ADVERTISEMENT

ರಾಯಚೂರು | ಬತ್ತಿದ ಜಲಮೂಲ: ಕುಸಿದ ಅಂತರ್ಜಲ

ಚಂದ್ರಕಾಂತ ಮಸಾನಿ
Published 29 ಜನವರಿ 2024, 6:25 IST
Last Updated 29 ಜನವರಿ 2024, 6:25 IST
ಮಾನ್ವಿ ತಾಲ್ಲೂಕಿನಲ್ಲಿ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿದ ರಾಜಲಬಂಡಾ ಜಲಾಶಯ ಸಂಪೂರ್ಣ ಬತ್ತಿದೆ
ಮಾನ್ವಿ ತಾಲ್ಲೂಕಿನಲ್ಲಿ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿದ ರಾಜಲಬಂಡಾ ಜಲಾಶಯ ಸಂಪೂರ್ಣ ಬತ್ತಿದೆ   

ರಾಯಚೂರು: ಬರಗಾಲದಿಂದಾಗಿ ಜಿಲ್ಲೆಯಲ್ಲಿರುವ ತುಂಗಭದ್ರಾ ಹಾಗೂ ಕೃಷ್ಣಾ ನದಿಗಳು ಬತ್ತಿವೆ. ಕುಡಿಯುವ ನೀರಿಗಾಗಿಯೇ ನಿರ್ಮಿಸಿದ ಬ್ಯಾರೇಜ್‌ಗಳಲ್ಲಿ ಮಾತ್ರ ನೀರಿದೆ. ಕೆರೆ, ಹಳ್ಳಕೊಳ್ಳಗಳು ನೀರಿಲ್ಲದೇ ಭಣಗೊಡುತ್ತಿದ್ದು, ಅಂತರ್ಜಲವೂ ಕುಸಿಯ ತೊಡಗಿದೆ.

ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ 28,345, ಸಣ್ಣ ನೀರಾವರಿ ಇಲಾಖೆ ಅಧೀನದಲ್ಲಿ 3,757 ಕೆರೆಗಳು, ಜಲ ಸಂಪನ್ಮೂಲ ಇಲಾಖೆಯ ವ್ಯಾಪ್ತಿಯಲ್ಲಿ 2,082 ಕೆರೆಗಳು, ನಗರಾಭಿವೃದ್ಧಿ ಇಲಾಖೆಯ ವ್ಯಾಪ್ತಿಯಲ್ಲಿ 294 ಹಾಗೂ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ 4 ಕೆರೆಗಳು ಇವೆ. ಇವುಗಳಲ್ಲಿ ಅರ್ಧದಷ್ಟು ಕೆರೆಗಳು ಆಗಲೇ ಬತ್ತಿವೆ. ಇನ್ನುಳಿದ ಕೆರೆಗಳಲ್ಲೂ ನಿಧಾನ ನೀರು ಕಡಿಮೆಯಾಗ ತೊಡಗಿದೆ.

ಜಿಲ್ಲಾ ಅಂತರ್ಜಲ ಇಲಾಖೆ ಅಧೀನದಲ್ಲಿ ಜಿಲ್ಲೆಯಲ್ಲಿ 31 ಕೊಳವೆಬಾವಿ ಹಾಗೂ 32 ತೆರೆದ ಬಾವಿಗಳು ಸೇರಿ ಒಟ್ಟು 63 ಅಧ್ಯಯನ ಬಾವಿಗಳಿವೆ. 41 ಬಾವಿಗಳಲ್ಲಿ ಪ್ರತಿತಿಂಗಳು ಪರೀಕ್ಷೆ ನಡೆಸಲಾಗುತ್ತಿದೆ. 26 ಅಧ್ಯಯನ ಕೊಳವೆಬಾವಿಗಳಿಗೆ ಸ್ವಯಂ ಚಾಲಿತ ಅಂತರ್ಜಲ ದಾಖಲಿಸುವ (ಡಿಡಬ್ಲೂಎಲ್‌ಆರ್) ತಂತ್ರಾಂಶ ಅಳವಡಿಸಲಾಗಿದೆ. ಜಿಲ್ಲಾ ಅಂತರ್ಜಲ ಕಚೇರಿಯ ಸಿಬ್ಬಂದಿ ಮಾಪನ ಕಾರ್ಯವನ್ನು ಮಾಡುತ್ತಿದ್ದಾರೆ. ಇದೀಗ 38 ಬಾವಿಗಳಲ್ಲಿ ಅಂತರ್ಜಲ ಇಳಿಕೆಯಾಗಿರುವುದು ದೃಢ ಪಟ್ಟಿದೆ.

ADVERTISEMENT

ಲಿಂಗಸುಗೂರು, ಮಸ್ಕಿ, ಸಿಂಧನೂರು, ಮಾನ್ವಿ ಹಾಗೂ ರಾಯಚೂರು ತಾಲ್ಲೂಕುಗಳಲ್ಲೇ ಅಂತರ್ಜಲ ಮಟ್ಟ ಸರಾಸರಿ ಒಂದು ಮೀಟರ್‌ ಆಳಕ್ಕೆ ಕುಸಿದೆ.

ದೇವದುರ್ಗ ತಾಲ್ಲೂಕಿನಲ್ಲಿ ಅತಿ ಹೆಚ್ಚು ಕೊಳವೆಬಾವಿಗಳು ಇವೆ. ಕಾಲುವೆ ನೀರನ್ನು ನಿರಂತರವಾಗಿ ಬಳಸುತ್ತಿರುವ ಕಾರಣ ಅಂತರ್ಜಲ ಮಟ್ಟ ಇಳಿದಿರುವುದು ಅಷ್ಟಾಗಿ ಕಂಡು ಬಂದಿಲ್ಲ. ಆದರೆ, ಬೇಸಿಗೆಯಲ್ಲಿ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.

ಸರ್ಕಾರಿ ಅಂಕಿಅಂಶಗಳನ್ನು ಪರಿಶೀಲಿಸಿದಾಗ ರಾಯಚೂರು ತಾಲ್ಲೂಕು ನಿರಂತರವಾಗಿ ಸಮಸ್ಯೆ ಎದುರಿಸುತ್ತ ಬಂದಿದೆ. ರಾಯಚೂರು ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ 2019ರಲ್ಲಿ 14.61 ಮೀಟರ್‌ ಆಳಕ್ಕೆ ಕುಸಿದಿತ್ತು. 2020ರಲ್ಲಿ 10.05 ಮೀಟರ್‌, 2021ರಲ್ಲಿ 6.95 ಮೀಟರ್‌, 2022ರಲ್ಲಿ4.90 ಮೀಟರ್‌ ಆಳಕ್ಕೆ ಅಂತರ್ಜಲ ಮಟ್ಟ ಇಳಿದಿತ್ತು. 2023ರ ಡಿಸೆಂಬರ್‌ನಲ್ಲಿ 6.15 ಮೀಟರ್‌ ಆಳಕ್ಕೆ ಅಂತರ್ಜಲ ಕುಸಿದಿದೆ.

ಜಿಲ್ಲೆಯ ತಾಲ್ಲೂಕುಗಳ ಸಾಲಿನಲ್ಲಿ ಮಸ್ಕಿ ಮೊದಲ ಸ್ಥಾನದಲ್ಲಿದೆ. ಮಸ್ಕಿ ತಾಲ್ಲೂಕಿನಲ್ಲಿ 6.15 ಮೀಟರ್, ಲಿಂಗಸುಗೂರು ತಾಲ್ಲೂಕಿನಲ್ಲಿ 5.68 ಮೀಟರ್‌, ದೇವದುರ್ಗದಲ್ಲಿ 5.33 ಮೀಟರ್‌, ರಾಯಚೂರಲ್ಲಿ 5.37 ಮೀಟರ್‌, ಮಾನ್ವಿಯಲ್ಲಿ 4.81 ಮೀಟರ್ ಹಾಗೂ ಸಿರವಾರದಲ್ಲಿ 4.66 ಮೀಟರ್‌ ಆಳದಲ್ಲಿ ಅಂತರ್ಜಲ ಇಳಿದಿದೆ. ಈಗಾಗಲೇ ಜಿಲ್ಲಾ ಅಂತರ್ಜಲ ಕಚೇರಿಯ ಹಿರಿಯ ಭೂವಿಜ್ಞಾನಿಗಳು ಸಿರವಾರ ತಾಲ್ಲೂಕನ್ನು ಕ್ಲಿಷ್ಟಕರ ವರ್ಗದಲ್ಲಿ ಗುರುತಿಸಿದ್ದಾರೆ ಎಂದು ಜಿಲ್ಲಾ ಅಂತರ್ಜಲ ಇಲಾಖೆಯ ಹಿರಿಯ ಭೂವಿಜ್ಞಾನಿ ಕೃಷ್ಣಾ ಹೇಳುತ್ತಾರೆ.

ದೇವದುರ್ಗ ತಾಲ್ಲೂಕಿನ ಮಸರಕಲ್, ಗಬ್ಬೂರ, ಜಾಲಹಳ್ಳಿ, ಗಲಗ, ಕೋತಿಗುಡ್ಡ, ಅರಕೇರಾ, ರೇಕಲಮರಡಿ, ದೇವದುರ್ಗ ಪಟ್ಟಣ, ಲಿಂಗಸುಗೂರು ತಾಲ್ಲೂಕಿನ ಮುದಗಲ್, ಹಟ್ಟಿ. ನೀರಲಕೇರಾ, ಲಿಂಗಸುಗೂರು, ಮಸ್ಕಿ ಪಟ್ಟಣ, ಮಸ್ತಿ ತಾಲ್ಲೂಕಿನ ಶಾಂತಲಗೇರಾ, ಅಂಕುಶದೊಡ್ಡಿ, ನಾಗಲಾಪುರ, ಪಾಮನಕಲ್ಲೂರು, ಮಾನ್ವಿ, ಮಾನ್ವಿ ತಾಲ್ಲೂಕಿನ ಪೋತನಾಳ, ಹಿರೇಕೋಟ್ನೆಕಲ್, ಸಿರವಾರ, ಸಿರವಾರ ತಾಲ್ಲೂಕಿನ ಚಿಂಚರಕಿ, ಮಲ್ಲಟ, ಕವಿತಾಳ, ಕಲ್ಲೂರು, ರಾಯಚೂರು ತಾಲ್ಲೂಕಿನ ಕಲ್ಮಲಾ, ಹಂಚಿನಾಳ, ಮಟಮಾರಿ, ಜಂಬಲದಿನ್ನಿ, ದೇವಸುಗೂರು, ತುಂಟಾಪುರ ಎಚ್‌ಪಿ, ಯರಮರಸ್, ಯಾಪಲದಿನ್ನಿ, ಸಿಂಧನೂರು ನಗರ, ಸಿಂಧನೂರು ತಾಲ್ಲೂಕಿನ ಮುಳ್ಳೂರು, ಜವಳಗೇರಾ ಹಾಗೂ ಗೊರೆಬಾಳದಲ್ಲಿ ಅಂತರ್ಜಲ ಮಟ್ಟ ಪರೀಕ್ಷೆ ನಡೆಸಲಾಗಿದೆ.

ಅರಕೇರಾದಲ್ಲಿ ಅತಿ ಹೆಚ್ಚು 17.7 ಮೀಟರ್ ಭೂಮಿ ಆಳದಲ್ಲಿ ನೀರು ಕುಸಿದಿದೆ. ಮಸ್ಕಿಯಲ್ಲಿ 12.25 ಮೀಟರ್, ಹಟ್ಟಿಯಲ್ಲಿ 11.5 ಮೀಟರ್, ಲಿಂಗಸುಗೂರು ಹಾಗೂ ಜಂಬಲದಿನ್ನಿಯಲ್ಲಿ 8.95 ಮೀಟರ್, ಮುಳ್ಳೂರಲ್ಲಿ 7.75 ಮೀಟರ್, ಜವಳಗೇರಾದಲ್ಲಿ 7.65 ಮೀಟರ್, ಮಾನ್ವಿಯಲ್ಲಿ 7.35 ಮೀಟರ್, ಯಾಪಲದಿನ್ನಿಯಲ್ಲಿ 7.05 ಮೀಟರ್, ಪೋತನಾಳದಲ್ಲಿ 6.65 ಮೀಟರ್, ಅಂಕುಶದೊಡ್ಡಿಯಲ್ಲಿ 6.35 ಮೀಟರ್ ಆಳಕ್ಕೆ ಅಂತರ್ಜಲ ಕುಸಿದು ಜನರಲ್ಲಿ ಆತಂಕ ಸೃಷ್ಟಿಸಿದೆ.

‘ನದಿ ದಂಡೆಗಳಲ್ಲಿರುವ ಲಿಂಗಸುಗೂರು, ಮಸ್ಕಿ ಹಾಗೂ ಮಾನ್ವಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ರಾಜಲಬಂಡಾ ಜಲಾಶಯದಲ್ಲಿ ಒಂದಿಷ್ಟೂ ನೀರಿಲ್ಲ. ನದಿಯೊಳಗಿನ ಬಂಡೆಗಲ್ಲುಗಳು ಎದ್ದು ಕಾಣುತ್ತಿವೆ’ ಎಂದು ರಾಯಚೂರು ಜಿಲ್ಲಾ ಕೆರೆ ಬಳಕೆದಾರ ಸಂಘದ ಅಧ್ಯಕ್ಷ ಬಿ.ಎಸ್‌.ಪಾಟೀಲ ಹೇಳುತ್ತಾರೆ.

ಕೊಳವೆಬಾವಿ ಕೊರೆಸಲು ಅನುಮತಿ ಕಡ್ಡಾಯ

ಕೈಗಾರಿಕೆ, ವಾಣಿಜ್ಯ, ಮನೋರಂಜನೆಗಾಗಿ ಹಾಗೂ ಮೂಲಸೌಕರ್ಯ ಅಭಿವೃದ್ದಿಗೆ ಅಂತರ್ಜಲ ಬಳಸಲು ಜಿಲ್ಲಾ ಅಂತರ್ಜಲ ಕಚೇರಿಯಿಂದ ಅನುಮತಿ ಕಡ್ಡಾಯವಾಗಿದೆ.

‘ನಿವೇಶನ ಅಥವಾ ಕೃಷಿ ಜಮೀನುಗಳಲ್ಲಿ ಕೊಳವೆಬಾವಿ ಕೊರೆಸಲು 15 ದಿನಗಳ ಮುಂಚಿತವಾಗಿಯೇ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿ ಅಥವಾ ಪಂಚಾಯಿತಿ ಪಿಡಿಒಗಳಿಂದ ಅನುಮತಿ ಪಡೆಯಬೇಕು’ ಎಂದು ಜಿಲ್ಲಾ ಅಂತರ್ಜಲ ಇಲಾಖೆಯ ಹಿರಿಯ ಭೂವಿಜ್ಞಾನಿ ಕೃಷ್ಣಾ ಹೇಳುತ್ತಾರೆ

ರಾಯಚೂರು ಜಿಲ್ಲೆಯಲ್ಲಿ 14 ರಿಗ್‌ ವಾಹನಗಳು ನೋಂದಣಿ ಮಾಡಿಕೊಂಡಿವೆ. ಕರ್ನಾಟಕ ಅಂತರ್ಜಲ ಪ್ರಾಧಿಕಾರದಲ್ಲಿ ನೋಂದಣಿಯಾದ ಏಜೆನ್ಸಿಗಳಿಂದ ಮಾತ್ರ ಕೊಳವೆಬಾವಿ ಕೊರೆಸಬೇಕು. ಆದರೆ, ಕೆಲವರು ಆಂಧ್ರಪ್ರದೇಶದ ಏಜೆನ್ಸಿಗಳಿಂದ ರಾತ್ರೋರಾತ್ರಿ ಕೊಳವೆಬಾವಿ ತೋಡಿಸುತ್ತಿವೆ. ಇದು ಆತಂಕಕ್ಕೆ ಕಾರಣವಾಗಿದೆ.

ದೇವದುರ್ಗ ತಾಲ್ಲೂಕಿನ ನಾರಾಯಣ ನಾಯಕ ತಾಂಡಾದಲ್ಲಿನ ಕೆರೆ ಬೇಸಿಗೆ ಮುನ್ನವೇ ಬತ್ತಿದೆ
ರಾಯಚೂರು ತಾಲ್ಲೂಕಿನ ಮಂಡಲಗೇರಾ ಕೆರೆ ಸಂಪೂರ್ಣ ಒಣಗಿದೆ
ಕವಿತಾಳ ಸಮೀಪದ ಹಿರೇಹಣಿಗಿ ಗ್ರಾಮದಲ್ಲಿ ಜಾನುವಾರುಗಳ ಕುಡಿಯುವ ನೀರಿನ ತೊಟ್ಟಿ ಒಣಗಿರುವುದು
ಲಿಂಗಸುಗೂರು ತಾಲ್ಲೂಕಿನ ಮಾಚನೂರು ಗ್ರಾಮದಲ್ಲಿರುವ ಕೆರೆಗೆ ನೀರು ತುಂಬಿಸಲಾಗಿದೆ
ಕೊಳವೆಬಾವಿ ಕೊರೆಯುತ್ತಿರುವುದು  ಸಾಂದರ್ಭಿಕ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.