
ಸಿಂಧನೂರು: ‘ಪ್ರತಿವರ್ಷ ರಾಜ್ಯ ಸರ್ಕಾರ ಬಜೆಟ್‍ನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ₹5 ಸಾವಿರ ಕೋಟಿ ನೀಡುತ್ತಿದ್ದು, ಅದರಲ್ಲಿ ₹750 ಕೋಟಿ ಹಣವನ್ನು ಶಿಕ್ಷಣ ಇಲಾಖೆಗೆ ಖರ್ಚು ಮಾಡಲಾಗುತ್ತಿದೆ’ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ತಾಲ್ಲೂಕಿನ ಪಗಡದಿನ್ನಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಯರಮರಸ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಂಪನ್ಮೂಲ ಕೇಂದ್ರ ಸಿಂಧನೂರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆ ಪಗಡದಿನ್ನಿ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾಥಿಗಳಿಗೆ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ-2025-26 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಾಲ್ಲೂಕಿಗೆ 11 ಕರ್ನಾಟಕ ಪಬ್ಲಿಕ್ ಶಾಲೆಗಳು ಮಂಜೂರಾಗಿದ್ದು, ರೂ.65 ಕೋಟಿ ವೆಚ್ಚದಲ್ಲಿ ಮಾದರಿ ಶಾಲೆಗಳ ನಿರ್ಮಾಣಕ್ಕಾಗಿ ಡಿಪಿಆರ್ ತಯಾರಿಸಿ ಒಳ್ಳೆಯ ಕನ್ಸಲಟೆನ್ಸಿಗೆ ನೀಡಲು ಶಿಕ್ಷಣ ಇಲಾಖೆಯ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಚರ್ಚಿಸಲಾಗಿದೆ ಎಂದರು.
ಈ 11 ಶಾಲೆಗಳು ಎಲ್‍ಕೆಜಿಯಿಂದ ದ್ವಿತೀಯ ಪಿಯುಸಿವರೆಗೆ ಒಂದೇ ಸೂರಿನಡಿ ಎರಡು ಸಾವಿರ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಮೂಲಸೌಕರ್ಯ ಒದಗಿಸುವ ಉದ್ದೇಶವಿದೆ. ಜೊತೆಗೆ ಅವಶ್ಯಕತೆ ಇರುವ ಗ್ರಾಮಗಳಿಗೆ ಕ್ರೀಡಾಂಗಣ, ಶಾಲೆಗಳಿಗೆ ವಿಜ್ಞಾನ ಮತ್ತು ಕಂಪ್ಯೂಟರ್ ಲ್ಯಾಬೋಟರಿ ನಿರ್ಮಾಣ, ಪೀಠೋಪಕರಣ, ಶುದ್ಧ ಕುಡಿಯುವ ನೀರು, ಶೌಚಾಲಯ ನಿರ್ಮಾಣ ಮತ್ತು ತರಬೇತಿ ಹೊಂದಿದ ಶಿಕ್ಷಕರ ನೇಮಕಾತಿಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಮೂರುಮೈಲ್ ಕ್ಯಾಂಪಿನ ರಂಭಾಪುರಿ ಖಾಸಾಶಾಖಾ ಮಠದ ಸೋಮನಾಥ ಶಿವಾಚಾರ್ಯ, ಯದ್ದಲದೊಡ್ಡಿಯ ಮಹಾಲಿಂಗ ಮಹಾಸ್ವಾಮಿ, ವೆಂಕಟಗಿರಿ ಕ್ಯಾಂಪಿನ ಸದಾನಂದ ಶರಣರು, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಆರ್‍ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಸವಲಿಂಗಪ್ಪ, ಬಿಸಿಯೂಟ ಯೋಜನೆಯ ಸಹಾಯಕ ನಿರ್ದೇಶಕ ಸಾಬಣ್ಣ ವಗ್ಗರ್, ಇಸಿಓ ಕುಮಾರಸ್ವಾಮಿ, ಸಿಆರ್‍ಪಿ ಷಣ್ಮುಖಗೌಡ, ಅನುದಾನಿತ ಶಾಲೆಗಳ ಶಿಕ್ಷಕರ ಸಂಘದ ಅಧ್ಯಕ್ಷ ತಿರುಪತಿ ನಾಯಕ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ವಿಠಲ್, ಎನ್‍ಪಿಎಸ್ ನೌಕರರ ಸಂಘದ ಅಧ್ಯಕ್ಷ ದುರುಗಪ್ಪ ಗುಡದೂರು, ಜಿಪಿಟಿ ಅಧ್ಯಕ್ಷ ಹನುಮೇಶ, ಕಾರ್ಯಾಧ್ಯಕ್ಷ ಚಿದಾನಂದ ಪಾಟೀಲ್, ಮುಖ್ಯಶಿಕ್ಷರಾದ ಪರಸಪ್ಪ, ಗಿರಿಜಾ ಸೇರಿದಂತೆ ಎಸ್‍ಡಿಎಂಸಿ ಅಧ್ಯಕ್ಷರು, ಸದಸ್ಯರು, ವಿವಿಧ ಶಾಲೆಗಳ ಮುಖ್ಯಶಿಕ್ಷಕರು, ಗ್ರಾ.ಪಂ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು. ಆದೇಶ ತಿಡಿಗೋಳ ನಿರೂಪಿಸಿದರು.