ADVERTISEMENT

ಕಳಪೆ ಶೂ ಖರೀದಿ: ನಾಲ್ಕು ಮುಖ್ಯೋಪಾಧ್ಯಾಯರ ಅಮಾನತು

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 15:28 IST
Last Updated 13 ಫೆಬ್ರುವರಿ 2020, 15:28 IST

ರಾಯಚೂರು: ಜಿಲ್ಲೆಯಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಕಳಪೆ ಗುಣಮಟ್ಟದ ಶೂ ಖರೀದಿಸಿದ ಆರೋಪಕ್ಕೆ ಸಂಬಂಧಿಸಿದಂತೆ ನಾಲ್ವರು ಶಾಲಾ ಮುಖ್ಯೋಪಾಧ್ಯಾಯರನ್ನು ಅಮಾನತುಗೊಳಿಸಿ ಕಲಬುರ್ಗಿ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ಆದೇಶ ಹೊರಡಿಸಿದ್ದಾರೆ.

ದೇವದುರ್ಗದ ಅಲ್ಕೋಡ ಶಾಲೆಯ ಬಸವರಾಜ, ಆಕಳಕುಂಪಿ ಶಾಲೆಯ ಕೊಟ್ರೇಶ್, ಮಾನ್ವಿ ತಾಲ್ಲೂಕಿನ ರಾಜಲಬಂಡಾ ಶಾಲೆಯ ಗೀತಾ ಹಾಗೂ ರಾಯಚೂರು ತಾಲ್ಲೂಕಿನ ಮಲಿಯಾಬಾದ್‌ ಶಾಲೆಯ ಅಲಿಸಾ ಅವರನ್ನು ಅಮಾನತು ಮಾಡಲಾಗಿದೆ.

ಜಿಲ್ಲೆಯಲ್ಲಿ ಕಳಪೆ ಗುಣಮಟ್ಟದ ಬೂಟುಗಳನ್ನು ವಿತರಿಸಲಾಗಿದೆ ಎಂದು ಆರೋಪಿಸಿ ವಿವಿಧ ಸಂಘಟನೆಗಳು ಜಿಲ್ಲಾಡಳಿತದ ಮೂಲಕ ಶಿಕ್ಷಣ ಸಚಿವರಿಗೆ ದೂರು ಸಲ್ಲಿಸಿದ್ದರು. ಈ ಕುರಿತು ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಶಿಕ್ಷಣ ಸಚಿವರು ಆದೇಶಿಸಿದ್ದರು. ಅದರಂತೆ ಸಮಿತಿ ರಚಿಸಿ ತನಿಖೆ ನಡೆಸಲಾಗಿತ್ತು. ನಾಲ್ಕು ಪ್ರಾಥಮಿಕ ಶಾಲೆ ಹಾಗೂ ಮೂರು ಪ್ರೌಢ ಶಾಲೆಗಳಲ್ಲಿ ಅಕ್ರಮ ನಡೆದಿರುವುದು ಸಮಿತಿ ಉಲ್ಲೇಖಿಸಿದೆ.

ADVERTISEMENT

‘ಇನ್ನುಳಿದ ರಾಯಚೂರು ತಾಲ್ಲೂಕಿನ ಬಿಜನಗೇರ ಶಾಲೆಯ ಅರುಣಕುಮಾರ ದೇಸಾಯಿ, ಚಿಂಚೋಡಿ ಶಾಲೆಯ ಮಹಾಂತೇಶ, ರಾಯಚೂರ ನಗರದ ಎಲ್‌ಬಿಎಸ್ ಕಾಲೋನಿ ಶಾಲೆಯ ಶಿಕ್ಷಕ ಎಂ.ಎಚ್. ನಾಯಕ ಅವರ ವಿರುದ್ಧವೂ ಕ್ರಮ ಜರುಗಿಸಲಾಗುವುದು’ ಎಂದು ಡಿಡಿಪಿಐ ಎಚ್.ಬಿ.ಗೋನಾಳ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.