ADVERTISEMENT

ನಕಲಿ ಕುರಿಗಾಹಿ ಪ್ರಮಾಣ ಪತ್ರ: ಸೂಕ್ತ ಕ್ರಮಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 23 ಮೇ 2025, 15:48 IST
Last Updated 23 ಮೇ 2025, 15:48 IST
ಸುರೇಶ ಹಚ್ಚೊಳ್ಳಿ
ಸುರೇಶ ಹಚ್ಚೊಳ್ಳಿ   

ಸಿಂಧನೂರು: ತಾಲ್ಲೂಕಿನಲ್ಲಿ ಕುರಿಗಾಹಿ ಅಲ್ಲದವರೂ ನಕಲಿ ಕುರಿಗಾಹಿ ಪ್ರಮಾಣ ಪತ್ರವನ್ನು ಪಡೆದು ಆರನೇ ತರಗತಿಗೆ ಪ್ರವೇಶ ಪಡೆಯುತ್ತಿರುವುದು ಖಂಡನೀಯ. ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕುರುಬರ ಸಂಘದ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಸುರೇಶ ಹಚ್ಚೊಳ್ಳಿ ಒತ್ತಾಯಿಸಿದ್ದಾರೆ.

ಶುಕ್ರವಾರ ಹೇಳಿಕೆ ನೀಡಿರುವ ಅವರು,‘ರಾಜ್ಯ ಸರ್ಕಾರದ ಆದೇಶದ ಅನ್ವಯ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ ವಿಶೇಷ ವರ್ಗದಡಿ ಕುರಿಗಾಹಿ ಮಕ್ಕಳಿಗೆ ನೇರವಾಗಿ ಆರನೇ ತರಗತಿಗೆ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಆದರೆ ಕೆಲವೊಂದು ಶಾಲೆಗಳಲ್ಲಿ ಬೇರೆ ಸಮುದಾಯದ ಜನರೂ ಕುರಿಗಾಹಿ ಅಲ್ಲದಿದ್ದರೂ ನಕಲಿ ಪ್ರಮಾಣ ಪತ್ರ ಪಡೆದುಕೊಂಡು ಆರನೇ ತರಗತಿಗೆ ಪ್ರವೇಶಾತಿ ಪಡೆಯುತ್ತಿರುವುದು ಖಂಡನಾರ್ಹ’ ಎಂದಿದ್ದಾರೆ.

ಇದರಿಂದ ನಿಜವಾದ ಕುರಿಗಾಹಿ ಸಮಾಜದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ. ಆದ್ದರಿಂದ ಮುಖ್ಯಶಿಕ್ಷಕರು ಸೂಕ್ತ ದಾಖಲಾತಿಗಳನ್ನು ಪರಿಶೀಲಿಸಿ ಪ್ರವೇಶಾತಿಗೆ ಅವಕಾಶ ನೀಡಬೇಕು. ಒಂದು ವೇಳೆ ಕುರಿಗಾಹಿ ಮಕ್ಕಳಿಗೆ ಅನ್ಯಾಯವಾದರೆ ಸಮಾಜ ಕಲ್ಯಾಣ ಇಲಾಖೆ ಕಚೇರಿ ಮುಂದೆ ಧರಣಿ ಕೂರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ADVERTISEMENT

ಪಶು ವೈದ್ಯಾಧಿಕಾರಿಗಳು ಕೂಡ ಸರಿಯಾಗಿ ಪರಿಶೀಲಸದೆ ಕುರಿಗಾಹಿ ಅಲ್ಲದವರಿಗೆ ಅಕ್ರಮ ಪ್ರಮಾಣ ಪತ್ರ ನೀಡಿದ್ದು ತಮ್ಮ ಗಮನಕ್ಕೆ ಬಂದಿದೆ. ಕೂಡಲೇ ಇದನ್ನು ಸರಿಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ತಮ್ಮ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಪಶು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.