
ರಾಯಚೂರು: ಹೊಸ ಏಕಲವ್ಯ ಮಾದರಿ ವಸತಿ ಶಾಲೆ (ಇಎಂಆರ್‌ಎಸ್) ಸ್ಥಾಪನೆಗೆ ಸಂಬಂಧಿಸಿದ ಅರ್ಹತಾ ಮಾನದಂಡಗಳಲ್ಲಿ ಸಡಿಲಿಕೆ ಮಾಡಬೇಕು ಎಂದು ಒತ್ತಾಯಿಸಿ ಸಂಸದ ಜಿ.ಕುಮಾರ ನಾಯಕ ಅವರು ಕೇಂದ್ರ ಬುಡಕಟ್ಟು ವ್ಯವಹಾರ ಸಚಿವಾಲಯದ ಕಾರ್ಯದರ್ಶಿ ವಿಭು ನಾಯರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಅವರು ಸಹ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ರಂಜನಾ ಚೋಪ್ರಾ ಅವರಿಗೆ ಪತ್ರ ಬರೆದಿದ್ದಾರೆ. ಸಂಸದ ಜಿ.ಕುಮಾರ ನಾಯಕ ಅವರ ಮನವಿಗೆ ನಾನು ಸಂಪೂರ್ಣ ಬೆಂಬಲ ನೀಡುತ್ತೇನೆ. ಕರ್ನಾಟಕದಲ್ಲಿ ಹೊಸ ಏಕಲವ್ಯ ಮಾದರಿ ವಸತಿ ಶಾಲೆಗಳ ಸ್ಥಾಪನೆಗಾಗಿ ತಕ್ಷಣವೇ ಮಾರ್ಗಸೂಚಿಗಳಲ್ಲಿ ಸಡಿಲಿಕೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಕೋರುತ್ತೇನೆ ಎಂದು ಉಲ್ಲೇಖಿಸಿದ್ದಾರೆ.
ಕರ್ನಾಟಕದಲ್ಲಿ 20,000ಕ್ಕಿಂತ ಹೆಚ್ಚು ಪರಿಶಿಷ್ಟ ಪಂಗಡ ಸಮುದಾಯದ ಜನಸಂಖ್ಯೆ ಹೊಂದಿರುವ 68 ಬ್ಲಾಕ್‌ಗಳಿವೆ. ಆದರೆ, ಇವು ಹೊಸದಾಗಿ ಪರಿಷ್ಕರಿಸಲಾದ ಮಾರ್ಗಸೂಚಿಗಳನ್ನು ಪೂರೈಸುವುದಿಲ್ಲ. ಇದರಿಂದಾಗಿ ಈ ಸಮುದಾಯಗಳು ಗುಣಮಟ್ಟದ ಶಿಕ್ಷಣದಿಂದ ವಂಚಿತಗೊಳ್ಳುತ್ತಿವೆ ಎಂದು ಹೇಳಿದ್ದಾರೆ.
2011ರ ಜನಗಣತಿಯ ಪ್ರಕಾರ, ರಾಜ್ಯದ ಐದು ಭೌಗೋಳಿಕ ವಲಯಗಳಾದ 22 ಜಿಲ್ಲೆಗಳು ಮತ್ತು 70 ವಿಧಾನಸಭಾ ಕ್ಷೇತ್ರಗಳಲ್ಲಿ ಎಸ್‌ಟಿ ಜನಸಾಂದ್ರತೆ ಹೆಚ್ಚಿನ ಪ್ರಮಾಣದಲ್ಲಿದೆ. ಈ ಸಮುದಾಯ ಮತ್ತು ಇತರ ಅತ್ಯಂತ ಹಿಂದುಳಿದ ಸಮುದಾಯಗಳ ಸಾಮಾಜಿಕ, ಆರ್ಥಿಕ ಸ್ಥಿತಿ ಸುಧಾರಣೆಯಾಗದೆ ಕರ್ನಾಟಕ ತನ್ನ ನಿಜವಾದ ಸಾಮರ್ಥ್ಯವನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಮನವಿಯಲ್ಲಿ ಉಲ್ಲೇಖ ಮಾಡಿದ್ದಾರೆ.
ಮಾರ್ಗಸೂಚಿಗಳ ಸಡಿಲಿಕೆ ಮೂಲಕ ಕರ್ನಾಟಕದ ಹೆಚ್ಚಿನ ಎಸ್‌ಟಿ ಸಮುದಾಯದ ವಿದ್ಯಾರ್ಥಿಗಳು ಹೊಸ ಏಕಲವ್ಯ ಮಾದರಿ ವಸತಿ ಶಾಲೆ ಮುಖಾಂತರ ಗುಣಮಟ್ಟದ, ಸಮಗ್ರ ಶಿಕ್ಷಣ ಪಡೆಯಲು ಅವಕಾಶ ಸಿಗುತ್ತದೆ. ನಿಯಮ ಬದಲಾವಣೆ ಅತೀ ತುರ್ತು ಮತ್ತು ಅಗತ್ಯವಾದ ವಿಷಯವಾಗಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.