ಮಸ್ಕಿ: ಪಟ್ಟಣದ ಅಶೋಕ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಫುಟ್‌ಪಾತ್, ಸರ್ವಿಸ್ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಇಡಲಾಗಿದ್ದ ಗೂಡಗಂಡಿ, ತಳ್ಳುಬಂಡಿಗಳ ತೆರವು ಕಾರ್ಯಾಚರಣೆ ನಡೆಯಿತು.
ಐಎಎಸ್ ಪ್ರೊಬೇಷನರಿ ಅಧಿಕಾರಿ ಪುರುರಾಜಸಿಂಗ್ ಸೋಲಂಕಿ ಹಾಗೂ ಪುರಸಭೆ ಮುಖ್ಯಾಧಿಕಾರಿ ನರಸರೆಡ್ಡಿ ನೇತೃತ್ವದಲ್ಲಿ ಶನಿವಾರ ಪುರಸಭೆ ಸಿಬ್ಬಂದಿ ಪೊಲೀಸ್ ಭದ್ರತೆಯಲ್ಲಿ ತೆರವುಗೊಳಿಸಿದರು.
ಸಿಪಿಐ ಬಾಲಚಂದ್ರ ಡಿ. ಲಕ್ಕಂ, ಪಿಎಸ್‌ಐ ಕೆ.ರಂಗಯ್ಯ ಪುಟ್ ಪಾತ್ ಮೇಲಿನ ಹಾಗೂ ಸರ್ವಿಸ್ ರಸ್ತೆಗೆ ಅಡ್ಡಿಯಾಗಿ ಇಟ್ಟಿರುವ ಅಂಗಡಿ ಮಾಲೀಕರು ತೆರವುಗೊಳಿಸುವಂತೆ ಸೂಚನೆ ನೀಡಿದರು.
ಹೆದ್ದಾರಿಯ ಡಿವೈಡರ್ ರಸ್ತೆಯ ಗ್ರಿಲ್‌ಗಳಿಗೆ ಕಟ್ಟಿರುವ ಅನಧಿಕೃತ ಬ್ಯಾನರ್‌ಗಳನ್ನು, ಪುಟ್‌ಪಾತ್ ಮೇಲಿನ ಡಬ್ಬಾ ಅಂಗಡಿಗಳನ್ನು ಪುರಸಭೆ ಸಿಬ್ಬಂದಿ ತೆರವುಗೊಳಿಸಿದರು. ಸರ್ವಿಸ್ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸಿದ್ದ ಬೈಕ್ ಹಾಗೂ ವಾಹನ ಸವಾರರಿಗೆ ರಸ್ತೆ ಬಿಟ್ಟು ನಿಲ್ಲಿಸಬೇಕು ಎಂದು ಸೂಚಿಸಲಾಯಿತು.
ರಸ್ತೆ ಬದಿ ಅಂಗಡಿಕಾರರು, ವ್ಯಾಪಾರಿಗಳಿಗೆ ತಮ್ಮ ಅಂಗಡಿಗಳಿಗೆ ಬರುವ ವಾಹನಗಳನ್ನು ಸರ್ವಿಸ್ ರಸ್ತೆ ಬಿಟ್ಟು ನಿಲ್ಲಿಸುವಂತೆ ತಿಳಿಸಬೇಕು ಎಂದು ಸೂಚಿಸಿದರು. ಫುಟ್‌ಪಾತ್ ಮೇಲೆ ಸಾರ್ವಜನಿಕರು ತಿರುಗಾಡುವಂತಾಗಬೇಕು. ಫುಟ್‌ಪಾತ್ ಮೇಲೆ ಡಬ್ಬಿ ಅಂಗಡಿಗಳನ್ನು ಇಟ್ಟು ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದರೆ ಕ್ರಮಕೈಗೊಳ್ಳಲಾಗುವುದು ಎಂದು ಸೋಲಂಕಿ ಎಚ್ಚರಿಸಿದರು.
ಬೀದಿ ವ್ಯಾಪಾರಿಗಳು ಸಾರ್ವಜನಿಕರಿಗೆ ತೊಂದರೆ ಆಗದಂತೆ ವ್ಯಾಪಾರ ನಡೆಸಬೇಕು ಎಂದು ಮನವಿ ಮಾಡಿದರು.
ಕಾರ್ ಹಾಗೂ ಗೂಡ್ಸ್ ಅಟೊಗಳ ನಿಲುಗಡೆಗೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಚಾಲಕರು ಅಧಿಕಾರಿಗಳಿಗೆ ಮನವಿ ಮಾಡಿದರು.
ಬಸ್ ನಿಲುಗಡೆ ಸ್ಥಳಾಂತರ: ಹಳೆಯ ಬಸ್ ನಿಲ್ದಾಣದಲ್ಲಿ ನಿಲ್ಲಿಸುತ್ತಿದ್ದ ಪ್ರಯಾಣಿಕರ ಸಾರಿಗೆ ಬಸ್ ಸೇರಿದಂತೆ ಇತರೆ ಎಲ್ಲಾ ವಾಹನಗಳನ್ನು ಇಂದಿನಿಂದಲೇ ಅಶೋಕ ವೃತ್ತದ ಬಳಿ ನಿಲ್ಲಿಸಬೇಕು ಎಂದು ಸೋಲಂಕಿ ಅವರು, ಈಶಾನ್ಯ ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕ ಆದಪ್ಪ ಅವರಿಗೆ ಸೂಚಿಸಿದರು.
ಸಾರಿಗೆ ಇಲಾಖೆಯಿಂದ ಹೊಸದಾಗಿ ಬಸ್ ನಿಲ್ಲಿಸುವ ಸ್ಥಳದಲ್ಲಿ ಸಿಬ್ಬಂದಿ ನಿಯೋಜಿಸಬೇಕು. ಇಲ್ಲಿ ರಸ್ತೆ ವಿಶಾಲ ಆಗಿರುವುದರಿಂದ ತೊಂದರೆಯಾಗುವುದಿಲ್ಲ. ಹಳೆಯ ಬಸ್ ನಿಲ್ದಾಣದಲ್ಲಿ ಟ್ರಾಫಿಕ್ ಸಮಸ್ಯೆ ತಪ್ಪಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ’ ಎಂದು ಹೇಳಿದರು.
ಆದೇಶ ಹಿನ್ನೆಲೆಯಲ್ಲಿ ಬಸ್ ಗಳನ್ನು ಅಶೋಕ ವೃತ್ತದಲ್ಲಿ ನಿಲ್ಲಿಸಲಾಯಿತು. ಮೈಕ್ ಮೂಲಕ ಬಸ್ ನಿಲುಗಡೆ ಸ್ಥಳಾಂತರದ ಬಗ್ಗೆ ಸಾರ್ವಜನಿರಿಗೆ ಮಾಹಿತಿ ನೀಡಲಾಯಿತು.
ಹಳೆ ಬಸ್ ನಿಲ್ದಾಣದಲ್ಲಿ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರಿಂದ ಪರ್ಯಾಯವಾಗಿ ಅಶೋಕ ವೃತ್ತದ ಬಳಿ ಸಾರಿಗೆ ಬಸ್ ನಿಲುಗಡೆಗೆ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ಪೊಲೀಸ ಇಲಾಖೆಯೊಂದಿಗೆ ಸಹಕರಿಸಬೇಕು.– ಬಾಲಚಂದ್ರ ಡಿ. ಲಕ್ಕಂ ಸಿಪಿಐ ಮಸ್ಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.