ADVERTISEMENT

ಟಿಎಲ್‌ಬಿಸಿ ಜಲಾಶಯದಿಂದ ಹಿಂಗಾರು ಹಂಗಾಮಿಗೆ ನೀರು ಹರಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 14:25 IST
Last Updated 21 ಅಕ್ಟೋಬರ್ 2024, 14:25 IST

ಸಿರವಾರ: ತುಂಗಭದ್ರಾ ಜಲಾಶಯದಿಂದ ಬೇಸಿಗೆ ಬೆಳೆಗೆ (ಹಿಂಗಾರು ಹಂಗಾಮು) ನೀರು ಹರಿಸಲು 122ನೇ ಸಲಹಾ ಸಮಿತಿ ಸಭೆ ಆಯೋಜಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಅಮರೇಶ ಗೌಡ ಒತ್ತಾಯಿಸಿದರು.

ಪಟ್ಟಣದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಲಾಶಯದಲ್ಲಿ ನೀರಿನ ಸಂಗ್ರಹವನ್ನು 101 ಟಿಎಂಸಿ ಅಡಿ ನಿಲ್ಲಿಸಿ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ. ಟಿಬಿ ಬೋರ್ಡ್ ಮತ್ತು ನೀರಾವರಿ ಅಧಿಕಾರಿಗಳು 105 ಟಿಎಂಸಿ ಅಡಿ ಭರ್ತಿ ಮಾಡಿ, ನವೆಂಬರ್ ಮೊದಲ ವಾರದಲ್ಲಿ ಮುನಿರಾಬಾದ್‌ನಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ ಬೇಸಿಗೆ ಬೆಳೆಗೆ ನೀರು ಹರಿಸಲು ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ತುಂಗಾಭದ್ರಾ ಎಡದಂಡೆ ನಾಲೆಯ ನೀರಾವರಿ ಇಲಾಖೆಯಲ್ಲಿ ಕಿರಿಯ ಎಂಜಿನಿಯರ್ ಮತ್ತು ಹಿರಿಯ ಎಂಜಿನಿಯರ್‌ ಹುದ್ದೆಗಳು ಖಾಲಿ ಇವೆ. ಅದರಲ್ಲೂ ಸಿರವಾರ ವಿಭಾಗದಲ್ಲಿ ಮಹಿಳಾ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು, ರಾತ್ರಿ ನೀರು ಹರಿಸಲು ಕಷ್ಟಕರವಾಗಿರುತ್ತದೆ. ರಾಜ್ಯ ಸರ್ಕಾರ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಇಲ್ಲವಾದಲ್ಲಿ ಬೇಸಿಗೆ ಬೆಳೆಗೆ ಕೆಳಭಾಗದ ರೈತರಿಗೆ ನೀರಿನ ಸಮಸ್ಯೆ ಎದುರಾಗದಂತೆ ಕ್ರಮಕೈಗೊಳ್ಳಬೇಕು ಎಂದು ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ ಎಸ್.ತಂಗಡಗಿ ಮತ್ತು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಅವರು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

ವೆಂಕಟೇಶ ಮಲ್ಲೆದೇವರಗುಡ್ಡ, ಶಿವಕುಮಾರ ಮಾಡಗಿರಿ, ಮುಸ್ತಫಾ, ಅಮರೇಶ ನಾಗೋಲಿ, ಜಗನ್ನಾಥ ಮಲ್ಲಾಪೂರು, ಶರಣಪ್ಪ ಗುಡದಿನ್ನಿ, ರಾಜಶೇಖರಯ್ಯ ಸ್ವಾಮಿ, ಅಮರೇಶ, ಸುಗೂರಯ್ಯ ಸ್ವಾಮಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.