ADVERTISEMENT

’ವಿಮಾನ ನಿಲ್ದಾಣಕ್ಕೆ ಸೂಕ್ತ ಜಾಗದ ನಿರ್ಧಾರ’

ವಿಮಾನ ತಜ್ಞರ ತಂಡದಿಂದ ವಿವಿಧ ಸ್ಥಳಗಳ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2019, 15:36 IST
Last Updated 30 ನವೆಂಬರ್ 2019, 15:36 IST
ರಾಯಚೂರಿನ ಯರಮರಸ್‌ ಬಳಿ ವಿಮಾನ ನಿಲ್ದಾಣಕ್ಕಾಗಿ ಕಾಯ್ದಿರಿಸಿದ ಜಾಗಕ್ಕೆ ಕೆ.ಎಸ್.ಐ.ಐ.ಡಿ.ಸಿ ವಿಮಾನಯಾನ ತಜ್ಞ ಕ್ಯಾ. ಎನ್. ಶಾಮಂತ ಹಾಗೂ ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಶನಿವಾರ ಭೇಟಿ ನೀಡಿ ಪರಿಶೀಲಿಸಿದರು
ರಾಯಚೂರಿನ ಯರಮರಸ್‌ ಬಳಿ ವಿಮಾನ ನಿಲ್ದಾಣಕ್ಕಾಗಿ ಕಾಯ್ದಿರಿಸಿದ ಜಾಗಕ್ಕೆ ಕೆ.ಎಸ್.ಐ.ಐ.ಡಿ.ಸಿ ವಿಮಾನಯಾನ ತಜ್ಞ ಕ್ಯಾ. ಎನ್. ಶಾಮಂತ ಹಾಗೂ ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಶನಿವಾರ ಭೇಟಿ ನೀಡಿ ಪರಿಶೀಲಿಸಿದರು   

ರಾಯಚೂರು: ನಗರದ ಹೊರವಲಯದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಯರಮರಸ್ ಸರ್ಕಿಟ್‌ ಹೌಸ್ ಬಳಿಯ ಪ್ರದೇಶ ಹಾಗೂ ರಾಯಚೂರು ತಾಲ್ಲೂಕಿನ ಕುರುಬದೊಡ್ಡಿ, ಯರಗೇರಾ ಪ್ರದೇಶಗಳನ್ನು ಅಧಿಕಾರಿಗಳ ತಂಡವು ಶನಿವಾರ ಪರಿಶೀಲಿಸಿತು.

ಆನಂತರ ಮಾತನಾಡಿದ ಕೆ.ಎಸ್.ಐ.ಐ.ಡಿ.ಸಿ ವಿಮಾನಯಾನ ತಜ್ಞ ಕ್ಯಾ. ಎನ್. ಶಾಮಂತ ಹಾಗೂ ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ ಅವರು, ಯರಮರಸ್ ಬಳಿ ಪೂರ್ವ-ಪಶ್ಚಿಮ ವಲಯದಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಸ್ಥಿತಿಗತಿಗಳನ್ನು ಗಮನಿಸಿದ್ದು, ಅಲ್ಲಿ ಕೆಪಿಟಿಸಿಎಲ್‌ನ ಹೈಟೆನ್ಷನ್ ವಿದ್ಯುತ್ ತಂತಿಗಳು ಹಾದುಹೋಗಿವೆ. ಅವುಗಳನ್ನು ಸ್ಥಳಾಂತರಿಸಬೇಕಿರುತ್ತದೆ ಹಾಗೂ ಈ ಸ್ಥಳವನ್ನು ವೀಕ್ಷಿಸಲು ಸರ್ವೆ ಅಧಿಕಾರಿಗಳು, ಭೂ ವಿಜ್ಞಾನಿಗಳು ಸೇರಿದಂತೆ ಎಲ್ಲಾ ಅಧಿಕಾರಿಗಳನ್ನು ಕರೆತರಲಾಗಿದೆ ಎಂದು ತಿಳಿಸಿದರು.

ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಲಹೆ ನೀಡುವ ಏಜೆನ್ಸಿಯೊಂದು ಅಧ್ಯಯನ ನಡೆಸಿ ಕೆಎಸ್.ಐ.ಐ.ಡಿ.ಸಿಗೆ ವರದಿ ನೀಡಿದೆ. ಇವೆಲ್ಲವೂಗಳನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ADVERTISEMENT

ತೆಲಂಗಾಣ ರಾಜ್ಯಕ್ಕೆ ಹಾದುಹೋಗವ ಜುರಾಲಾ 220 ಕೆ.ವಿ. ವಿದ್ಯುತ್ ಲೈನ್ ಇದೆ. ಅದನ್ನು ಸ್ಥಳಾಂತರಿಸಬೇಕಾಗಿದ್ದು, ಎಷ್ಟು ಪ್ರಮಾಣದಲ್ಲಿ ಅದನ್ನು ಸ್ಥಳಾಂತರಿಸಬೇಕು. ಅದಕ್ಕೆ ತಗಲುವ ವೆಚ್ಚ ಮತ್ತು ಅದರ ಸಾಧಕ ಭಾದಕಗಳ ಬಗ್ಗೆಯೂ ಹಾಗೂ ವೈಟಿಪಿಎಸ್‌ನ ವಿದ್ಯುತ್ ಲೈನ್ ಕೂಡ ಇಲ್ಲಿಯೇ ಹಾದು ಹೋಗಿದ್ದು, ಸ್ವಲ್ಪ ದೂರದಲ್ಲಿರಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಎಲ್ಲವುಗಳನ್ನು ಗಮನಿಸಿ ಒಂದು ನಿರ್ಧಾರಕ್ಕೆ ಬರಬೇಕಿದೆ ಎಂದರು.

ಈ ಸ್ಥಳವನ್ನು ಹೊರತು ಪಡಿಸಿದರೆ ಸಿಂಗನೋಡಿಯಲ್ಲಿ 567 ಎಕರೆ ಪ್ರದೇಶವನ್ನು ಕೆಐಎಡಿಬಿಯ ಕೈಗಾರಿಕಾ ಪ್ರದೇಶಕ್ಕೆಂದು ಗುರುತಿಸಲಾಗಿದೆ. ಆ ಪ್ರದೇಶದಲ್ಲಿ ಸಹ ವಿಮಾನ ನಿಲ್ದಾಣದ ಸಾಧಕ ಬಾಧಕಗಳನ್ನು ಪರಿಶೀಲಿಸಲಾಗುವುದು ಎಂದರು.

ಕೇಂದ್ರ ಸರ್ಕಾರದ ನಿಯಮಗಳನ್ವಯ ಹಾಗೂ ತಾಂತ್ರಿಕ ಮಾಹಿತಿಯ ಆಧಾರದ ಮೇಲೆ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲಾ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಸಾರ್ವಜನಿಕರಿಗೆ ಉಪಯುಕ್ತವಾಗುವಂತೆ ವಿಮಾನ ನಿಲ್ದಾಣ ನಿರ್ಮಾಣದ ಉದ್ದೇಶ ಹೊಂದಲಾಗಿದೆ ಎಂದು ಕೆ.ಎಸ್.ಐ.ಐ.ಡಿ.ಸಿ ವಿಮಾನಯಾನ ತಜ್ಞ ಕ್ಯಾಪ್ಟನ್‌ ಎನ್. ಶಾಮಂತ ತಿಳಿಸಿದರು.

ಯರಮರಸ್‌ನಲ್ಲಿ 400ಎಕರೆಗೂ ಹೆಚ್ಚಿನ ಪ್ರದೇಶವಿದ್ದು, ಇಲ್ಲಿನ ತಾಪಮಾನ, ಭೂ ವೈಜ್ಞಾನಿಕತೆ ಸೇರಿದಂತೆ ಹಲವಾರು ಅಂಶಗಳನ್ನು ಪರಿಗಣಿಸಲಾಗುವುದು. ರಾಜ್ಯ ಸರ್ಕಾರ ನೀಡುವ ಅನುದಾನದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲು ಸಮತಟ್ಟವಾದ ಸ್ಥಳವನ್ನೇ ಆಯ್ಕೆ ಮಾಡಲಾಗುವುದು ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ್, ಸಹಾಯಕ ಆಯುಕ್ತ ಸಂತೋಷ ಕಾಮಗೌಡ, ಗಣಿ ಮತ್ತು ಭೂವಿಜ್ಞಾನ ಇಲಾಖೆ ವಿಶ್ವನಾಥ್, ತಹಸಿಲ್ದಾರ್ ಹಂಪಣ್ಣ, ಕಂದಾಯ, ಲೋಕೋಪಯೋಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.