ADVERTISEMENT

ಬಸವಸಾಗರ ಜಲಾಶಯದಿಂದ ಕೃಷ್ಣೆಗೆ ನೀರು: ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ಭೀತಿ

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 15:47 IST
Last Updated 30 ಜೂನ್ 2025, 15:47 IST
ದೇವದುರ್ಗ ತಾಲ್ಲೂಕಿನ ಹೂವಿನಹೆಡಗಿ ಸೇತುವೆ
ದೇವದುರ್ಗ ತಾಲ್ಲೂಕಿನ ಹೂವಿನಹೆಡಗಿ ಸೇತುವೆ   

ದೇವದುರ್ಗ: ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಹರಿಸುವ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದು, ನದಿ ತೀರದ ಗ್ರಾಮಗಳಲ್ಲಿ ಪ್ರವಾಹದ ಆತಂಕ ಎದುರಾಗಿದೆ.

ಮಹಾರಾಷ್ಟ್ರದಲ್ಲಿ ಭಾರಿ ಮಳೆ ಸುರಿಯುತ್ತಿರುವ ಕಾರಣ ನಾರಾಯಣಪುರ (ಬಸವಸಾಗರ) ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹೆಚ್ಚುವರಿ ನೀರನ್ನು ಕೃಷ್ಣಾ ನದಿಗೆ ಹರಿಬಿಡಲಾಗುತ್ತಿದೆ.

ತಾಲ್ಲೂಕಿನ ನದಿ ತೀರದ ಗ್ರಾಮಗಳಾದ ಅಂಜಳ, ಅಂಚೆಸುಗೂರು, ಹೂವಿನಹೆಡಗಿ, ಜೋಳದಹೆಡಗಿ, ಮೆದರಗೋಳ, ಕರ್ಕಿಹಳ್ಳಿ, ಕೋಣಚಪ್ಪಳಿ, ಅಪ್ರಾಳ, ಬಸ್ವಂತಪುರ, ಚಿಕ್ಕ ಮತ್ತು ಹೀರೆರಾಯಕುಂಪಿ, ಗೂಗಲ್, ಹೆರುಂಡಿ, ಬಾಗೂರು, ವಗಡಂಬಳಿ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ನದಿ ತೀರಕ್ಕೆ ತೆರಳದಂತೆ ಜನರಿಗೆ ತಾಲ್ಲೂಕು ಆಡಳಿತ ಎಚ್ಚರಿಕೆ ನೀಡಿದೆ.

ADVERTISEMENT

ತಾಲ್ಲೂಕಿನ ಹೂವಿನಹೆಡಗಿ ಬಳಿ ಇರುವ ಗಡ್ಡೆಗೂಳಿ ಬಸವೇಶ್ವರ ದೇವಸ್ಥಾನ ಮುಳುಗಡೆಯಾಗಿದೆ. ಭಾನುವಾರ ಜಲಾಶಯದಿಂದ 25 ಗೇಟ್‌ಗಳ ಮೂಲಕ 1 ಲಕ್ಷ 5 ಸಾವಿರ ಕ್ಯುಸೆಕ್ ನೀರನ್ನು ಕೃಷ್ಣಾ ನದಿಗೆ ಬಿಡುಗಡೆ ಮಾಡಲಾಗಿದೆ. 2.5 ಲಕ್ಷ ಹರಿಸಿದಲ್ಲಿ ಹೂವಿನಹೆಡಗಿ ಸೇತುವೆ ಮುಳುಗಡೆಯಾಗಿ ದೇವದುರ್ಗ–ಕಲಬುರಗಿ ರಸ್ತೆ ಸಂಚಾರ ಬಂದ್ ಆಗಲಿದೆ.

ದೇವದುರ್ಗ ತಾಲ್ಲೂಕಿನ ಹೂವಿನಹೆಡಗಿ ಸೇತುವೆ ಬಳಿಯ ಗಡ್ಡೆಗೂಳಿ ಬಸವೇಶ್ವರ ದೇವಸ್ಥಾನ ಸಂಪೂರ್ಣ ಮುಳುಗಡೆಯಾಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.