ADVERTISEMENT

ಪ್ರಕಾಶಬಾಬು ಆತ್ಮಹತ್ಯೆ ಪ್ರಕರಣ: ಸಿಬಿಐ ತನಿಖೆಗೆ ಒತ್ತಾಯಿಸಿ ಮೌನ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2021, 15:06 IST
Last Updated 7 ಸೆಪ್ಟೆಂಬರ್ 2021, 15:06 IST
ಪ್ರಕಾಶಬಾಬು ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿ ರಾಯಚೂರಿನಲ್ಲಿ ದಲಿತ ಸಂಘಟನೆಗಳ ಒಕ್ಕೂಟಗಳ ಪದಾಧಿಕಾರಿಗಳು ಕಪ್ಪು ಪಟ್ಟಿ ಧರಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು
ಪ್ರಕಾಶಬಾಬು ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿ ರಾಯಚೂರಿನಲ್ಲಿ ದಲಿತ ಸಂಘಟನೆಗಳ ಒಕ್ಕೂಟಗಳ ಪದಾಧಿಕಾರಿಗಳು ಕಪ್ಪು ಪಟ್ಟಿ ಧರಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು   

ರಾಯಚೂರು: ಉಪವಿಭಾಗೀಯ ಅಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಪ್ರಕಾಶಬಾಬು ಅವರ ಸಾವಿಗೆ ಮೇಲಧಿಕಾರಿ ಕಿರುಕುಳವೇ ಕಾರಣ ಎಂದು ಆರೋಪಿಸಿ, ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿ ದಲಿತ ಸಂಘಟನೆಗಳ ಒಕ್ಕೂಟಗಳ ಪದಾಧಿಕಾರಿಗಳು ಹಾಗೂ ಕುಟುಂಬದ ಸದಸ್ಯರು ಕಪ್ಪು ಪಟ್ಟಿ ಧರಿಸಿ ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಮಂಗಳವಾರ ಮೌನ ಮೆರವಣಿಗೆ ನಡೆಸಿದರು.

ಆನಂತರ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರಕಾಶಬಾಬು ಅವರು ಆಗಸ್ಟ್ 23ರಂದು ಕಾಣೆಯಾಗಿ 31ರಂದು ಬೆಂಗಳೂರಿನ ಹೋಟೆಲ್‍ವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇದರ ಹಿಂದೆ ಉಪ ವಿಭಾಗೀಯ ಅಧಿಕಾರಿ ಕಚೇರಿ ಅಧಿಕಾರಿಗಳ ಭ್ರಷ್ಟಾಚಾರದ ಹಗರಣದ ಹಿನ್ನೆಲೆ ಇದೆ ಎಂದು ಆರೋಪಿಸಿದರು.

ಪ್ರಕಾಶ ಬಾಬು ಅವರು ಜೀವಂತವಾಗಿರುವಾಗ ಯಾವುದೇ ಭ್ರಷ್ಟಾಚಾರದ ಆರೋಪ ಇರಲಿಲ್ಲ. ಸಾವಿನ ಬಳಿಕ ₹50 ಲಕ್ಷ ಹಣ ಅವ್ಯವಹಾರವಾಗಿದೆ ಎಂದು ದೂರು ನೀಡಿರುವುದು ವ್ಯವಸ್ಥಿತ ಹುನ್ನಾರ ಅಡಗಿದೆ. ಪ್ರಕಾಶಬಾಬು 2005 ರಿಂದ ಇವರೆಗೂ ಭೂಸ್ವಾಧೀನ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಅವಧಿಯಲ್ಲಿ ಹಲವರು ಉಪ ವಿಭಾಗೀಯ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಗಮನಕ್ಕೆ ಬಾರದೇ ಇಷ್ಟು ದೊಡ್ಡ ಪ್ರಮಾಣದ ಭ್ರಷ್ಟಾಚಾರ ಆಗಿದೆ. ಅವರಿಗೆ ವಿವೇಚನಾಧಿಕಾರ ಇದ್ದಾಗ್ಯೂ ಚೆಕ್‍ಗಳಿಗೆ ನಕಲಿ ಸಹಿ, ನೊಂದಾಯಿತ ಮೊತ್ತ ತಿದ್ದುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ADVERTISEMENT

ಇಲಾಖೆಯ ಅಧಿಕಾರಿಗಳ ಹೊಂದಾಣಿಕೆಯಿಲ್ಲದೇ ಭ್ರಷ್ಟಾಚಾರ ಅಸಾಧ್ಯ. ಪ್ರಕಾಶ ಬಾಬು ಅವರ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಪ್ರಕರಣದಲ್ಲಿ ಉಪ ವಿಭಾಗೀಯ ಅಧಿಕಾರಿಯನ್ನು ಪ್ರಮುಖ ಆರೋಪಿಯನ್ನಾಗಿ ಅಮಾನತು ಮಾಡಿ ಪ್ರಕಾಶಬಾಬು ಕುಟುಂಬಕ್ಕೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂಡ ಎಂ.ವಿರೂಪಾಕ್ಷಿ, ಜೆ.ಬಿ ರಾಜು, ಅಂಬಣ್ಣ ಅರೋಲಿ, ಪಿ.ಯಲ್ಲಪ್ಪ, ಯಮುನಪ್ಪ, ಜಂಬಣ್ಣ, ಮಧುಚಕ್ರವರ್ತಿ, ಜೆ.ಸತ್ಯನಾಥ, ಹೇಮರಾಜ, ರಾಘವೇಂದ್ರ ಬೋರೆಡ್ಡಿ, ಕೆ.ಪಿ. ಅನಿಲ್ ಕುಮಾರ್, ಎಸ್.ರಾಜು, ನರಸಿಂಹಲು, ರಾಮಣ್ಣ, ರಾಜು ಬೊಮ್ಮನಾಳ, ನರಸಪ್ಪ, ಬಸವರಾಜ, ರವಿ ಶಿರಡ್ಡಿ, ಎಂ ಸುಭಾಷ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.