಇದರ ಬಗ್ಗೆ ವಾಣಿಜ್ಯ ಉದ್ದೇಶಿತ ಮತ್ತು ಸರಕು ಸಾಗಣೆ ವಾಹನದಾರರು ಸರಿಯಾಗಿ ನಡೆದುಕೊಳ್ಳಬೇಕು. ಇಲ್ಲದಿದ್ದರೆ ಪರವಾನಿಗೆಯನ್ನು ಶಾಶ್ವತವಾಗಿ ಕಳೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು, ವೈದ್ಯರಾದ ಡಾ. ಮಹಾಲಿಂಗಪ್ಪ, ಡಾ.ಸುರೇಶ, ವಿಶ್ವನಾಥ, ವಿವಿಧ ವಲಯಗಳ ಸಿಪಿಐ , ಪಿಎಸ್‌ಐ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.