ADVERTISEMENT

ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಮೇ 2020, 13:23 IST
Last Updated 27 ಮೇ 2020, 13:23 IST
ರಾಯಚೂರಿನಲ್ಲಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಜಿಲ್ಲಾ ಘಟಕದಿಂದ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಬುಧವಾರ ಮನವಿ ಸಲ್ಲಿಸಲಾಯಿತು
ರಾಯಚೂರಿನಲ್ಲಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಜಿಲ್ಲಾ ಘಟಕದಿಂದ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಬುಧವಾರ ಮನವಿ ಸಲ್ಲಿಸಲಾಯಿತು   

ರಾಯಚೂರು: ಎಪಿಎಂಸಿ ಕಾಯ್ದೆ ತಿದ್ದುಪಡಿಯನ್ನು ತಕ್ಷಣ ವಾಪಸ್‌ಪಡೆಯಬೇಕು ಎಂದು ಆಗ್ರಹಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ (ಎಐಕೆಎಸ್‌ಸಿ) ಜಿಲ್ಲಾ ಸಮಿತಿ ಪದಾಧಿಕಾರಿಗಳು ಜಿಲ್ಲಾಡಳಿತ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಅನಂತರ ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ, ಕೊರೊನಾದಿಂದ ಸಂಕಷ್ಟದಲ್ಲಿರುವ ರೈತರು, ಗ್ರಾಮೀಣ ಜನತೆ ರೇಷನ್, ಕೃಷಿ ಬ್ಯಾಂಕ್ ಸಾಲ, ಬೆಂಬಲ ಬೆಲೆ, ಉದ್ಯೋಗ ಖಾತ್ರಿ ಜಾರಿ ಆರ್ಥಿಕ ನೆರವು ಇತ್ಯಾದಿಗಳನ್ನು ನೀಡಬೇಕಾಗಿರುವ ಸರ್ಕಾರ ಎಪಿಎಂಸಿಗಳಲ್ಲಿ ಇರುವ ದೋಷಗಳನ್ನು ಸರಿಪಡಿಸಲು ತಿದ್ದುಪಡಿ ಮಾಡಲು ಹೊರಟಿದ್ದು ಸರಿಯಲ್ಲ. ಸ್ಪರ್ಧಾತ್ಮಕ ಬೆಲೆ ಮಾರುಕಟ್ಟೆಯ ಹೆಸರಿನಲ್ಲಿ ರಾಜ್ಯದ ಎಪಿಎಂಸಿ ಕಾಯ್ದೆ ತಿದ್ದುಪಡಿಗಳನ್ನು ತಂದು ರೈತ ವಿರೋಧಿ, ಕಾರ್ಪೊರೇಟ್ ಕಂಪನಿಗಳ ಪರವಾದ ನೀತಿಯನ್ನು ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಲು ಹೊರಟಿದ್ದು ಖಂಡನೀಯ ಎಂದು ತಿಳಿಸಲಾಗಿದೆ.

ರೈತರನ್ನು ಸುಲಿಗೆ ಮಾಡುತ್ತಿದ್ದ ಖಾಸಗಿ ವ್ಯಾಪಾರಸ್ಥರಿಂದ ರಕ್ಷಿಸಲು 1966 ರಲ್ಲಿ ರಾಜ್ಯದ ಎಪಿಎಂಸಿ ಕಾಯ್ದೆಯನ್ನು ತಂದು ಕೃಷಿ ಮಾರುಕಟ್ಟೆಗಳನ್ನು ಸ್ಥಾಪನೆ ಮಾಡಿ ಸರ್ಕಾರದ ನಿಯಂತ್ರಿತ ಮಾರುಕಟ್ಟೆಯ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು. ಇದರ ಫಲವಾಗಿ ಸುಮಾರು 177 ಮಾರುಕಟ್ಟೆಗಳು, ಹತ್ತಾರು ಸಾವಿರ ವ್ಯಾಪಾರಸ್ಥರು, ಹಮಾಲಿ ಕಾರ್ಮಿಕರ ಮತ್ತಿತರನ್ನು ಒಳಗೊಂಡ ನಿಯಂತ್ರಿತ ಮಾರುಕಟ್ಟೆ ವ್ಯವಸ್ಥೆ ನಿರ್ಮಾಣವಾಗಿದೆ. ಈ ವ್ಯವಸ್ಥೆಯಿಂದ ರೈತರಿಗೆ ಸಾಕಷ್ಟು ಅನುಕೂಲಗಳೂ ಆಗಿವೆ. ಆದರೆ, ಕಾಲ ಕ್ರಮೇಣ ಈ ವ್ಯವಸ್ಥೆಯಲ್ಲಿ ಹಲವು ಸಮಸ್ಯೆಗಳು ಸೃಷ್ಟಿ ಯಾಗಿ ರೈತ ಹಿತಕ್ಕೆ ಧಕ್ಕೆಯಾಗಿದೆ. ಈ ಸಮಸ್ಯೆಗಳನ್ನು ನಿವಾರಣೆ ಮಾಡಬೇಕಾದ ಸರ್ಕಾರಗಳೇ ಅದರ ಪಾಲುದಾರರಾಗಿವೆ ಎಂದು ದೂರಿದರು.

ADVERTISEMENT

ಎಐಕೆಎಸ್‌ಸಿ ರಾಜ್ಯ ಸಮಿತಿ ಸದಸ್ಯ ಚಾಮರಸ ಮಾಲಿಪಾಟೀಲ್, ಜಿಲ್ಲಾ ಸಂಚಾಲಕ ಕೆ.ಜಿ.ವಿರೇಶ, ಮುಖಂಡ ಕರಿಯಪ್ಪ ಅಚ್ಚೋಳಿ, ರಾಮಣ್ಣ, ಸೂಗಯ್ಯಾ ಆರ್.ಎಸ್.ಮಠ, ಆಂಜನೇಯ ಕುರುಬದೊಡ್ಡಿ, ದೊಡ್ಡ ಬಸನಗೌಡ ಬಲ್ಲಟಿಗಿ, ಪ್ರಮೋದ ಕುಮಾರ, ದೇವರಾಜ, ಮಲ್ಲನ್ನ ದಿನ್ನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.