ADVERTISEMENT

ಕವಿತಾಳ: ತೀರದ ಕುಡಿಯುವ ನೀರಿನ ದಾಹ

ಮಂಜುನಾಥ ಎನ್ ಬಳ್ಳಾರಿ
Published 18 ಮೇ 2022, 4:38 IST
Last Updated 18 ಮೇ 2022, 4:38 IST
ಕವಿತಾಳದ 5ನೇ ವಾರ್ಡ್‌ನ ಪರಪ್ಪನ ಪ್ಲಾಟ್‌ನ ನಲ್ಲಿ ಮುಂದೆ ಸಾಲುಗಟ್ಟಿ ನಿಂತ ಮಹಿಳೆಯರು
ಕವಿತಾಳದ 5ನೇ ವಾರ್ಡ್‌ನ ಪರಪ್ಪನ ಪ್ಲಾಟ್‌ನ ನಲ್ಲಿ ಮುಂದೆ ಸಾಲುಗಟ್ಟಿ ನಿಂತ ಮಹಿಳೆಯರು   

ಕವಿತಾಳ: ಕೋಟ್ಯಾಂತರ ರೂಪಾಯಿ ವ್ಯಯಿಸಿ ಕೆರೆ ನಿರ್ಮಿಸಿದ್ದರೂ ಪಟ್ಟಣದ ಕೆಲವು ವಾರ್ಡ್‌ಗಳ ನಿವಾಸಿಗಳಿಗೆ ಈಗಲೂ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಆಗಿಲ್ಲ.

ವಾರ್ಡ್‌ ಸಂಖ್ಯೆ 6, 7 ಮತ್ತು 8ರ ಕೆಲವು ಮನೆಗಳಿಗೆ ಸಮರ್ಪಕವಾಗಿ ನೀರು ಸರಬರಾಜು ಆಗುತ್ತಿಲ್ಲ. ಎರಡು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಅದು ಕೂಡ ಬಳಕೆಗೆ ಸಾಕಾಗುವುದಿಲ್ಲ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

‘5ನೇ ವಾರ್ಡ್‌ನ ಪರಪ್ಪನ ಪ್ಲಾಟ್‌ನಲ್ಲಿ ಮೂರು ವರ್ಷಗಳಿಂದ ನೀರಿನ ಸಮಸ್ಯೆ ಕಾಡುತ್ತಿದೆ. ಈ ಬಗ್ಗೆ ಸ್ಥಳೀಯ ಆಡಳಿತಕ್ಕೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ನಿವಾಸಿ ಮಹಮದ್‍ ಪಾಶಾ ಆರೋಪಿಸಿದರು.

ADVERTISEMENT

ಪ್ರಗತಿಯಲ್ಲಿರುವ ಕಾಂಕ್ರಿಟ್‍ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಯಲ್ಲಿ ನೀರಿನ ಕೊಳವೆ ಮಾರ್ಗ ಮನೆಗಳಿಗೆ ಹೊಂದಿಕೊಂಡು ಹಾಕಬೇಕು. ಭವಿಷ್ಯದಲ್ಲಿ ಕೊಳವೆಗಳು ದುರಸ್ತಿ ಮತ್ತು ನಲ್ಲಿ ಸಂಪರ್ಕ ಪಡೆಯಲು ಅನುಕೂಲವಾಗುತ್ತದೆ ಎಂದು ಅಲ್ಲಮಪ್ರಭು ಹೇಳುತ್ತಾರೆ.

ಕೊಳವೆ ಮಾರ್ಗ ಅಳವಡಿಸಲಾಗುತ್ತಿದೆ. ನೀರಿನ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಸದಸ್ಯ ರುಕ್ಮುದ್ದೀನ್‍ ಭರವಸೆ.

ಹೊಸದಾಗಿ ನಿರ್ಮಿಸಿದ ಅತ್ಯಾಧುನಿಕ ಶೌಚಾಲಯಕ್ಕೆ ಸೇಪ್ಟಿ ಟ್ಯಾಂಕ್‍ ಮತ್ತು ನೀರಿನ ಸಂಪರ್ಕ ಕಲ್ಪಿಸಬೇಕು. ನಿವೇಶನಗಳ ಹಕ್ಕು ಪತ್ರ ವಿತರಣೆ, ನೀರು ಸರಬರಾಜು ಮತ್ತು ಗುಡ್ಡದ ಬಳಿ ತಡೆಗೋಡೆ ನಿರ್ಮಿಸುವ ಕೆಲಸ ತುರ್ತಾಗಿ ಆಗಬೇಕಿದೆ ಎಂದು 6ನೇ ವಾರ್ಡ್‌ ಸದಸ್ಯೆ ಅಂಬಮ್ಮ ಮ್ಯಾಗಳಮನಿ ಅವರ ಹೇಳಿಕೆ.

7ನೇ ವಾರ್ಡ್‌ನಲ್ಲಿ ಕೊಳವೆಭಾವಿ ಕೆಟ್ಟು ವರ್ಷಗಳೇ ಕಳೆದರೂ ಸ್ಥಳೀಯ ಆಡಳಿತ ದುರಸ್ತಿಗೆ ಮುಂದಾಗಿಲ್ಲ. ಶುದ್ದೀಕರಣ ಘಟಕ ಸ್ಥಗಿತವಾಗಿದ್ದರಿಂದ ಅಶುದ್ದ ನೀರು ಕುಡಿಯುವಂತಾಗಿದೆ’ ಎಂದು ನಿವಾಸಿಗಳು ಅಳಲು.

‘ಕೊಳವೆಭಾವಿ ಮತ್ತು ಶುದ್ಧೀಕರಣ ಘಟಕದ ದುರಸ್ತಿಗೆ ಮನವಿ ಮಾಡಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ’ ಎಂಬುದು ಸದಸ್ಯೆ ಯಲಿಜಾ ಒವಣ್ಣ ಅವರ ಸ್ಪಷ್ಟನೆ.

ಪೈಪ್‍ ಲೈನ್‍ ಅಳವಡಿಸಿದ ನಂತರ ಕಾಂಕ್ರಿಟ್ ರಸ್ತೆ ನಿರ್ಮಿಸಿದ್ದರಿಂದ ಪೈಪ್‌ಗಳ ದುರಸ್ತಿ ಆಗುತ್ತಿಲ್ಲ. ನೀರು ಸರಬರಾಜು ವ್ಯವಸ್ಥೆ ಹದಗೆಟ್ಟಿದೆ. ಚರಂಡಿ, ಕಾಂಕ್ರಿಟ್‌ ರಸ್ತೆ ನಿರ್ಮಾಣ, ನೀರು ಸರಬರಾಜು, ಶುದ್ಧೀಕರಣ ಘಟಕ ಸ್ಥಾಪನೆಯಂತಹ ಯೋಜನೆಗಳ ತಾರತಮ್ಯ ಸರಿಪಡಿಸಬೇಕು. ಆದರೆ, ಮುಖ್ಯಾಧಿಕಾರಿ ಸದಸ್ಯರ ಮಾತಿಗೆ ಕಿವಿಗೊಡುತ್ತಿಲ್ಲ’ ಎಂದು 8ನೇ ವಾರ್ಡ್ ಸದಸ್ಯೆ ಖಾಸೀಂಬೀ ಚಾಂದ್‍ ಪಾಶಾ ಅವರ ಆರೋಪ.

ಸ್ಥಳೀಯ ಚುನಾವಣೆಗಳು ಮುಗಿದು ಆರು ತಿಂಗಳು ಕಳೆದರೂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗಿಲ್ಲ. ಅಧಿಕಾರಿಗಳು ತಮ್ಮ ಮಾತಿಗೆ ಸ್ಪಂದಿಸುತ್ತಿಲ್ಲ. ಹೀಗಾಗಿ ಸಾರ್ವಜನಿಕರ ಸಮಸ್ಯೆಗಳ ನಿವಾರಣೆಗೆ ತೊಡಕಾಗಿದೆ ಎಂಬುದು ಸದಸ್ಯರ ಹೇಳಿಕೆ.

*
ಪ.ಪಂ ಮುಖ್ಯಾಧಿಕಾರಿ, ಎಂಜಿನಿಯರ್ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಅಧಿಕಾರಿಗಳಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ
–ಶಿವಕುಮಾರ ಮ್ಯಾಗಳಮನಿ, ವಕೀಲ

*
ನೀರಿನ ಸಮಸ್ಯೆ ನಿವಾರಣೆಗೆ ಅಧಿಕಾರಿಗಳು ಮುಂದಾಗಲಿ. ರಸ್ತೆ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡದೆ ನಿರ್ಲಕ್ಷ್ಯ ತೋರುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು
–ಅಲ್ಲಮಪ್ರಭು ಕವಿತಾಳ, ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.