ಮಾನ್ವಿ: ಪಟ್ಟಣದಲ್ಲಿ ರಾಜ್ಯ ಹೆದ್ದಾರಿ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ಆರಂಭಿಸುವ ಕುರಿತು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್) ಹಾಗೂ ಪುರಸಭೆ ಅಧಿಕಾರಿಗಳು, ರಸ್ತೆ ನಿರ್ಮಾಣದ ಗುತ್ತಿಗೆ ಸಂಸ್ಥೆ ಅಧಿಕಾರಿಗಳು ಶುಕ್ರವಾರ ಪರಿಶೀಲನೆ ನಡೆಸಿದರು.
ಪಟ್ಟಣ ವ್ಯಾಪ್ತಿಯಲ್ಲಿ ಚತುಷ್ಪಥದ ಸರಹದ್ದು ಗುರುತಿಸಿ ಗುರುತು ಹಾಕುವ ಕಾರ್ಯ ಕೈಗೊಳ್ಳಲಾಯಿತು.
ಕೆಆರ್‌ಡಿಸಿಎಲ್‌ನ ಎಇಇ ಮಂಜುನಾಥ ಜವಳಿ ಮಾತನಾಡಿ,‘ಕಲ್ಮಲಾ ವೃತ್ತದಿಂದ ಸಿಂಧನೂರುವರೆಗೆ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ಈಗಾಗಲೇ ಕೈಗೊಳ್ಳಲಾಗಿದೆ. ಗ್ರಾಮೀಣ ಭಾಗದಲ್ಲಿ 59 ಕಿ.ಮೀ ರಸ್ತೆ ನಿರ್ಮಾಣವಾಗಲಿದೆ. ರಸ್ತೆ ಮಧ್ಯದಿಂದ ಎಡಭಾಗದಲ್ಲಿ 22.5 ಮೀಟರ್ ಹಾಗೂ ಬಲಭಾಗದಲ್ಲಿ 22.5 ಮೀಟರ್, ಮಧ್ಯದಲ್ಲಿ ರಸ್ತೆ ವಿಭಜಕ ನಿರ್ಮಾಣ ಮಾಡಲಾಗುತ್ತಿದೆ’ ಎಂದರು.
‘ಪಟ್ಟಣ ಪ್ರದೇಶದಲ್ಲಿ 18 ಕಿ.ಮೀ ಚತುಷ್ಪಥ ರಸ್ತೆ ನಿರ್ಮಿಸಲಾಗುತ್ತದೆ. ಪಟ್ಟಣದಲ್ಲಿ ರಸ್ತೆ ಮಧ್ಯದಿಂದ ಎಡಭಾಗದಲ್ಲಿ 15 ಮೀಟರ್ ಹಾಗೂ ಬಲಭಾಗದಲ್ಲಿ 15 ಮೀಟರ್ ಮಧ್ಯದಲ್ಲಿ ರಸ್ತೆ ವಿಭಜಕ ಹಾಗೂ ಎರಡೂ ಬದಿಯಲ್ಲಿ ಚರಂಡಿ ನಿರ್ಮಾಣ ಮಾಡಲಾಗುವುದು’ ಎಂದು ಹೇಳಿದರು.
‘ಇದುವರೆಗೂ ಗ್ರಾಮೀಣ ಭಾಗದಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಮಾಡಲಾಗಿದ್ದು, ರಸ್ತೆ ನಿರ್ಮಾಣಕ್ಕೆ ರೈತರಿಂದ ಅಗತ್ಯ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಪಟ್ಟಣ ಪ್ರದೇಶದಲ್ಲಿ ಯಾವುದೇ ಸ್ಥಳವನ್ನು ಸ್ವಾಧೀನಪಡಿಸಿಕೊಳ್ಳದೆ ಈಗಿರುವ ರಸ್ತೆಯ ಜಾಗದಲ್ಲಿಯೇ ಚತುಷ್ಪಥ ರಸ್ತೆ ನಿರ್ಮಾಣ ಮಾಡಲಾಗುವುದು’ ಎಂದು ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ಪರಶುರಾಮ ದೇವಮಾನೆ ಮಾತನಾಡಿ,‘ಪಟ್ಟಣದಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಗುರುತು ಹಾಕಿದ ಸ್ಥಳದವರೆಗೂ ಇರುವ ಕಟ್ಟಡ, ಕಟ್ಟೆಗಳು ಸೇರಿದಂತೆ ತಡೆಗೋಡೆಗಳು, ರಸ್ತೆ ಬದಿಯ ಅಂಗಡಿಗಳನ್ನು ಸಾರ್ವಜನಿಕರು ಸ್ವಯಂ–ಪ್ರೇರಿತರಾಗಿ ತೆರವುಗೊಳಿಸುವ ಮೂಲಕ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಸಹಕಾರ ನೀಡಬೇಕು’ ಎಂದು ಕೋರಿದರು.
ಕೆಆರ್‌ಡಿಸಿಎಲ್ ಸಂಸ್ಥೆಯ ಎಇ ವಿನೋದ್, ರಸ್ತೆ ನಿರ್ಮಾಣ ಗುತ್ತಿಗೆ ಸಂಸ್ಥೆಯ ಯೋಜನಾ ವ್ಯವಸ್ಥಾಪಕ ಎಂ.ವಿ.ವಿ ಸುಬ್ರಹ್ಮಣ್ಯ ರಾವ್, ಪುರಸಭೆಯ ಆರೋಗ್ಯ ನಿರೀಕ್ಷಕ ಮಹೇಶ ಮತ್ತು ಪುರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.