ADVERTISEMENT

ಪೂರ್ವಾನುಮತಿ ಪಡೆಯದೆ ಗದ್ದುಗೆ ದುರಸ್ತಿ: ನಾಗರಿಕರ ಆಕ್ರೋಶ

ಜಲದುರ್ಗ ಕೋಟೆ ಆವರಣದಲ್ಲಿ ನಿಧಿಗಳ್ಳರ ಹಾವಳಿ: ನಾಗರಿಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 12 ಜೂನ್ 2022, 6:09 IST
Last Updated 12 ಜೂನ್ 2022, 6:09 IST
ಲಿಂಗಸುಗೂರು ತಾಲ್ಲೂಕಿನ ಜಲದುರ್ಗ ಕೋಟೆಯ ಮೇಲ್ಭಾಗದ ಸಂಗಮನಾಥ ದೇವರ ಕರ್ತೃ ಗದ್ದುಗೆ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದರು
ಲಿಂಗಸುಗೂರು ತಾಲ್ಲೂಕಿನ ಜಲದುರ್ಗ ಕೋಟೆಯ ಮೇಲ್ಭಾಗದ ಸಂಗಮನಾಥ ದೇವರ ಕರ್ತೃ ಗದ್ದುಗೆ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದರು   

ಲಿಂಗಸುಗೂರು: ಅನುಮತಿ ಪಡೆಯದೇ ಭಕ್ತರು ತಾಲ್ಲೂಕಿನ ಜಲದುರ್ಗ ಕೋಟೆ ಮೇಲ್ಭಾಗದಲ್ಲಿರುವ ಸಂಗಮನಾಥ ದೇವಸ್ಥಾನದ ಕರ್ತೃಗದ್ದುಗೆ ದುರಸ್ತಿಗೆ ಮುಂದಾಗಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

12ನೇ ಶತಮಾನದಲ್ಲಿ ಆದಿಲ್‍ಶಾಹಿ ಮತ್ತು ವಿಜಯನಗರ ಅರಸರ ಆಳ್ವಿಕೆಗೆ ಒಳಪಟ್ಟಿದ್ದ ಜಲದುರ್ಗ ಕೋಟೆಗೆ ತನ್ನದೆ ಆದ ಇತಿಹಾಸ ಇದೆ. ಆದರೆ, ಪುರಾತತ್ವ ಮತ್ತು ಪ್ರಾಚ್ಯ ವಸ್ತು ಇಲಾಖೆಗಳ ನಿರ್ಲಕ್ಷ್ಯ ಹಾಗೂ ನಿಧಿಗಳ್ಳರ ಹಾವಳಿಯಿಂದ ಇದು ವರ್ಷದಿಂದ ವರ್ಷಕ್ಕೆ ಹಾಳಾಗಿ ಹೋಗುತ್ತಿದೆ ಎಂದು ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಮನೆ, ಸಿ.ಸಿ ರಸ್ತೆ ನಿರ್ಮಾಣ, ಅಭಿವೃದ್ಧಿ ಹೆಸರಲ್ಲಿ ಎಲ್ಲೆಂದರಲ್ಲಿ ಗುಂಡಿ ತೋಡಿರುವ ಚಿತ್ರಣಗಳು ಸಾಮಾನ್ಯ. ಆದರೆ, ಕೆಲ ದಿನಗಳ ಹಿಂದೆ ಕೊಡೆಕಲ್ಲನ ಭಕ್ತರೊಬ್ಬರು ಅವನತಿ ಹಂತದಲ್ಲಿರುವ ಸಂಗಮನಾಥನ ಕರ್ತೃ ಗದ್ದುಗೆ ಹಾಗೂ ದೇವಸ್ಥಾನ ಆವರಣದ ಗೋಡೆಗಳ ಗರ್ಚು ಕಿತ್ತು, ಸಿಮೆಂಟ್‍ ಮಾಡಲು ಮುಂದಾಗಿರುವುದು ಸುತ್ತಮುತ್ತಲ ಗ್ರಾಮಸ್ಥರ ಆಕ್ರೋಶಕ್ಕೆ ದಾರಿ ಮಾಡಿಕೊಟ್ಟಿದೆ.

ADVERTISEMENT

‘ನಾಲ್ಕು ದಶಕಗಳಿಂದ ಪೂಜೆ ಸಲ್ಲಿಸುತ್ತ ಬಂದಿದ್ದೇವೆ. ಕುಡಿಯುವ ನೀರು, ಆಗಾಗ ಭಕ್ತರು ಹರಕೆ ತೀರಿಸುವಾಗ ನೆರವಾದ ಕಾರಣ ಬಂದ ಕಾಣಿಕೆಯಿಂದ ಬದುಕು ಕಟ್ಟಿಕೊಂಡಿದ್ದೇವೆ. ನಿಧಿಗಳ್ಳರಾಗಿದ್ದರೆ ಇಲ್ಲಿಯೇ ವಾಸ್ತವ್ಯ ಮಾಡುತ್ತಿರಲಿಲ್ಲ. ಭಕ್ತರೊಬ್ಬರು ಹರಕೆ ರೂಪದಲ್ಲಿ ಗದ್ದುಗೆ ದುರಸ್ತಿ ಮಾಡಿಸುತ್ತೇವೆ ಎಂದು ಅವರು ಹೇಳಿದರು.

ದುರಸ್ತಿಗೆ ಮುಂದಾಗಿದ್ದು ಸತ್ಯ. ಸಂಗಮನಾಥ ಕರ್ತೃ ಗದ್ದುಗೆಗೆ ಗ್ರಾನೈಟ್‍ ಲೇಪನ ಮಾಡಲು ಮುಂದಾಗಿದ್ದು ನಿಜ’ ಎಂದು ಪೂಜಾರಿ ಅವರು ಒಪ್ಪಿಕೊಂಡಿದ್ದಾರೆ.

ಸಂಗಮನಾಥನ ಕರ್ತೃ ಗದ್ದುಗೆ ದುರಸ್ತಿ ಮಾಡುತ್ತಿರುವ ಮಾಹಿತಿ ತಿಳಿಯುತ್ತಿದ್ದಂತೆ ತಹಶೀಲ್ದಾರ್ ಬಲರಾಮ ಕಟ್ಟಿಮನಿ, ಪೊಲೀಸ್‍ ಇನ್‌ಸ್ಪೆಕ್ಟರ್ ಮಹಾಂತೇಶ ಸಜ್ಜನ ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಮಾಹಿತಿ ಸಂಗ್ರಹಿಸಿದರು. ಸಂಬಂಧಿಸಿದ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಕಾನೂನಾತ್ಮಕ ಸಮಸ್ಯೆಗಳ ಕುರಿತು ಚರ್ಚಿಸಿ ಲಿಖಿತ ದೂರು ನೀಡಿದಲ್ಲಿ ಪ್ರಕರಣ ದಾಖಲಿಸುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.