ADVERTISEMENT

ಕಲಿಕಾ ಗುಣಮಟ್ಟ ಸುಧಾರಣೆಗೆ ಸಹಕಾರ: ಜಿಲ್ಲಾಧಿಕಾರಿ

ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರಿಗೆ ಉಚಿತ ಟ್ಯಾಬ್ ವಿತರಣೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2022, 14:39 IST
Last Updated 25 ನವೆಂಬರ್ 2022, 14:39 IST
ರಾಯಚೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಎಲ್‌.ಚಂದ್ರಶೇಖರ್‌ ನಾಯಕ ಅವರು ನಾಂದಿ ಫೌಂಡೇಷನ್ ಸಹಯೋಗದಲ್ಲಿ ಶಾಲಾ ಬಾಲಕಿಯರಿಗೆ ಉಚಿತವಾಗಿ ಟ್ಯಾಬ್‌ ವಿತರಿಸುವುದಕ್ಕೆ ಶುಕ್ರವಾರ ಚಾಲನೆ ನೀಡಿದರು.
ರಾಯಚೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಎಲ್‌.ಚಂದ್ರಶೇಖರ್‌ ನಾಯಕ ಅವರು ನಾಂದಿ ಫೌಂಡೇಷನ್ ಸಹಯೋಗದಲ್ಲಿ ಶಾಲಾ ಬಾಲಕಿಯರಿಗೆ ಉಚಿತವಾಗಿ ಟ್ಯಾಬ್‌ ವಿತರಿಸುವುದಕ್ಕೆ ಶುಕ್ರವಾರ ಚಾಲನೆ ನೀಡಿದರು.   

ರಾಯಚೂರು: ಕಲಿಕಾ ಸಾಮಾರ್ಥ್ಯ ಹೆಚ್ಚಳ ಮಾಡಲು ಟ್ಯಾಬ್‌ಗಳನ್ನು ವಿತರಣೆ ಮಾಡುತ್ತಿದ್ದು, ಸರ್ಕಾರೇತರ ಸಂಸ್ಥೆಗಳಿಂದ ಮುಂದಿನ ದಿನಗಳಲ್ಲಿಯೂ ಇನ್ನೂ ಹೆಚ್ಚಿನ ಕಾರ್ಯ ಕೈಗೊಳ್ಳಲು ಜಿಲ್ಲಾಡಳಿತದಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಎಲ್‌.ಚಂದ್ರಶೇಖರ್‌ ನಾಯಕ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ಮಹಾತ್ವಾಕಾಂಕ್ಷಿ ಜಿಲ್ಲೆಯ ಕಾರ್ಯಕ್ರಮದಡಿ ನಾಂದಿ ಫೌಂಡೇಷನ್ ಸಹಯೋಗದಲ್ಲಿ ರಾಯಚೂರು, ಮಾನ್ವಿ ಹಾಗೂ ಸಿರವಾರ ತಾಲ್ಲೂಕುಗಳ 1ರಿಂದ 8ನೇ ತರಗತಿ ಸರ್ಕಾರಿ ಶಾಲೆಯ ಬಾಲಕಿಯರಿಗೆ 6 ಸಾವಿರ ಉಚಿತ ಟ್ಯಾಬ್ ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಕಲಿಕಾ ಗುಣಮಟ್ಟವನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಸರ್ಕಾರೇತರ ಸಂಸ್ಥೆಗಳಿಂದ ಉತ್ತಮ ಕಾರ್ಯಗಳಾಗುತ್ತಿದ್ದು, ನಾಂದಿ ಫೌಂಡೇಷನ್ ವತಿಯಿಂದ ಈಗ ಜಿಲ್ಲೆಯ 6 ಸಾವಿರ ಮಕ್ಕಳಿಗೆ ಟ್ಯಾಬ್‌ ವಿತರಿಸಲಾಗುತ್ತಿದೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡುವ ನಿಟ್ಟಿನಲ್ಲಿ ನಾಂದಿ ಫೌಂಡೇಷನ್ ವತಿಯಿಂದ ಟ್ಯಾಬ್ ವಿತರಣೆ ಮಾಡಲಾಗುತ್ತಿದೆ ಎಂದರು.

ADVERTISEMENT

ಪಾಲಕರು ಮತ್ತು ಶಿಕ್ಷಕರು ಉತ್ತಮ ರೀತಿಯಲ್ಲಿ ವಿದ್ಯಾರ್ಥಿನಿಯರು ಶಿಕ್ಷಣವನ್ನು ಪಡೆದುಕೊಳ್ಳಲು ಹೆಚ್ಚಿನ ಒತ್ತು ನೀಡಬೇಕು. ಹೆಣ್ಣು ಮಕ್ಕಳು ಉತ್ತಮ ರೀತಿಯಲ್ಲಿ ಶಿಕ್ಷಣ ಪಡೆಯಬೇಕಾದರೆ ಜಿಲ್ಲೆಯಲ್ಲಿ ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ದತಿ ಸೇರಿದಂತೆ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುವ ಚಟುವಟಿಕೆಗಳು ಮೊದಲು ನಿರ್ಮೂಲನೆಯಾಗಬೇಕಿದೆ ಎಂದು ತಿಳಿಸಿದರು.

ಸರ್ಕಾರಿ ಶಾಲೆಯ ಶಿಕ್ಷಕರು ಮಕ್ಕಳಿಗೆ ನೀಡಲಾಗುವ ಟ್ಯಾಬ್‌ಗಳನ್ನು ಉತ್ತಮವಾಗಿ ಬಳಕೆ ಮಾಡುವ ಕುರಿತು ಹೆಚ್ಚಿನ ಗಮನಹರಿಸಬೇಕು. ಮಕ್ಕಳಲ್ಲಿ ಹೆಚ್ಚಿನ ಜ್ಞಾನ ವೃದ್ಧಿಯಾಗಲು ಶ್ರಮ ವಹಿಸಬೇಕು ಎಂದು ಹೇಳಿದರು.

ಆಧುನಿಕ ತಂತ್ರಜ್ಞಾನ ಯುಗದಲ್ಲಿ ಶಿಕ್ಷಣಕ್ಕೆ ಬೇಕಾದ ಎಲ್ಲಾ ಕಲಿಕಾ ಸಾಮಗ್ರಿಗಳನ್ನು ಟ್ಯಾಬ್‌ಗಳಲ್ಲಿ ಅಳವಡಿಸಲಾಗಿದ್ದು, ಈ ಸೌಕರ್ಯವನ್ನು ವಿದ್ಯಾರ್ಥಿನಿಯರು ಸೇತುವೆಯಂತೆ ಉಪಯೋಗಿಸಿಕೊಂಡು ಉನ್ನತ ಸ್ಥಾನಕ್ಕೆ ತಲುಪಿ ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗಬೇಕು ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಮಾತನಾಡಿ, ಮಕ್ಕಳು ಟ್ಯಾಬ್‌ಗಳನ್ನು ಬಳಸಿಕೊಂಡು ಉತ್ತಮ ಶಿಕ್ಷಣ ಪಡೆದು ಉನ್ನತ ಸ್ಥಾನ ಪಡೆದು ಪಾಲಕರು, ಶಿಕ್ಷಕರು, ಶಾಲೆ, ಜಿಲ್ಲೆ ಹಾಗೂ ರಾಜ್ಯಕ್ಕೆ ಕೀರ್ತಿ ತರುವತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ನಗರದ 15 ಸರ್ಕಾರಿ ಶಾಲೆಯ ಬಾಲಕಿಯರಿಗೆ ಟ್ಯಾಬ್ ವಿತರಣೆ: ಜಿಲ್ಲೆಯ ರಾಯಚೂರು, ಮಾನ್ವಿ ಹಾಗೂ ಸಿರವಾರ ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ 6000 ಟ್ಯಾಬ್ ವಿತರಣೆ ಮಾಡಿದ್ದು, ನಗರದ ಒಟ್ಟು 15 ಶಾಲೆಗಳಿಗೆ ಉಚಿತ ಟ್ಯಾಬ್ ವಿತರಣೆ ಮಾಡಲಾಯಿತು.

ಜಿಲ್ಲಾ ಪ್ರೊಬೇಷನರಿ ಐಎಎಸ್ ಅಧಿಕಾರಿ ಅಪರ್ಣಾ ರಮೇಶ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವೃಷಬೇಂದ್ರಯ್ಯ, ನಾಂದಿ ಫೌಂಡೇಷನ್‌ನ ಕಾರ್ಯಕ್ರಮ ಅಧಿಕಾರಿ ಸೈಯದಾ ಷಹಗುಫ್ತಾ, ಮಹತ್ವಾಕಾಂಕ್ಷೆ ಜಿಲ್ಲೆ ಕಾರ್ಯಕ್ರಮಾಧಿಕಾರಿ ಯೂಸೂಫ್ ಅಲಿ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಭಂಡಾರಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.