ADVERTISEMENT

ಹಾಸ್ಮಿಯಾ ಮನೆಗಳ ತೆರವು ಕಾರ್ಯಾಚರಣೆ ಕಾನೂನು ಬಾಹಿರ: ಮಹೇಂದ್ರಕುಮಾರ ಮಿತ್ರ

​ಪ್ರಜಾವಾಣಿ ವಾರ್ತೆ
Published 23 ಮೇ 2025, 15:50 IST
Last Updated 23 ಮೇ 2025, 15:50 IST
ಮಹೇಂದ್ರಕುಮಾರ ಮಿತ್ರ
ಮಹೇಂದ್ರಕುಮಾರ ಮಿತ್ರ    

ರಾಯಚೂರು: 'ಇಲ್ಲಿಯ ಹಾಸ್ಮಿಯಾ ಮೈದಾನದ ವಕ್ಫ್ ಮಂಡಳಿಯ ಜಾಗದಲ್ಲಿ ವಾಸವಾಗಿದ್ದ 34 ಅನಧಿಕೃತ ಮನೆಗಳ ತೆರವು ಕಾರ್ಯಾಚರಣೆ ಕಾನೂನು ಬಾಹಿರವಾಗಿದೆ' ಎಂದು ಡಾ. ಬಿ.ಆರ್ ಅಂಬೇಡ್ಕರ್ ಪರಿಶಿಷ್ಟ ಜಾತಿಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ವಕೀಲ ಮಹೇಂದ್ರಕುಮಾರ ಮಿತ್ರ ದೂರಿದರು.

'ಸುಮಾರು ವರ್ಷಗಳಿಂದ ಅಲ್ಲಿನ ನಿವಾಸಿಗಳು ಮನೆಗಳನ್ನು ಕಟ್ಟಿಕೊಂಡು ವಾಸವಾಗಿದ್ದಾರೆ. ತೆರವು ಮಾಡುವ ಮುಂಚೆ 45 ದಿನಗಳ ಕಾಲಾವಕಾಶ ನೀಡಬೇಕಿತ್ತು ಹಾಗೂ ಮೂರು ನೋಟೀಸ್ ನೀಡದೇ ತೆರವು ಮಾಡಲಾಗಿದೆ. ಅನೇಕ ವರ್ಷಗಳ ಕಾಲ ನ್ಯಾಯಾಲಯದಲ್ಲಿ ವಾದ ವಿವಾದ ನಡೆದಿದ್ದು, ಬುಧವಾರ ಏಕಾಏಕಿ ತೆರವು ಮಾಡಿದ್ದಾರೆ' ಎಂದು ಶುಕ್ರವಾರ ಮಾಧ್ಯಮಗೊಷ್ಠಿಯಲ್ಲಿ ಅಸಮಾಧಾನ ಹೊರಹಾಕಿದರು.

'1998 ಫೆಬ್ರುವರಿ 5ರ ರಿಂದ ಹೈಕೋರ್ಟ್ ಆದೇಶದ ಅನ್ವಯ ಹಾಸ್ಮಿಯಾ ಮಸೀದಿ ಮೈದಾದನಲ್ಲಿ ವಾಸಮಾಡುತ್ತಿರುವ 34 ಕುಟುಂಬಗಳು ಅಧಿಕೃತ ನಿವಾಸಿಗಳಾಗಿದ್ದಾರೆ. ಕರ್ನಾಟಕ ಸಾರ್ವಜನಿಕ ಆವರಣ ( ಅನಧಿಕೃತ ನಿವಾಸಿಗಳ ತೆರವು) 1974ರ ಕಾಯ್ದೆಯೂ ಇಲ್ಲಿನ ನಿವಾಸಿಗಳಿಗೆ ಅನ್ವಯ ವಾಗುವುದಿಲ್ಲ, ಹೀಗಾಗಿ ನಿವಾಸಿಗಳ ಮನೆಗಳ ತೆರವು ಕಾನೂನು‌ ಬಾಹೀರವಾಗಲಿದೆ' ಎಂದು ದೂರಿದರು.

ADVERTISEMENT

'ಹಾಸ್ಮಿಯಾ ನಿವಾಸಿಗಳ ಮನೆಗಳ ತೆರವು ಮಾಡುವ ಮುಂಚೆ ರಾಯಚೂರು ತಹಶೀಲ್ದಾರ್ ನನಗೆ ನೀಡಿದ ವಕ್ಫ್ ಮಂಡಳಿಯ ಆದೇಶದ ಪ್ರತಿ ಸತ್ತವರ ವಿರುದ್ಧ ಹೊರಡಿಸಿದ ಆದೇಶವಾಗಿದೆ. ಈಗ ವಾಸವಾಗಿರುವ ಹೆಸರಿನಲ್ಲಿ ಇರಲಿಲ್ಲ.‌ ಅಧಿಕಾರಿಗಳು ತರಾತುರಿಯಲ್ಲಿ ಪೊಲೀಸ್ ಬಂದೋಬಸ್ತ್ ನೊಂದಿಗೆ ತೆರವು ಮಾಡಿದ್ದು, ಅನೇಕ ಕಾನೂನು ನಿಯಮಗಳ ಲೋಪವೆಸಗಿದ್ದಾರೆ ಹಾಗೂ ದೌರ್ಜನ್ಯದಿಂದ ತೆರವು ಮಾಡಿದ್ದಾರೆ' ಎಂದು ಆರೋಪ ಮಾಡಿದರು.

'ಸಂತ್ರಸ್ತರು ಮಹಿಳಾ ಆಯೋಗ, ಮಾನವ ಹಕ್ಕುಗಳ ಆಯೋಗ ಹಾಗೂ ಹೈಕೋರ್ಟ್ ಆದೇಶ ಉಲ್ಲಂಘನೆ ಮಾಡಿದ್ದರಿಂದ ನ್ಯಾಯಾಂಗ ನಿಂದನೆ ದಾವೆ ಹೂಡಲು ಅವಕಾಶ ಇದೆ‘ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹುಸೇನ್ ಬಾಷಾ ಪಲಕನಮರಡಿ, ನರಸಿಂಹಲು ಪೋತಗಲ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.