ADVERTISEMENT

ಗುರುವಿನಿಂದ ಸಂಗೀತ ಕಲಿಯಿರಿ: ಪಂಡಿತ್‌ ಅಂಬಯ್ಯ ನುಲಿ

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಂಬಯ್ಯ ನುಲಿ ಅವರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2020, 12:55 IST
Last Updated 25 ನವೆಂಬರ್ 2020, 12:55 IST
ರಾಯಚೂರಿನ ನಗರದ ನಾದಲೋಕ ಕಲಾಬಳಗದಿಂದ ರಾಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಈಚೆಗೆ ಆಯೋಜಿಸಿದ್ದ ನಾದಸ್ವರ ಉತ್ಸವ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಂಡಿತ್‌ ಅಂಬಯ್ಯ ನುಲಿ ಅವರನ್ನು ಸನ್ಮಾನಿಸಿದರು
ರಾಯಚೂರಿನ ನಗರದ ನಾದಲೋಕ ಕಲಾಬಳಗದಿಂದ ರಾಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಈಚೆಗೆ ಆಯೋಜಿಸಿದ್ದ ನಾದಸ್ವರ ಉತ್ಸವ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಂಡಿತ್‌ ಅಂಬಯ್ಯ ನುಲಿ ಅವರನ್ನು ಸನ್ಮಾನಿಸಿದರು   

ರಾಯಚೂರು: ಇತ್ತೀಚಿನ ದಿನಗಳಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಸಂಗೀತ ಕಲಿಸುವ ಅಭಿಲಾಷೆ ಹೊಂದಿ ಕರೋಕೆ ಸಂಗೀತ ಹವ್ಯಾಸ ಬೆಳೆಸುತ್ತಿದ್ದಾರೆ. ಸಂಗೀತಕ್ಕೆ ಬುನಾದಿ ಅವಶ್ಯಕ. ಅದು ಗುರುವಿನ ಮೂಲಕ ಕಲಿಯಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಂಡಿತ್‌ ಅಂಬಯ್ಯ ನುಲಿ ಹೇಳಿದರು.

ನಗರದ ನಾದಲೋಕ ಕಲಾಬಳಗದಿಂದ ರಾಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಈಚೆಗೆ ಆಯೋಜಿಸಿದ್ದ ನಾದಸ್ವರ ಉತ್ಸವ ಕಾರ್ಯ ಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

‘ಕೆಲವೇ ಹಾಡುಗಳನ್ನು ಹಾಡಿಸಿ ಟಿವಿಗಳಲ್ಲಿ ಪ್ರದರ್ಶನ ಮಾಡುವ ಕನಸನ್ನು ಪಾಲಕರು ಕಾಣುತ್ತಾರೆ. ಆದರೆ ಇದು ನಿಜವಾದ ಕನಸಲ್ಲ. ಕೇವಲ ಒಂದೆರಡು ವರ್ಷಗಳಲ್ಲಿ ಸಂಗೀತಗಾರರಾಗಲು ಸಾಧ್ಯವಿಲ್ಲ. ಹತ್ತಾರು ವರ್ಷಗಳ ಸಂಗೀತಾಭ್ಯಾಸದಿಂದ ಈ ಮಟ್ಟಕ್ಕೆ ನಾನು ಬೆಳೆಯಲು ಸಾಧ್ಯವಾಗಿದೆ’ ಎಂದರು.

ADVERTISEMENT

ಸಾನಿಧ್ಯ ವಹಿಸಿದ್ದ ಮಿಟ್ಟಿಮಲ್ಕಾಪುರದ ಆರೂಢ ಜ್ಯೋತಿ ಶಾಂತಾಶ್ರಮದ ನಿಜಾನಂದ ಮಹಾಸ್ವಾಮಿ ಮಾತನಾಡಿ, ಪಾಲಕರು ಮಕ್ಕಳಿಗೆ ಸಂಗೀತ, ಯೋಗ, ದೇವರು ಪೂಜೆ ಮೊದಲಾದವುಗಳನ್ನು ಕಲಿಸಬೇಕು. ಇದು ಅವರ ಏಳ್ಗೆಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಮಕ್ಕಳು ಒತ್ತಡದಲ್ಲಿದ್ದು, ಇದರಿಂದ ಮುಕ್ತರಾಗಿ ಮನಸ್ಸು ಮುದಗೊಳ್ಳಲು ಇಂತಹ ಸಂಗೀತ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಹೇಳಿದರು.

ಯೋಗ ಶಿಕ್ಷಕ ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, ಪಾಲಕರು ಮಕ್ಕಳಲ್ಲಿಯ ಆಸಕ್ತಿ ಕಂಡುಕೊಂಡು ಅವರ ಬೆಳವಣಿಗೆಗೆ ಸಹಕಾರ ನೀಡಬೇಕು ಎಂದು ಸಲಹೆ ಮಾಡಿದರು.

ಸಾಹಿತಿ ಆಂಜಿನೇಯ ಜಾಲಿಬೆಂಚಿ ಮಾತನಾಡಿ, ಇಂತಹ ವೇದಿಕೆಗಳು ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುತ್ತವೆ ಎಂದು ಹೇಳಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಆಶೀರ್ವಚನ ನೀಡಿದರು.

ವೆಂಕಟೇಶ ಮೇಸಿ ಗೋರ್ಕಲ್ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ರಾಜಶೇಖರ ಚಿಕ್ಕಮಠ, ದೇವಸ್ಥಾನದ ಅರ್ಚಕ ಅಮರೇಶ ಹಿರೇಮಠ, ದೊಡ್ಡಯ್ಯ ಶಾಸಿಗಳು, ನವೋದಯ ಶಿಕ್ಷಣ ಸಂಸ್ಥೆಯ ಉಪ ಪ್ರಾಚಾರ್ಯ ರಾಜಾಶಂಕರ,ಕಲ್ಯಾಣೇಶ್ವರಿ ನೀರಮಾನ್ವಿ ಇದ್ದರು.

ಸಮಾರಂಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಂಡಿತ್‌ ಅಂಬಯ್ಯ ನುಲಿ, ಜಾನಪದ ಅಕಾಡೆಮಿ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ದಯ್ಯಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

ಗುಲಬರ್ಗಾ ವಿಶ್ವವಿದ್ಯಾಲಯದಿಂದ ಚಿನ್ನದ ಪದಕ ಪಡೆದ ಎಲ್‍ವಿಡಿ ಕಾಲೇಜಿನ ಸಂಗೀತ ವಿದ್ಯಾರ್ಥಿ ಶ್ರೀಕರ ಅವರನ್ನು ಸನ್ಮಾನಿಸಲಾಯಿತು.
ವರದೇಂದ್ರ ಗಂಗಾಖೇಡ ಅವರು ಹಿಂದೂಸ್ತಾನಿ ಗಾಯನ ಮಾಡಿದರು. ಗಾನಯೋಗಿ ಸಂಗೀತ ಪಾಠಶಾಲೆಯ ವಿದ್ಯಾರ್ಥಿ ಗಳು ಸೇರಿದಂತೆ ಮತ್ತಿತರ ಕಲಾವಿದರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ನಾದಲೋಕ ಕಲಾಬಳಗದ ಅಧ್ಯಕ್ಷ ರಾಘವೇಂದ್ರ ಆಶಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾವೂತರಾವ್ ಬರೂರ್ ಸ್ವಾಗತಿಸಿದರು. ಶಿಕ್ಷಕ ಶರಣಪ್ಪ ನಾಯಕ ನಿರೂಪಿಸಿದರು. ಅನಿಲಕುಮಾರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.