ADVERTISEMENT

ರಾಯಚೂರು: ಪ್ರವಾಹ; ದುರಸ್ತಿ ಕಾಣದ ಸೇತುವೆಗಳು

ಜಲದುರ್ಗ, ಶೀಲಹಳ್ಳಿ, ಯಳಗುಂದಿ ಸೇತುವೆಗಳು ಭಾಗಶಃ ಶಿಥಿಲ: ದಶಕಗಳಾದರೂ ಸಮಸ್ಯೆಗೆ ಪರಿಹಾರ ಕೈಗೊಂಡಿಲ್ಲ

ನಾಗರಾಜ ಚಿನಗುಂಡಿ
Published 26 ಜುಲೈ 2021, 3:55 IST
Last Updated 26 ಜುಲೈ 2021, 3:55 IST
ರಾಯಚೂರು ತಾಲ್ಲೂಕಿನ ನಡುಗಡ್ಡೆ ಕುರ್ವಕುರ್ದಾಗೆ ಸಂರ್ಕಿಸಲು ನಿರ್ಮಿಸುತ್ತಿದ್ದ ಸೇತುವೆ ಕಾಮಗಾರಿ ಅರ್ಧಕ್ಕೆ ಉಳಿದು ದಶಕವಾಗಿದೆ
ರಾಯಚೂರು ತಾಲ್ಲೂಕಿನ ನಡುಗಡ್ಡೆ ಕುರ್ವಕುರ್ದಾಗೆ ಸಂರ್ಕಿಸಲು ನಿರ್ಮಿಸುತ್ತಿದ್ದ ಸೇತುವೆ ಕಾಮಗಾರಿ ಅರ್ಧಕ್ಕೆ ಉಳಿದು ದಶಕವಾಗಿದೆ   

ರಾಯಚೂರು: ಕೃಷ್ಣಾನದಿಗೆ ಪ್ರತಿ ವರ್ಷ ಮಳೆಗಾಲದಲ್ಲಿ ಪ್ರವಾಹ ಬರುವುದು ನಿರೀಕ್ಷಿತ. ಆದರೆ, 2009 ಮತ್ತು 2019ರಲ್ಲಿ ಉಂಟಾಗಿದ್ದ ಮಹಾಪ್ರವಾಹದಿಂದ ಜಿಲ್ಲೆಯಲ್ಲಿ ಅನೇಕ ಸೇತುವೆಗಳು ಹಾಳಾಗಿದ್ದರೂ ಇದುವರೆಗೂ ದುರಸ್ತಿ ಕ್ರಮ ಕೈಗೊಳ್ಳಲಾಗಿ‌ಲ್ಲ.

ಲಿಂಗಸುಗೂರು, ದೇವದುರ್ಗ ಹಾಗೂ ರಾಯಚೂರು ತಾಲ್ಲೂಕುಗಳ ಮೂಲಕ ಹರಿಯುವ ಕೃಷ್ಣಾನದಿಗೆ ನಿರೀಕ್ಷಿತ ಪ್ರವಾಹ ತಡೆಯುವುದಕ್ಕೆ ಮಾತ್ರ ಸೇತುವೆ ನಿರ್ಮಿಸಲಾಗಿದೆ. 7 ಲಕ್ಷ ಕ್ಯುಸೆಕ್‌ವರೆಗೂ ಬರುವ ಮಹಾಪ್ರವಾಹ ಸಂದರ್ಭದಲ್ಲಿ ಅನೇಕ ಕಡೆಗಳಲ್ಲಿ ಸಂಪರ್ಕ ಕಡಿತವಾಗುತ್ತದೆ. ಪ್ರವಾಹದಿಂದ ಮುಳುಗಡೆಯಾದ ಸೇತುವೆಗಳಿಗೆ ಹಾನಿ ಆಗುತ್ತಲೇ ಇದೆ. ಅವುಗಳನ್ನು ಸಮರ್ಪಕವಾಗಿ ದುರಸ್ತಿಗೊಳಿಸುವುದು ಮತ್ತು ಸೇತುವೆ ಎತ್ತರಿಸುವ ಕಾರ್ಯವನ್ನು ಜಿಲ್ಲಾಡಳಿತ ಮಾಡುತ್ತಿಲ್ಲ.

ಲಿಂಗಸುಗೂರು ತಾಲ್ಲೂಕಿನಲ್ಲಿ ಕೃಷ್ಣಾನದಿಯಲ್ಲಿ 10ಕ್ಕೂ ಹೆಚ್ಚು ಗ್ರಾಮಗಳು ನಡುಗಡ್ಡೆಯಲ್ಲಿವೆ. ಪ್ರವಾಹ ಉಂಟಾದಾಗ ಅಧಿಕಾರಿಗಳ ತಂಡವು ಧಾವಿಸುತ್ತದೆ. ಆದರೆ, 2009ರ ಮಹಾಪ್ರವಾಹದ ಸಂದರ್ಭದಲ್ಲಿ ಮಾಡಿದ್ದ ಯೋಜನೆಗಳನ್ನು ಜಾರಿಗೊಳಿಸಿಲ್ಲ. ಜಲದುರ್ಗ ಸೇತುವೆ, ಶೀಲಹಳ್ಳಿ ಸೇತುವೆ ಸ್ಥಿತಿ ಹಾಗೇ ಇದೆ. ದೇವದುರ್ಗದಲ್ಲಿ ಹೂವಿನಹೆಡಗಿ ಸೇತುವೆಯು 3 ಲಕ್ಷ ಕ್ಯುಸೆಕ್‌ ನೀರಿಗೆ ಮುಳುಗಡೆಯಾಗುತ್ತದೆ. ಇದರಿಂದ ಸೇತುವೆ ಮೇಲಿನ ರಸ್ತೆ ಅಲ್ಲಲ್ಲಿ ಕಿತ್ತುಹೋಗಿದೆ. ಸೇತುವೆಗೆ ಹೊಂದಿಕೊಂಡ ರಸ್ತೆಯೂ ಹಾಳಾಗಿದೆ.

ADVERTISEMENT

ರಾಯಚೂರು ತಾಲ್ಲೂಕಿನಲ್ಲಿ ಕೃಷ್ಣಾನದಿ ನಡುಗಡ್ಡೆಯಲ್ಲಿ ಕುರ್ವಕಲಾ, ಕುರ್ವಕುರ್ದಾ ಗ್ರಾಮಗಳು ಹಾಗೂ ಸುಕ್ಷೇತ್ರ ನಾರದಗಡ್ಡೆ ಇವೆ. ಆಂಧ್ರಪ್ರದೇಶ ಸರ್ಕಾರವು ಕರ್ನಾಟಕದ ಪಾಲುದಾರಿಕೆಯೊಂದಿಗೆ ಜುರಾಲಾ ಪ್ರಿಯದರ್ಶಿನಿ ಬ್ರಿಡ್ಜ್‌ ಕಂ ಬ್ಯಾರೇಜ್‌ ನಿರ್ಮಿಸುವ ಸಂದರ್ಭದಲ್ಲಿಯೇ ನಡುಗಡ್ಡೆಗಳಿಗೆ ಸೇತುವೆ ನಿರ್ಮಿಸುವುದಕ್ಕಾಗಿ ಅನುದಾನ ಒದಗಿಸಿದೆ. ಆದರೆ, ದಶಕಗಳಾದರೂ ಸೇತುವೆ ಕಾಮಗಾರಿ ಆರಂಭವಾಗಿಲ್ಲ.

ಡಿ.ರಾಂಪೂರ ಮತ್ತು ಕುರ್ವಕುರ್ದಾ ಮಧ್ಯೆ ಒಂದು ಸೇತುವೆ ನಿರ್ಮಾಣ ಆರಂಭಿಸಿ ಅರ್ಧಕ್ಕೆ ಕೈಬಿಡಲಾಗಿತ್ತು. ಅದು ಕೂಡಾ ಪ್ರವಾಹದ ಹೊಡೆತಕ್ಕೆ ಕೊಚ್ಚಿಹೋಗುತ್ತಿದೆ. ಹತ್ತಾರು ಕೋಟಿ ಅನುದಾನ ಈಗಲೂ ಜಿಲ್ಲಾಡಳಿತದಲ್ಲಿದೆ. ಬುರ್ದಿಪಾಡ ಮತ್ತು ಕುರ್ವಕಲಾ ಎದುರು ಇನ್ನೂ ಸೇತುವೆ ನಿರ್ಮಾಣ ಆರಂಭವೇ ಆಗಿಲ್ಲ. ಪ್ರತಿ ವರ್ಷ ಪ್ರವಾಹದ ಸಂದರ್ಭದಲ್ಲಿ ಮಾತ್ರ ಸೇತುವೆಗಳು ನನೆಗುದಿಗೆ ಬಿದ್ದಿರುವುದನ್ನು ಅಧಿಕಾರಿಗಳ ತಂಡವು ಪರಿಶೀಲಿಸುತ್ತಾ ಬರುತ್ತಿರುವುದು ವಾಡಿಕೆಯಾಗಿ ಪರಿಣಮಿಸಿದೆ.

ಸೇತುವೆ ನಿರ್ಮಾಣ ಪೂರ್ಣಗೊಳಿಸುವಂತೆ ಅನೇಕ ಸಂಘ, ಸಂಸ್ಥೆಗಳು ಪ್ರತಿಭಟನೆ ನಡೆಸಿ ಜಿಲ್ಲಾಡಳಿಕ್ಕೆ ಮನವಿ ಸಲ್ಲಿಸುತ್ತಾ ಬರುತ್ತಿವೆ. ಕಾಮಗಾರಿ ಆರಂಭಿಸುವುದಕ್ಕೆ ಇನ್ನೂ ಕಾಲ ಕೂಡಿ ಬರುತ್ತಿಲ್ಲ.

ಅನುದಾನದ ಕೊರತೆಯಿಲ್ಲ
ರಾಯಚೂರು ತಾಲ್ಲೂಕಿನ ಕೃಷ್ಣಾನದಿ ನಡುಗಡ್ಡೆಗಳಿಗೆ ಸೇತುವೆ ನಿರ್ಮಿಸಲು ಅನುದಾನದ ಕೊರತೆಯಿಲ್ಲ. ಈಗಲೂ ಜಿಲ್ಲಾಡಳಿತ ಬಳಿ ಬಡ್ಡಿ ಸೇರಿದಂತೆ ಸುಮಾರು ₹ 25 ಕೋಟಿ ಅನುದಾನವಿದೆ. ಇದೀಗ ಕೆಆರ್‌ಡಿಸಿಎಲ್‌ನಿಂದ ಡಿಪಿಆರ್‌ ಸಿದ್ಧಪಡಿಸಿದ ಬಳಿಕ ಸೇತುವೆಗಳಿಗೆ ಬೇಕಾಗುವ ಒಟ್ಟು ಅನುದಾನದ ಬಗ್ಗೆ ತಿಳಿಯಲಿದೆ.

ಶಿಥಿಲಾವಸ್ಥೆಯಲ್ಲಿ ಸೇತುವೆಗಳು
ಲಿಂಗಸುಗೂರು:
ಕೃಷ್ಣಾನದಿ ಮಧ್ಯ ಭಾಗದಲ್ಲಿನ ನಡುಗಡ್ಡೆ ಗ್ರಾಮಗಳನ್ನು ಸಂಪರ್ಕಿಸುವ ಜಲದುರ್ಗ, ಶೀಲಹಳ್ಳಿ ಮತ್ತು ಯಳಗುಂದಿ ಸೇತುವೆಗಳು ಭಾಗಶಃ ಶಿಥಿಲಗೊಂಡಿದ್ದು ನಡುಗಡ್ಡೆ ಗ್ರಾಮಗಳ ಜನತೆಯಲ್ಲಿ ಆತಂಕ ಹೆಚ್ಚಿಸಿದೆ.

ಆರು ದಶಕಗಳ ಹಿಂದೆ ನಿರ್ಮಾಣಗೊಂಡ ಜಲದುರ್ಗ ಸೇತುವೆ 2019ರ ಕೃಷ್ಣಾ ಪ್ರವಾಹದಲ್ಲಿ ಪ್ಯಾರಾಪಿಟ್‍ (ರೇಲಿಂಗ್) ಸಂಪೂರ್ಣ ಕಿತ್ತಿ ಹೋಗಿವೆ. ರಸ್ತೆ ಸೇತುವೆ ಸ್ಲ್ಯಾಬ್‍ಗಳಲ್ಲಿ ಕಂಪನ ಕಾಣಿಸಿಕೊಂಡಿದೆ.ಸ್ಲ್ಯಾಬ್‍ಕೆಳ ಮೈ ಸಿಮೆಂಟ್‍ಕಳಚಿ ಹೋಗಿದ್ದು ಅಲ್ಲಲ್ಲಿ ಕಬ್ಬಿಣದ ಸರಳು ತುಕ್ಕು ಹಿಡಿದಿವೆ. ಸೇತುವೆ ಪಿಲ್ಲರ್‌ ಕೆಳಭಾಗದ ಸುತ್ತಲೂ ಆಳವಾದ ಗುಂಡಿ ಕಾಣಿಸಿಕೊಂಡಿವೆ. ಪಿಲ್ಲರ್‌ ಜೋಡಣೆ ಆ್ಯಂಗ್ರಿಲ್‍ಗಳು ತುಕ್ಕು ಹಿಡಿದಿದ್ದರೂ ಶಾಶ್ವತ ದುರಸ್ತಿಗೆ ಮುಂದಾಗಿಲ್ಲ.

ಶೀಲಹಳ್ಳಿ ಸೇತುವೆ ಎರಡು ದಶಕಗಳ ಹಿಂದೆ ನಿರ್ಮಾಣಗೊಂಡಿದೆ. ಅತ್ಯಂತ ಕೆಳಮಟ್ಟದಲ್ಲಿ ನಿರ್ಮಾಣ ಮಾಡಿದ್ದರಿಂದ 1.50 ಲಕ್ಷ ಕ್ಯುಸೆಕ್‌ ನೀರು ಬಂದರೂ ಮುಳುಗಡೆಯಾಗುತ್ತಿದೆ. ದಶಕದಿಂದ ಪ್ರತಿ ವರ್ಷ ಪ್ರವಾಹ ಬಂದಾಗ ಸೇತುವೆ ಬಹುತೇಕ ಕೊಚ್ಚಿ ಹೋಗುವುದು ಸಾಮಾನ್ಯ. ತಾತ್ಕಾಲಿಕ ದುರಸ್ತಿ ಮೂಲಕ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುತ್ತಿದೆ. ಕೆಲ ವರ್ಷಗಳ ಹಿಂದೆ ನಿರ್ಮಾಣಗೊಂಡ ಯಳಗುಂದಿ ಸೇತುವೆ ಕೂಡ 2019ರಿಂದ ಶಿಥಿಲಗೊಂಡಿದ್ದು ಶಾಶ್ವತ ದುರಸ್ತಿ ಮಾಡುತ್ತಿಲ್ಲ.

ಪ್ರವಾಹ ಬಂದಾಗೊಮ್ಮೆ ಸೇತುವೆಗಳು ಭಾಗಶಃ ಕೊಚ್ಚಿ ಹೋಗುತ್ತಿದ್ದರು ಕೂಡ ಶಾಶ್ವತ ದುರಸ್ತಿಗೆ ಇಲಾಖೆಗಳು ಮುಂದಾಗುತ್ತಿಲ್ಲ. ಜಲದುರ್ಗ ಸೇತುವೆ ಪಿಲ್ಲರ್‌ ಸುತ್ತಲೂ ಗುಂಡಿಗಳು, ಸೇತುವೆ ಸ್ಲ್ಯಾಬ್‍ಗಳ ತುಕ್ಕು ಹಿಡಿದಿದ್ದು ಅಪಾಯದ ಮುನ್ಸೂಚನೆ ನೀಡಿವೆ. ಶೀಲಹಳ್ಳಿ ಸೇತುವೆ ಎತ್ತರಿಸುವಂತೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಶೀಲಹಳ್ಳಿ, ಯಳಗುಂದಿ ಸೇತುವೆಗಳ ಕಳಪೆ ಕಾಮಗಾರಿ ಮೇಲಿಂದ ಮೇಲೆ ದುರಸ್ತಿಗೆ ಸಾಕ್ಷಿಯಾಗಿದೆ ಎಂಬುದು ನಡುಗಡ್ಡೆ ಗ್ರಾಮಸ್ಥರ ಆರೋಪ.

ಸೇತುವೆ ರಸ್ತೆ ಸಂಪೂರ್ಣ ಹಾಳು
ದೇವಸೂಗೂರ (ಶಕ್ತಿನಗರ):
ರಾಯಚೂರು ಮತ್ತು ಹೈದರಾಬಾದ್ ಮಧ್ಯೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 167ರ ಮಾರ್ಗದಲ್ಲಿ ಇರುವ ದೇವಸೂಗೂರಿನ ಕೃಷ್ಣಾನದಿ ಸೇತುವೆಯ ಮೇಲ್ಭಾಗದ ರಸ್ತೆ ಸಂಪೂರ್ಣ ಹಾಳಾಗಿದ್ದು ವಾಹನ ಸವಾರರು ಆತಂಕದಲ್ಲೇ ಪ್ರಯಾಣ ಮಾಡುವಂತಾಗಿದೆ. ದೇವಸೂಗೂರಿನ ಕೃಷ್ಣಾನದಿಯ ಸೇತುವೆ 35 ಕಮಾನುಗಳನ್ನು ಹೊಂದಿದೆ. 20 ಅಡಿ ಅಗಲ, 2,488 ಅಡಿ ಉದ್ದ , 60 ಅಡಿ ಎತ್ತರದ ಸೇತುವೆಯನ್ನು ಅಂದಿನ ಹೈದರಬಾದ್ ನಿಜಾಮರಾಗಿದ್ದ ಮೀರ್‌ ಉಸ್ಮಾನ್ ಅಲೀಖಾನ್ ಬಹದ್ದೂರ್ ನಿರ್ಮಿಸಿದ್ದರು.

ರಾಷ್ಟ್ರೀಯ ಹೆದ್ದಾರಿ ಮಾರ್ಗದ ಸೇತುವೆಯ ಮೇಲ್ಭಾಗದ ರಸ್ತೆಯಲ್ಲಿ ವಾಹನಗಳ ಓಡಾಟ ಅತಿ ಹೆಚ್ಚಾಗಿದೆ. ಪ್ರತಿನಿತ್ಯ ಸರಕು ಸಾಗಣೆಯ ಲಾರಿಗಳು, ಸಿಮೆಂಟ್ ಸಾಗಿಸುವ ಟ್ಯಾಂಕರ್‌ಗಳು, ಹಾಗೂ ಕಲಬುರಗಿ, ಯಾದಗಿರಿ, ರಾಯಚೂರು, ಹೈದರಬಾದ್ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ತೆರಳುವ ಬಸ್‌ಗಳು ಈ ರಸ್ತೆ ಮೂಲಕವೇ ಓಡಾಡುತ್ತಿದ್ದು ಆತಂಕ ಇಮ್ಮಡಿಗೊಳಿಸಿದೆ. 2016ರಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಪ್ರಾಧಿಕಾರ ಸೇತುವೆ ನಿರ್ಮಾಣ ಕಾಮಗಾರಿ ನಡೆಸದೇ ಕೇವಲ ರಸ್ತೆ ನಿರ್ಮಿಸಿದ್ದರು. ಈಗ ಸೇತುವೆ ಮೇಲಿನ ರಸ್ತೆ ಸಂಪೂರ್ಣ ಹಾಳಾಗಿದ್ದು ಗುಂಡಿಗಳು ಬಿದ್ದಿವೆ. ರಸ್ತೆ ಮೇಲೆಲ್ಲಾ ಮಳೆ ನೀರು ಆವರಿಸಿಕೊಳ್ಳುತ್ತದೆ. ಕಬ್ಬಿಣದ ಸಲಕರಣೆಗಳು ಮೇಲೆ ಎದ್ದಿವೆ. ಇದರಿಂದ ಅಪಘಾತಗಳು ಸಂಭವಿಸಿವೆ. ಇದು ವಾಹನಗಳ ಸಂಚಾರಕ್ಕೆ ತೀವ್ರ ತೊಡಕು ಉಂಟು ಮಾಡುತ್ತಿದೆ ಎನ್ನುತ್ತಾರೆ ಸ್ಥಳೀಯರಾದ ಖಾಜಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.