ADVERTISEMENT

‘ಸಾಧಕರನ್ನು ಗೌರವಿಸುವುದು ಹೃದಯವಂತಿಕೆ’

ಎಸ್‌ಕೆಇ ಅರೆವೈದ್ಯಕೀಯ ಮತ್ತು ನರ್ಸಿಂಗ್‌ ಕಾಲೇಜಿನ 14ನೇ ವರ್ಷಾಚರಣೆ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2020, 11:38 IST
Last Updated 29 ನವೆಂಬರ್ 2020, 11:38 IST
ರಾಯಚೂರಿನ ಪಂಡಿತ್‌ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಎಸ್‌ಕೆಇ ಅರೆವೈದ್ಯಕೀಯ ಮತ್ತು ನರ್ಸಿಂಗ್ ಕಾಲೇಜಿನ 14 ನೇ ವಾರ್ಷಿಕೋತ್ಸವ ನಿಮಿತ್ತ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಕೊರೊನಾ ವಾರಿರ್ಸ್‌ಗಳನ್ನು ವಿಶೇಷವಾಗಿ ಸನ್ಮಾನಿಸಲಾಯಿತು
ರಾಯಚೂರಿನ ಪಂಡಿತ್‌ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಎಸ್‌ಕೆಇ ಅರೆವೈದ್ಯಕೀಯ ಮತ್ತು ನರ್ಸಿಂಗ್ ಕಾಲೇಜಿನ 14 ನೇ ವಾರ್ಷಿಕೋತ್ಸವ ನಿಮಿತ್ತ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಕೊರೊನಾ ವಾರಿರ್ಸ್‌ಗಳನ್ನು ವಿಶೇಷವಾಗಿ ಸನ್ಮಾನಿಸಲಾಯಿತು   

ರಾಯಚೂರು: ‘ಕೆಲಸ ಮಾಡುವವರನ್ನು ಗುರುತಿಸಿ ಗೌರವಿಸುವುದಕ್ಕೆ ಹೃದಯವಂತಿಕೆ ಬೇಕಾಗುತ್ತದೆ‌. ರಾಯಚೂರಿನ ಎಸ್‌ಕೆಇ ಸಂಸ್ಥೆ ಇಂತಹ ಹೃದಯವಂತಿಕೆ ಹೊಂದಿದೆ’ ಎಂದು ಶಾಸಕ ಶಿವನಗೌಡ ನಾಯಕ ಹೇಳಿದರು.

ನಗರದ ಪಂಡಿತ್‌ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಎಸ್‌ಕೆಇ ಅರೆವೈದ್ಯಕೀಯ ಮತ್ತು ನರ್ಸಿಂಗ್ ಕಾಲೇಜಿನ 14 ನೇ ವಾರ್ಷಿಕೋತ್ಸವ ನಿಮಿತ್ತ 101 ಕೊರೊನಾ ವಾರಿರ್ಸ್‌ಗಳಿಗೆ ಸನ್ಮಾನ ಹಾಗೂ ‘ಮಾನಸ’ 24*7 ಗ್ರಂಥಾಲಯ ಉದ್ಘಾಟನೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

‘ವಿಜಯಪುರದ ಜನರು ದೂರದೃಷ್ಟಿ ಹೊಂದಿದವರು. ಈ ಸಂಸ್ಥೆಯ ಸ್ಥಾಪಕರು ಕೂಡಾ ಅಲ್ಲಿನವರಾಗಿದ್ದು, ರಾಯಚೂರಿನಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಶಿಕ್ಷಣ ಸೇವೆ ವಿಸ್ತರಿಸಿಕೊಳ್ಳಬೇಕು. ಜಿಲ್ಲೆಯ ಕೈಗಾರಿಕಾ ವಲಯವಾಗಿ ಗುರುತಿಸಿಕೊಳ್ಳುವುದರಿಂದ ಶಿಕ್ಷಣದಿಂದ ಗುರುತಿಸುವಂತಾಗಬೇಕು. ಮುಂದಿನ ದಿನಗಳಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಬೇಕು. ಸರ್ಕಾರದಿಂದ ದೊರಕಿಸಬೇಕಾದ ಕೆಲಸಗಳನ್ನು ನಾನು ಮಾಡಿಕೊಡುತ್ತೇನೆ’ ಎಂದರು.

ADVERTISEMENT

‘ಬೆಳಗಾವಿಯಲ್ಲಿ ಕೆಎಲ್‌ಇ ಅಭಿವೃದ್ಧಿ ಆಗಿರುವ ರೀತಿಯಲ್ಲಿ ರಾಯಚೂರಿನಲ್ಲಿ ಎಸ್‌ಕೆಇ ಅಭಿವೃದ್ಧಿ ಹೊಂದುವುದಕ್ಕೆ ಅಗತ್ಯ ಸಹಕಾರ ನೀಡುತ್ತೇನೆ. ಗಡಿಯಲ್ಲಿ ಯುದ್ಧ ನಡೆದಾಗಲೇ ಸೈನಿಕರ ಮಹತ್ವ ಗೊತ್ತಾಗುತ್ತದೆ. ಸೈನಿಕರನ್ನು ಸ್ಮರಿಸಿಕೊಳ್ಳುವುದು, ಗೌರವಿಸುವ ಕಾರ್ಯಕ್ರಮಗಳು ನಡೆಯುತ್ತವೆ. ಅದೇ ರೀತಿ ದೇಶದಲ್ಲಿ ಕೊರೊನಾ ಸೋಂಕು ಬಂದಿದ್ದರಿಂದ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರ ಮಹತ್ವ ಜನರಿಗೆ ಗೊತ್ತಾಗಿದೆ’ ಎಂದು ಹೇಳಿದರು.

‘ಅಗರ್ಭ ಶ್ರೀಮಂತರು ಕೂಡಾ ವೈದ್ಯರು ಮತ್ತು ಸಿಬ್ಬಂದಿಯ ಕೆಲಸಕ್ಕೆ ತಲೆಬಾಗಿ ನಮಸ್ಕರಿಸಿದ ಉದಾಹರಣೆಗಳಿವೆ. ಜೀವದ ಹಂಗು ತೊರೆದು ಕಠಿಣ ಸಂದರ್ಭದಲ್ಲಿ ಜೀವ ಉಳಿಸುವ ಕೆಲಸವನ್ನು ವೈದ್ಯರು, ವೈದ್ಯಕೀಯ ಸಿಬ್ಬಂದಿ ಮಾಡಿದ್ದು, ಅವರನ್ನು ಸನ್ಮಾನಿಸುತ್ತಿರುವುದು ಮಹತ್ಕಾರ್ಯ’ ಎಂದರು.

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ತ್ರಿವಿಕ್ರಮ ಜೋಶಿ ಮಾತನಾಡಿ, ಕೊರೊನಾ ವಾರಿಯರ್ಸ್‌ ಜೀವ ಒತ್ತೆ ಇಟ್ಟು ಕೆಲಸ ಮಾಡಿರುವುದು ಸದಾ ಸ್ಮರಣೀಯ. ಇದೊಂದು ಅರ್ಥಗರ್ಭಿತ ಕಾರ್ಯಕ್ರಮ.‌ ಕೊರೊನಾ ಔಷಧಿ ಜನಸಾಮಾನ್ಯರಿಗೆ ಸಿಗುವಂತಾಗಲೂ ಸಾಕಷ್ಟು ಸಮಯಾವಕಾಶ ಬೇಕಾಗುತ್ತದೆ.ಎಲ್ಲರೂ ಇನ್ನೂ ಜಾಗೃತಿ ವಹಿಸಬೇಕು ಎಂದು ಹೇಳಿದರು.

ಸುವರ್ಣ ಕರ್ನಾಟಕ ಎಜ್ಯುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಬಾಬುರಾವ್ ಶೇಗುಣಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. 150 ಕ್ಕೂ ಹೆಚ್ಚು ಕೊರೊನಾ ವಾರಿಯರ್ಸ್‌ಗಳಿಗೆ ‘ಆರತಿ’ ಬೆಳಗಿ, ಶಾಲುಹೊದಿಸಿ, ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.

ಸೂಗುರೇಶ ಅಸ್ಕಿಹಾಳ ಅವರಿಗೆ ‘ಸಂಗೀತ ರತ್ನ’, ವಿಶ್ವನಾಥ ಪಾಟೀಲ ಅವರಿಗೆ ‘ಸಹಕಾರ ರತ್ನ’, ಡಾ.ಹರೀಶ ರಾಮಸ್ವಾಮಿ, ಅವರಿಗೆ ‘ಶಿಕ್ಷಣ ರತ್ನ’ ಹಾಗೂ ಡಾ.ಮಲ್ಲೇಶಗೌಡ ಅವರಿಗೆ ‘ವೈದ್ಯಕೀಯ ರತ್ನ’ ಪ್ರಶಸ್ತಿಗಳನ್ನು ನೀಡಿ ಗಣ್ಯರು ಗೌರವಿಸಿದರು.

ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ, ಗುರ್ಜಾಲದ ಸೂಗುರೇಶ್ವರ ಸ್ವಾಮೀಜಿ ಅವರು ಸಾನಿಧ್ಯ ವಹಿಸಿದ್ದರು. ವೈಷ್ಣವಿ ದೇಶಪಾಂಡೆ ಪ್ರಾರ್ಥಿಸಿದರು. ಸಂಸ್ಥೆಯ ಅಧ್ಯಕ್ಷ ರಾಜಶೇಖರ ಪಾಟೀಲ, ಸಂಸ್ಥೆಯ ಪದಾಧಿಕಾರಿ ಕೋಟ್ರೇಶ, ಶಾಲಿನಿ, ನಾಗರಾಜಗೌಡ, ಮಮತಾ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.