ADVERTISEMENT

ಶರಣಾದ ನಕ್ಸಲರ ಬಿಡುಗಡೆಗೆ ಕುಟುಂಬಸ್ಥರ ಮನವಿ

ಸಮಾಜದ ಮುಖ್ಯವಾಹಿನಿಗೆ ಬರಲು ಅವಕಾಶ ಕಲ್ಪಿಸುವಂತೆ ಕೋರಿಕೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 5:15 IST
Last Updated 18 ಜನವರಿ 2026, 5:15 IST

ರಾಯಚೂರು: ‘ಸರ್ಕಾರದ ಮನವಿಯಂತೆ ಪೊಲೀಸರಿಗೆ ಶರಣಾಗಿರುವ, ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾದ ಆರೋಪ ಹೊತ್ತಿರುವ ಮಾರೆಪ್ಪ ಆರೋಲಿ ಅವರನ್ನು ವಿಚಾರಣೆ ಹೆಸರಿನಲ್ಲಿ ವರ್ಷದಿಂದ ಜೈಲಿನಲ್ಲಿಡಲಾಗಿದೆ. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು’ ಎಂದು ಆರೋಲಿ ಕುಟುಂಬದವರು ಮನವಿ ಮಾಡಿದ್ದಾರೆ.

‘ಶರಣಾದ ನಕ್ಸಲರ ಮೇಲಿನ ಪ್ರಕರಣಗಳನ್ನು ಹಿಂಪಡೆದು ಸರ್ಕಾರದಿಂದ ಪರಿಹಾರ ಹಾಗೂ ಮುಖ್ಯವಾಹಿನಿಗೆ ತರಲು ಅನುವು ಮಾಡಿಕೊಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ, ಒಂದು ವರ್ಷವಾದರೂ ಬಿಡುಗಡೆಯಾಗಿಲ್ಲ’ ಎಂದು ಮಾರೆಪ್ಪ ಆರೋಲಿ ಪುತ್ರ ಚನ್ನಬಸವ ಆರೋಲಿ ನಗರದಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

‘ಮಾರೆಪ್ಪ ಆರೋಲಿಯರ ತಾಯಿ ಗೌರಮ್ಮ ಇಳಿವಯಸ್ಸಿನಲ್ಲಿ ಮಗನೊಂದಿಗೆ ಇರಲು ಬಯಸಿದ್ದಾರೆ. ಆದರೆ, ಶರಣಾದವರನ್ನು ಕೇರಳದ ಜೈಲಿಗೆ ವರ್ಗಾಯಿಸಲಾಗಿದೆ. ಅವರ ವಿರುದ್ಧ ಸುಮಾರು 160 ಪ್ರಕರಣಗಳನ್ನು ದಾಖಲಿಸಿರುವ ಮಾಹಿತಿ ಇದೆ. ಎಲ್ಲ ಪ್ರಕರಣಗಳು ಇತ್ಯರ್ಥವಾಗಲು ಇನ್ನೂ ಕೆಲವು ವರ್ಷಗಳು ಬೇಕಾಗಬಹುದು’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

‘ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಆರು ಜನರನ್ನು ಜೈಲಿನಿಂದ ಮುಕ್ತಗೊಳಿಸಿ ಕುಟುಂಬದೊಂದಿಗೆ ಬದುಕಲು ಅವಕಾಶ ಮಾಡಿಕೊಡಬೇಕು. ಸರ್ಕಾರ ತನ್ನ ಮಾತು ಉಳಿಸಿಕೊಳ್ಳಬೇಕು’ ಎಂದು ಮನವಿ ಮಾಡಿದರು.

ಶರಣಾದ ಮಾರೆಪ್ಪ ಆರೋಲಿಯವರ ತಾಯಿ ಗೌರಮ್ಮ, ಅಣ್ಣ ದೇವೇಂದ್ರಪ್ಪ, ನಾಗಮ್ಮ ದೇವೇಂದ್ರಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.