ADVERTISEMENT

ಸಿಂಧನೂರು: ವಿದ್ಯಾರ್ಥಿಯ ಮೇಲೆ ಚಾಲಕನಿಂದ ಹಲ್ಲೆ ಆರೋಪ

ಶಾಲೆಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 13:53 IST
Last Updated 4 ಜುಲೈ 2025, 13:53 IST
ಸಿಂಧನೂರಿನ ದಲಿತ ವಿದ್ಯಾರ್ಥಿ ಪರಿಷತ್ತಿನ ತಾಲ್ಲೂಕು ಘಟಕದ ಪದಾಧಿಕಾರಿಗಳು ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಅವರಿಗೆ ಮನವಿ ಸಲ್ಲಿಸಿದರು
ಸಿಂಧನೂರಿನ ದಲಿತ ವಿದ್ಯಾರ್ಥಿ ಪರಿಷತ್ತಿನ ತಾಲ್ಲೂಕು ಘಟಕದ ಪದಾಧಿಕಾರಿಗಳು ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಅವರಿಗೆ ಮನವಿ ಸಲ್ಲಿಸಿದರು   

ಸಿಂಧನೂರು: ತಾಲ್ಲೂಕಿನ ಗುಡದಮ್ಮ ಕ್ಯಾಂಪ್‌ನ ಶರಣಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಬಸ್ ಚಾಲಕ ಎರಡನೇ ತರಗತಿಯ ವಿದ್ಯಾರ್ಥಿ ನಿಖಿಲ್ ಮೇಲೆ ಹಲ್ಲೆ ಎಸಗಿರುವುದು ಖಂಡನೀಯ. ಕೂಡಲೇ ಶಾಲಾ ಆಡಳಿತ ಮಂಡಳಿ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ದಲಿತ ವಿದ್ಯಾರ್ಥಿ ಪರಿಷತ್ ತಾಲ್ಲೂಕು ಘಟಕದ ವತಿಯಿಂದ ಮಿನಿವಿಧಾನಸೌಧದ ಎದುರು ಪ್ರತಿಭಟನೆ ನಡೆಸಲಾಯಿತು.

ಬಳಿಕ ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಅವರಿಗೆ ಮನವಿ ಸಲ್ಲಿಸಿದರು.

‘ತಾಲ್ಲೂಕಿನ ಕುರುಕುಂದಾ ಗ್ರಾಮದ ಬಳಿ ಇರುವ ಗುಡದಮ್ಮ ಕ್ಯಾಂಪ್‌ನ ಶರಣಬಸವೇಶ್ವರ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2ನೇ ತರಗತಿ ಓದುತ್ತಿರುವ ಅಖಿಲ್ ಎನ್ನುವ ವಿದ್ಯಾರ್ಥಿ ಮನೆಯಿಂದ ಶಾಲೆಗೆ ಹೋಗಿ ಬಸ್ ಇಳಿಯುವ ಸಮಯದಲ್ಲಿ ಬಸ್ ಚಾಲಕ ಮೈಯೆಲ್ಲಾ ಬಾಸುಂಡೆ ಬರುವ ರೀತಿ ಥಳಿಸಿರುವುದು ಉದ್ದೇಶಪೂರ್ವಕ ಕೃತ್ಯವಾಗಿದೆ’ ಎಂದು ತಾಲ್ಲೂಕು ಘಟಕದ ಅಧ್ಯಕ್ಷ ದುರುಗೇಶ ಕಲಮಂಗಿ ಆಪಾದಿಸಿದರು.

ADVERTISEMENT

‘ಶಿಕ್ಷಣ, ಕ್ರೀಡೆ, ಸಾಮಾಜಿಕ ಚಟುವಟಿಕೆಗಳಲ್ಲಿ ಕೆಳ ಮತ್ತು ಶೋಷಿತ ಸಮುದಾಯಗಳ ವಿದ್ಯಾರ್ಥಿಗಳಿಗೆ ತಾರತಮ್ಯ ಮಾಡಲಾಗುತ್ತದೆ. ಪರಿಶಿಷ್ಟ ಜಾತಿ ಎನ್ನುವ ಕಾರಣಕ್ಕಾಗಿಯೇ ವಿದ್ಯಾರ್ಥಿ ಅಖಿಲ್ ಮೇಲೆ ಚಾಲಕ ಈಶಪ್ಪ ಕಾಸರಡ್ಡಿ ಹಲ್ಲೆ ಎಸಗಿದ್ದಾನೆ ಎಂದು ಪಾಲಕರೇ ಹೇಳುತ್ತಿದ್ದಾರೆ. ಆದ್ದರಿಂದ ಈ ಕೂಡಲೇ ಬಸ್ ಚಾಲಕನ ವಿರುದ್ಧ ಸ್ವಯಂ ದೂರು ದಾಖಲಿಸಿಕೊಳ್ಳಬೇಕು. ಶಾಲಾ ಆಡಳಿತ ಮಂಡಳಿ ವಿರುದ್ಧ ಜಾತಿ ದೌರ್ಜನ್ಯ ತಡೆ ಕಾಯ್ದೆ ಅನ್ವಯ ದೂರು ದಾಖಲಿಸಿ, ಶಾಲೆಯ ಮಾನ್ಯತೆ ರದ್ದು ಮಾಡಬೇಕು. ಇಲ್ಲದಿದ್ದರೆ ಜಿಲ್ಲೆಯಾದ್ಯಂತ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಜಿಲ್ಲಾ ಘಟಕದ ಉಪಾಧ್ಯಕ್ಷ ಚನ್ನಬಸವ ಯಾಪಲಪರ್ವಿ, ರೈತ ಮುಖಂಡ ಹನುಮಂತಪ್ಪ ಗೋಡಿಹಾಳ, ಸದಸ್ಯರಾದ ಬೇಗಂ, ವೀರೇಶ ದಿದ್ದಿಗಿ, ಜಂಬಣ್ಣ ಉಪಲದೊಡ್ಡಿ, ಶರಣಬಸವ ಸುಂಕನೂರ್, ರಮೇಶ ಬಸಾಪುರ ಹಾಗೂ ಶರಣಬಸವ ಬುಕನ್ನಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.