ರಾಯಚೂರು: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿರುವ ಆಡಳಿತ ಕಚೇರಿ ಕಟ್ಟಡದಲ್ಲಿ ಕೃಷಿ ಮೇಳದ ಅಂಗವಾಗಿ ತೋಟಗಾರಿಕೆ ಇಲಾಖೆಯಿಂದ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ಪ್ರೇಕ್ಷಕರ ಕಣ್ಮನ ತಣಿಸುತ್ತಿದೆ.
ಆಡಳಿತ ಕಚೇರಿಯ ಪ್ರವೇಶ ದ್ವಾರದಲ್ಲಿಯೇ ಗೌತಮ ಬುದ್ಧ ಹಾಗೂ ಶ್ರೀಕೃಷ್ಣನ ಮೂರ್ತಿಗಳನ್ನು ಇಟ್ಟು ಅದರ ಸುತ್ತಲೂ ಅಲಂಕಾರಿಕ ಪುಷ್ಪಗಳಿನ್ನಿಟ್ಟು ಸಿಂಗರಿಸಲಾಗಿದೆ. ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರದರ್ಶನ ಮಳಿಗೆಗೆ ಹೋಗುವ ಮೊದಲೇ ಆಕರ್ಷಿತರಾಗಿ ಗುಂಪು ಗುಂಪಾಗಿ ಫೋಟೊ ತೆಗೆಸಿಕೊಂಡರೆ ಕೆಲವರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.
ಒಟ್ಟು 3,500 ಹೂವಿನ ಕುಂಡಗಳನ್ನು ಜೋಡಿಸಿಡಲಾಗಿದೆ. ಗುಲಾಬಿ, ಆರ್ಕೆಡ್, ಸೇವಂತಿಗೆ, ವೈವಿಧ್ಯಮ ಡೇರಿ ಹೂವುಗಳು ಕಣ್ಣಿಗೆ ಮುದ ನೀಡುತ್ತಿವೆ. ಸೀತಾಳ ಜಡೆ ಹೂವುಗಳನ್ನು ಜನ ಬೆರಗುಗಣ್ಣಿನಿಂದ ವೀಕ್ಷಿಸುತ್ತಿದ್ದಾರೆ. ಅಲಂಕಾರಿಕ ಪುಷ್ಪ ಹಾಗೂ ಹೂವಿನಕುಂಡಗಳನ್ನು ಜೋಡಿಸಿಟ್ಟು ಅವುಗಳ ಮಧ್ಯೆ ರಂಗೋಲಿ ಬಿಡಿಸಿ ಪ್ರದರ್ಶನದ ಮೆರುಗು ಹೆಚ್ಚಿಸಲಾಗಿದೆ.
ದೆಹಲಿಯಲ್ಲಿರುವ ಇಂಡಿಯಾ ಗೇಟ್ ಹಾಗೂ ಅಮರ್ ಜವಾನ್ ಪ್ರತಿಕೃತಿ ಪುಷ್ಪಗಳಲ್ಲಿ ಅರಳಿದೆ. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ರಂಗೋಲಿ ಬಿಡಿಸಿ ಅದರ ಬದಿಯಲ್ಲಿ ಪರಮವೀರ ಚಕ್ರ ಪುರಸ್ಕೃತ 21 ವೀರಯೋಧರ ಭಾವಚಿತ್ರಗಳನ್ನು ಕುಂಬಳಕಾಯಿಯಲ್ಲಿ ಕೆತ್ತಲಾಗಿದೆ. ಪ್ರದರ್ಶನ ವೀಕ್ಷಣೆಗೆ ಬರುವವರು ಬೆರಗುಗಣ್ಣಿನಿಂದ ಕುಂಬಳಕಾಯಿ ಕಲಾಕೃತಿಗಳನ್ನೇ ವೀಕ್ಷಿಸುತ್ತಿದ್ದಾರೆ.
ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಬೆಳೆದ ಸೋರೆಕಾಯಿ, ಬಾಟಲ್‌ನೆಕ್ ಸ್ವಾಷ್, ಹಳದಿ, ಹಸಿರು ಹಾಗೂ ಕಂದು ಬಣ್ಣದ ಡೊಣ ಮೆಣಸಿನಕಾಯಿ, ಹಸಿ ಮೆಣಸಿನಕಾಯಿ, ಪೇರಲ, ಬೂದುಕುಂಬಳ, ಬದನೆಕಾಯಿ, ಹಿರೇಕಾಯಿ, ಬಾಳೆಹಣ್ಣು, ಹಾಗಲಕಾಯಿ, ಸೀತಾಫಲ, ರಾಮಫಲ ಪ್ರದರ್ಶನಕ್ಕೆ ಇಡಲಾಗಿತ್ತು. ಇವುಗಳ ಮಧ್ಯೆ ತರಕಾರಿಯಿಂದ ರೂಪಿಸಿದ ಗಣೇಶನ ಪ್ರತಿಮೆ ಪ್ರೇಕ್ಷಕರ ಗಮನ ಸೆಳೆಯಿತು.
‘ಪುಷ್ಪಮೇಳದಲ್ಲಿ 500 ಕೆಂಪು ಗುಲಾಬಿ, ಬಿಳಿ ಗುಲಾಬಿ, ಹಳದಿ ಗುಲಾಬಿ, 30 ಬಗೆಯ ಆರ್ಕೆಡ್ ಗುಚ್ಛ, 600ಕ್ಕೂ ಅಧಿಕ ಸೇವಂತಿಗೆ ಹಾಗೂ ಡೇರಿ ಹೂವುಗಳನ್ನು ಪ್ರದರ್ಶಿಸಲಾಗಿದೆ. ಅಲಂಕಾರಿಕ ಸಸ್ಯಗಳನ್ನೂ ಪರಿಚಯಿಸಲಾಗಿದೆ’ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಹಮ್ಮದ್ ಅಲಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಜಮೀರ್ ಅಹಮ್ಮದ್ ಖಾನ್ ಮತ್ಸ್ಯ ಮೇಳ ಹಾಗೂ ಪೌರಾಡಳಿತ ಸಚಿವ ರಹೀಂ ಖಾನ್ ಫಲಪುಷ್ಪ ಪ್ರದರ್ಶನ ಉದ್ಘಾಟಿಸಲಿದ್ದಾರೆ. ಮೂರು ದಿನಗಳವರೆಗೂ ಪುಷ್ಪಗಳು ತಾಜಾ ಆಗಿ ಉಳಿದುಕೊಳ್ಳುವಂತೆ ವ್ಯವಸ್ಥೆ ಮಾಡಲಾಗಿದೆ. ಭಾನುವಾರ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರಲಿದ್ದಾರೆ’ ಎಂದು ಹೇಳಿದರು.
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿರುವ ಆಡಳಿತ ಕಚೇರಿ ಕಟ್ಟಡ ಕೆಳ ಮಹಡಿಯಲ್ಲಿ ಕೃಷಿ ಮೇಳದ ಅಂಗವಾಗಿ ಮೀನುಗಾರಿಕೆ ಇಲಾಖೆಯಿಂದ ಆಯೋಜಿಸಿರುವ ಮತ್ಸ್ಯಮೇಳ ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಮತ್ಸ್ಯಮೇಳದಲ್ಲಿ ಒಟ್ಟು 54 ಬಗೆಯ ಮೀನು ಮರಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಎಲ್ಲ ಮೀನುಗಳನ್ನೂ ರೈಲಿನಲ್ಲಿ ಚೆನ್ನೈನಿಂದ ತರಲಾಗಿದೆ. ಮೊಸಳೆ ಮಾದರಿಯ ಮೊಸಳೆ ಮೀನು ಬ್ಲ್ಯೂ ಪ್ಯಾರೆಟ್ ಬ್ಲಾಕ್ ಪ್ಯಾರೆಟ್ ಲಾಬಸ್ಟಾರ್ ಮೀನು ಅಲ್ಬಿನೊ ಪಿರಾನೊ ಮೀನುಗಳನ್ನು ತೊಟ್ಟಿಗಳಲ್ಲಿ ಇಡಲಾಗಿದ್ದು ಶಾಲಾ ಮಕ್ಕಳು ಆಸಕ್ತಿಯಿಂದ ನೋಡಲು ಬರುತ್ತಿದ್ದಾರೆ.
‘ಒಂದು ಮೊಸಳೆ ಮೀನಿಗೆ ₹ 1800 ಬೆಲೆ ಇದೆ. 20 ವರ್ಷ ಬದುಕುವ ಈ ಮೀನು ನಾಲ್ಕರಿಂದ ಐದು ಅಡಿ ಉದ್ದ ಬೆಳೆಯುತ್ತದೆ. ಈ ಮೀನನ್ನು ನೋಡುವುದೇ ಚೆಂದ’ ಎಂದು ಪ್ರದರ್ಶಕ ಮೋಹನ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.