ADVERTISEMENT

ಕಲ್ಮಂಗಿ: ಹಾಳಾಗಿರುವ ಕೊಳವೆ ಬಾವಿಗಳು, ಕುಡಿಯುವ ನೀರಿಗೆ ಪರದಾಟ

ದುರಸ್ತಿಗೆ ನಿರ್ಲಕ್ಷ್ಯ: ಆರೋಪ

ಮಲ್ಲೇಶ ಬಡಿಗೇರ
Published 1 ಏಪ್ರಿಲ್ 2022, 19:30 IST
Last Updated 1 ಏಪ್ರಿಲ್ 2022, 19:30 IST
ಕಲಮಂಗಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಕೊಳವೆ ಬಾವಿ ಬಳಿ ಕಾಯುತ್ತಿರುವ ಜನರು
ಕಲಮಂಗಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಕೊಳವೆ ಬಾವಿ ಬಳಿ ಕಾಯುತ್ತಿರುವ ಜನರು   

ತುರ್ವಿಹಾಳ: ಕಲ್ಮಂಗಿ ಗ್ರಾಮದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು ಹೆಚ್ಚಾಗಿ ವಾಸಿಸುವ ವಾರ್ಡಿನಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಿದ್ದು, ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ತುರ್ವಿಹಾಳ ಹತ್ತಿರದಲ್ಲಿ ಪಟ್ಟಣದ ಬಹುಗ್ರಾಮ ಯೋಜನೆ ಅಡಿಯಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಕೆರೆಯಿಂದ ನೀರು ಪೂರೈಕೆಯಾಗುತ್ತಿತ್ತು. ಗ್ರಾಮಕ್ಕೆ ಕೆರೆಯ ನೀರು ಸರಬರಾಜು ಮಾಡುವುದಕ್ಕೆ ಗುತ್ತಿಗೆದಾರರಿಗೆ ಸರ್ಕಾರದಿಂದ ಸಾಕಷ್ಟು ಅನುದಾನ ಬರುತ್ತಿದೆ. ಆದರೂ ಕೆಲಸ ಆಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಗ್ರಾಮದ ರೈತರೊಬ್ಬರ ಜಮೀನಿನಿಂದ ಪೈಪ್‌ಲೈನ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದರೂ, ಅದನ್ನು ಜನರ ಅನುಕೂಲಕ್ಕೆ ಅನುಸಾರವಾಗಿ ಬಿಡುತ್ತಿಲ್ಲ. ಅನಿವಾರ್ಯವಾಗಿ ಕುಡಿಯಲು ಯೋಗ್ಯವಿಲ್ಲದ ಕೊಳವೆ ಬಾವಿ ನೀರನ್ನೇ ಜನರು ಪ್ರತಿದಿನವು ಅರ್ಧ ಕಿಲೋ ಮೀಟರ್‌ಗಿಂತ ದೂರ ಹೋಗಿ ತರುತ್ತಿದ್ದಾರೆ.

ADVERTISEMENT

ಗ್ರಾಮದಲ್ಲಿ ಮೊದಲು ನಾಲ್ಕು ಕೊಳವೆ ಬಾವಿಗಳು ಇದ್ದವು. ಈಗ ಅವು ಕೆಟ್ಟು ಹೊಗಿವೆ. ಅವುಗಳನ್ನು ಸರಿಪಡಿಸಿಲ್ಲ. ಬಡವರಿಗೆ ಕುಡಿಯಲು ಬೇರೆ ಶುದ್ಧ ಕುಡಿಯುವ ನೀರು ಸಿಗದ ಕಾರಣ ಈಗ ಇರುವ ಒಂದೇ ಕೊಳವೆ ಬಾವಿಯಲ್ಲಿನ ಹಳದಿ ಬಣ್ಣದ ಕಲುಷಿತ ನೀರೆ ಗತಿಯಾಗಿದೆ.

ಸಮಸ್ಯೆ ಬಗೆಹರಿಸಲು ಜನಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಪಂದಿಸದಿದ್ದರೆ ಹೋರಾಟ ಮಾಡಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

**
ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಸಲು ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದೆ. ಆದರೆ, ಅಧಿಕಾರಿಗಳ ಆಸಕ್ತಿ ಕೊರತೆಯಿಂದಾಗಿ ಯೋಜನೆಗಳು ಅನುಷ್ಠಾನಗೊಳ್ಳುತ್ತಿಲ್ಲ.
-ರೇಣುಕಪ್ಪ ಕಲ್ಮಂಗಿ, ಮುಖಂಡ

*
ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ತುರ್ವಿಹಾಳ ಕೆರೆಯಿಂದ ಕುಡಿಯುವ ಶುದ್ಧ ನೀರು ಬಿಡುವಂತೆ ಗುತ್ತಿಗೆದಾರರಿಗೆ ಹಲವು ಬಾರಿ ತಿಳಿಸಲಾಗಿದೆ. ಭರವಸೆ ನೀಡುತ್ತಿದ್ದಾರೆ. ಆದರೆ, ಬಿಡುತ್ತಿಲ್ಲ.
-ಹನುಮಂತ ಕಲ್ಮಂಗಿ. ಗ್ರಾಮ ಪಂಚಾಯಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.