ADVERTISEMENT

ಸಾಗುವಳಿದಾರರಿಗೆ ಭೂ ಮಂಜೂರಾತಿ ಕೊಡಿ: ರೈತ ಸಂಘ

ಶಾಸಕರ ನಿವಾಸದ ಎದುರು ಕೆಆರ್‌ಎಸ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2023, 13:34 IST
Last Updated 12 ಜುಲೈ 2023, 13:34 IST
ಸಿಂಧನೂರಿನ ಕರ್ನಾಟಕ ರೈತ ಸಂಘದಿಂದ ಭೂಮಿ ಮಂಜೂರಾತಿ ಮಾಡಬೇಕು ಎಂದು ಒತ್ತಾಯಿಸಿ ಬುಧವಾರ ಶಾಸಕ ಹಂಪನಗೌಡ ಬಾದರ್ಲಿ ನಿವಾಸದ ಎದುರು ಧರಣಿ ನಡೆಸಲಾಯಿತು
ಸಿಂಧನೂರಿನ ಕರ್ನಾಟಕ ರೈತ ಸಂಘದಿಂದ ಭೂಮಿ ಮಂಜೂರಾತಿ ಮಾಡಬೇಕು ಎಂದು ಒತ್ತಾಯಿಸಿ ಬುಧವಾರ ಶಾಸಕ ಹಂಪನಗೌಡ ಬಾದರ್ಲಿ ನಿವಾಸದ ಎದುರು ಧರಣಿ ನಡೆಸಲಾಯಿತು   

ಸಿಂಧನೂರು: ಕಳೆದ 40 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಭೂಹೀನ ರೈತರಿಗೆ ಸರ್ಕಾರಿ ಪರಂಪೋಕ್, ಸರ್ಕಾರಿ ಹೆಚ್ಚುವರಿ, ಗೈರಾಣ, ಖಾರಿಜಖಾತ್ ಭೂಮಿಗಳಿಗೆ ಭೂ ಮಂಜೂರಾತಿ ಕೊಡಬೇಕು ಎಂದು ಆಗ್ರಹಿಸಿ ಕರ್ನಾಟಕ ರೈತ ಸಂಘ ತಾಲ್ಲೂಕು ಘಟಕದಿಂದ ಬುಧವಾರ ಶಾಸಕ ಹಂಪನಗೌಡ ಬಾದರ್ಲಿ ನಿವಾಸದ ಎದುರು ಧರಣಿ ನಡೆಸಲಾಯಿತು.

ಸ್ಥಳೀಯ ಪ್ರವಾಸಿ ಮಂದಿರದಿಂದ ಮೆರವಣಿಗೆಯೊಂದಿಗೆ ಗಾಂಧಿ ವೃತ್ತ, ಕನಕದಾಸ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಮೂಲಕ ಶಾಸಕರ ನಿವಾಸಕ್ಕೆ ತೆರಳಿ ಧರಣಿ ಕುಳಿತು ಪ್ರತಿಭಟಿಸಲಾಯಿತು.

ಗ್ರಾಮೀಣ ಭಾಗದ 94ಸಿ, ನಗರ ಪ್ರದೇಶದ 94 ಸಿಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳಿಗೆ ನಿವೇಶನಗಳ ಹಕ್ಕುಪತ್ರ ವಿತರಿಸಬೇಕು. ಈ ಹಿಂದೆ ಸಕಾರಣವಿಲ್ಲದೆ ಅನಗತ್ಯವಾಗಿ ತಿರಸ್ಕಾರಗೊಂಡಿರುವ ಫಾರಂ ನಂ.57ರ ಅರ್ಜಿಗಳನ್ನು ಪುನರ್ ಪರಿಶೀಲಿಸಿ ಅರ್ಹ ಸಾಗುವಳಿದಾರರಿಗೆ ಭೂ ಮಂಜೂರಾತಿ ಕೊಡಬೇಕು. 3 ಎಕರೆಗಿಂತ ಕಡಿಮೆ ಅರಣ್ಯ ಭೂಮಿಯನ್ನು ಸಾಗುವಳಿ ಮಾಡುವ ಬಡವರಿಗೆ ಭೂಮಿಯಿಂದ ಒಕ್ಕಲೆಬ್ಬಿಸಬಾರದು. ಅರಣ್ಯ ಭೂಮಿಯಿಂದ ವಾಪಾಸ್ ಪಡೆದಿರುವ 7 ಲಕ್ಷ ಹೆಕ್ಟೇರ್ ಡೀಮ್ಡ್ ಫಾರೆಸ್ಟ್ ಭೂಮಿಯನ್ನು ಭೂಹೀನ ಬಡವರಿಗೆ ಹಂಚಿಕೆ ಮಾಡಬೇಕು ಎಂದು ಕೆಆರ್‌ಎಸ್ ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ ಪಾಟೀಲ ಬೇರಿಗಿ ಒತ್ತಾಯಿಸಿದರು.

ADVERTISEMENT

ಸರ್ಕಾರಿ ಹಾಗೂ ಅರಣ್ಯ ಭೂಮಿಯನ್ನು ಕಂಪನಿಗಳಿಗೆ ಹಾಗೂ ಭೂಮಾಲೀಕರಿಗೆ ಗುತ್ತಿಗೆ ಕೊಡಲು ಈ ಹಿಂದಿನ ಸರ್ಕಾರ ತಿದ್ದುಪಡಿ ಮಾಡಿದ್ದ ಕಾಯ್ದೆಯನ್ನು ರದ್ದುಗೊಳಿಸಬೇಕು. ಮುಂಗಾರು ಮಳೆ ಕೈಕೊಟ್ಟಿರುವುದರಿಂದ ಜಿಲ್ಲೆಯಲ್ಲಿ ಬೆಳೆನಷ್ಟ, ಬರ ಪರಿಹಾರ ಯೋಜನೆ ಕೈಗೆತ್ತಿಕೊಳ್ಳಬೇಕು. ಜಾನುವಾರುಗಳಿಗೆ ಮೇವು ಸರಬರಾಜು ಮಾಡಬೇಕು. ಗೋಶಾಲೆ ತೆರೆಯಬೇಕು. ಗ್ರಾಮೀಣ ಭಾಗದ ಪಂಪ್‍ಸೆಟ್‍ಗಳಿಗೆ 12 ಗಂಟೆಗಳ ಕಾಲ ಸಮರ್ಪಕವಾಗಿ ತ್ರಿಫೇಸ್ ವಿದ್ಯುತ್ ಸರಬರಾಜು ಮಾಡಬೇಕು ಎಂದು ಆಗ್ರಹಿಸಿದರು.

ಶಾಸಕರ ಅನುಪಸ್ಥಿತಿಯಲ್ಲಿ ಅವರ ಸಹೋದರರ ಪುತ್ರ ಚಂದ್ರೇಗೌಡ ಬಾದರ್ಲಿ ಹಾಗೂ ಗ್ರೇಡ್–2 ತಹಶೀಲ್ದಾರ್ ಚಂದ್ರಶೇಖರ ಮನವಿ ಪತ್ರ ಸ್ವೀಕರಿಸಿದರು.

ಜಿಲ್ಲಾ ಘಟಕದ ಉಪಾಧ್ಯಕ್ಷ ಬಿ.ಎನ್.ಯರದಿಹಾಳ, ತಾಲ್ಲೂಕು ಉಪಾಧ್ಯಕ್ಷ ಚಿಟ್ಟಿಬಾಬು, ಸದಸ್ಯರಾದ ಯಲ್ಲಪ್ಪ ಭಜಂತ್ರಿ, ತಿಮೋತಿ, ಗಂಗರಾಜ್ ಶಾಂತಿನಗರ, ಎಚ್.ಪಂಪಾಪತಿ, ಪೃಥ್ವಿರಾಜ್, ನಿಂಗಪ್ಪ ಚಿಕ್ಕಬೇರಿಗಿ, ಛತ್ರಗೌಡ, ಬಸನಗೌಡ ಮಾಂಪುರ, ರಾಮಣ್ಣ ಬೇರಿಗಿ, ಶಿವಪ್ಪ, ಕನಕಪ್ಪ ಪೂಜಾರಿ, ಆಂಜನೇಯ, ನಾಗಯ್ಯ ಸ್ವಾಮಿ, ರಾಜು, ವೀರಯ್ಯ ಸ್ವಾಮಿ, ಹನುಮಂತ, ಮುದಿಯಪ್ಪ, ಹುಸೇನಪ್ಪ, ಪಿ.ಸತ್ಯವತಿ, ಜಯಮ್ಮ, ಲಕ್ಷ್ಮಿ, ವಿಜಯಕುಮಾರಿ, ಯಲ್ಲಮ್ಮ, ಚಂದ್ರಮ್ಮ, ರಾಘಮ್ಮ, ಮಾರೆಮ್ಮ, ಸಣ್ಣಲಕ್ಷ್ಮಿ, ಎಂ.ಲಕ್ಷ್ಮಿ, ಸರಸ್ವತಿ, ಪದ್ಮಾ ಎನ್, ಸುಜಾತಾ, ದೊಡ್ಡಲಕ್ಷ್ಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.