ADVERTISEMENT

ಹನಿ ನೀರಾವರಿ ಯೋಜನೆ ಕಾಮಗಾರಿ ಸ್ಥಗಿತಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 29 ಮೇ 2022, 13:52 IST
Last Updated 29 ಮೇ 2022, 13:52 IST
ಎಚ್.ಬಿ ಮುರಾರಿ
ಎಚ್.ಬಿ ಮುರಾರಿ   

ಲಿಂಗಸುಗೂರು: ‘ರಾಜ್ಯದಲ್ಲಿ ಇಸ್ರೇಲ್‍ ಮಾದರಿ ಆಧಾರಿತ ಬಹುತೇಕ ಹನಿ ನೀರಾವರಿ ಯೋಜನೆಗಳ ವೈಫಲ್ಯತೆ ಕುರಿತಂತೆ ತಂತ್ರಜ್ಞರು ವರದಿ ಸಲ್ಲಿಸುತ್ತ ಬಂದಿದ್ದಾರೆ. ಕಾರಣ ಈಗ ಅಸ್ಥಿತ್ವದಲ್ಲಿರುವ ಹನಿ ನೀರಾವರಿ ಯೋಜನೆಗಳ ಕಾಮಗಾರಿ ಸ್ಥಗಿತಗೊಳಿಸಬೇಕು’ ಎಂದು ನಂದವಾಡಗಿ ಏತ ನೀರಾವರಿ ಯೋಜನೆ ಹಿರಿಯ ಹೋರಾಟಗಾರ ಎಚ್‍.ಬಿ ಮುರಾರಿ ಒತ್ತಾಯಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತವರು ಕ್ಷೇತ್ರದ ಸಿಗ್ಗಾವಿ ಹನಿ ನೀರಾವರಿ ಯೋಜನೆ ವೈಫಲ್ಯತೆ ಕುರಿತು ಪ್ರತಿಷ್ಠಿತ ಪತ್ರಿಕೆಗಳು ವರದಿ ಮಾಡಿವೆ. ಅಲ್ಲದೆ, ಮುಳವಳ್ಳಿ ಏತ ನೀರಾವರಿ ಮತ್ತು ರಾಮತ್ನಾಳ (ಮುರೋಳ) ಹನಿ ನೀರಾವರಿ ಯೋಜನೆಗಳು ವಿಫಲಗೊಂಡು ರೈತರ ಕನಸು ನುಚ್ಚು ನೂರು ಮಾಡಿವೆ‘ ಎಂದರು.

‘ಸ್ವಾತಂತ್ರ್ಯ ಹೋರಾಟಗಾರು, ಮಾಜಿ ಸೈನಿಕರು, ರೈತ ಪರ ಸಂಘಟನೆಗಳ ಸಹಯೋಗದಲ್ಲಿ ರಾಯಚೂರು ಜಿಲ್ಲೆ ನಂದವಾಡಗಿ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಜನಾಂದೋಲನ ನಡೆಸಲಾಗಿತ್ತು. ಹರಿ ನೀರಾವರಿ ಬದಲು ಹನಿ ನೀರಾವರಿ ಯೋಜನೆ ಆಗಿ ಪರಿವರ್ತಿಸಿ ಕೋಟ್ಯಂತರ ಹಣ ವ್ಯವ ಮಾಡುತ್ತಿದ್ದು ಕೂಡಲೆ ಕಾಮಗಾರಿ ಸ್ಥಗಿತಗೊಳಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

‘ಜಾಕವೆಲ್‍ ಕಾಮಗಾರಿ ಸೇರಿದಂತೆ ಮೂರು ಹಂತದ ರೇಸಿಂಗ್‍ ಪೈಪಲೈನ ಕಾಮಗಾರಿಗೆ ಟೆಂಡರ್‍ ಕರೆದಿದ್ದು ಅತ್ಯಂತ ಕಳಪೆ ಕಾಮಗಾರಿ ಕುರಿತು ಲೋಕಾಯುಕ್ತ ತನಿಖೆ ನಡೆಯುತ್ತಿದೆ. ಗುತ್ತಿಗೆದಾರರ ಮತ್ತು ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳ ಪರ್ಸೆಂಟೇಜ್‍ ಪೈಪೋಟಿಯಿಂದ ಹಣ ದುರ್ಬಳಕೆ ಆಗುತ್ತಿದೆ’ ಎಂದು ಆರೋಪಿಸಿದರು.

‘ಹನಿ ನೀರಾವರಿಯಿಂದ ಮುಳವಳ್ಳಿ ಏತ ನೀರಾವರಿ ಯೋಜನೆಯಿಂದ ಕೇವಲ 25ಸಾವಿರ ಹೆಕ್ಟೇರ್‌ ಜಮೀನಿಗೆ ನೀರು ಹರಿಸುವ ಕನಸು ಸಾಕಾರಗೊಂಡಿಲ್ಲ. ನಂದವಾಡಗಿ ಏತ ನೀರಾವರಿ ಹನಿ ನೀರಾವರಿಯಿಂದ 1.30 ಲಕ್ಷ ಹೆಕ್ಟೇರ್ ಜಮೀನಿಗೆ ನೀರು ಹರಿಸಲು ಹೇಗೆ ಸಾಧ್ಯ ಎಂಬುದು ಪ್ರಶ್ನೆಯಾಗಿದ್ದು ಯೋಜನೆ ಅನುಷ್ಠಾನ ಸ್ಥಗಿತಕ್ಕೆ ಜನಾಂದೋಲ ಕೈಗಳ್ಳಲಾಗುತ್ತಿದೆ’ ಎಂದರು.

‘ಇಸ್ರೆಲ್‍ ಮಾದರಿ ಹನಿ ನೀರಾವರಿ ಯೋಜನೆಗಳ ಅನುಷ್ಠಾನದ ವೈಫಲ್ಯತೆಯನ್ನು ಮರೆಮಾಚಲು ಸರ್ಕಾರ ರೈತರು ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ ಎಂದು ಸುಬಾಬು ಹೇಳಿಕೊಳ್ಳುತ್ತಿದೆ. ಅನುಭವಿ ಗುತ್ತಿಗೆದಾರರ ಕೊರತೆ, ಅವೈಜ್ಞಾನಿಕ ಕಾಮಗಾರಿಗಳಿಂದ ರಾಜ್ಯದಲ್ಲಿ ಹನಿ ನೀರಾವರಿ ಯೋಜನೆಗಳು ವಿಫಲಗೊಳ್ಳುತ್ತಿವೆ. ಕಾರಣ ನಂದವಾಡಗಿ ಹನಿ ನೀರಾವರಿ ಬದಲು ಹರಿ ನೀರಾವರಿ ಯೋಜನೆಯಾಗಿ ಬದಲಾಯಿಸಬೇಕು’ ಎಂದು ಆಗ್ರಹಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.