ADVERTISEMENT

ರಾಯಚೂರಿನಲ್ಲೂ ಎಫ್‌ಎಸ್‌ಎಲ್‌ ಶೀಘ್ರ

ಪೊಲೀಸರೊಂದಿಗೆ ಸಭೆ: ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2020, 13:12 IST
Last Updated 28 ನವೆಂಬರ್ 2020, 13:12 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ರಾಯಚೂರು: ರಾಜ್ಯಮಟ್ಟದ ಅತ್ಯಾಧುನಿಕ ಪ್ರಯೋಗಾಲಯವನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಉದ್ಘಾಟಿಸಿದ್ದಾರೆ. ಗುಜರಾತ್‌ ನಂತರ ಅತ್ಯಾಧುನಿಕ ಸೌಲಭ್ಯಗಳಿರುವ ಪ್ರಯೋಗಾಲಯ ಇದಾಗಿದೆ. ಮುಂಬರುವ ದಿನದಲ್ಲಿ ರಾಯಚೂರಿನಲ್ಲೂ ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್‌) ಸ್ಥಾಪಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ಶನಿವಾರ, ಪೊಲೀಸ್‌ ಕಾರ್ಯಚಟುವಟಿಕೆಗಳ ಅವಲೋಕನ ಸಭೆ ಪೂರ್ವ ಸುದ್ದಿಗಾರರೊಂದಿಗೆ ಮಾತನಾಡಿದರು.

ವಿಭಾಗೀಯ ಮಟ್ಟದಲ್ಲಿ ಮೊದಲ ಹಂತದಲ್ಲಿ ಪ್ರಯೋಗಾಲಯ ಮಾಡಲಾಗುವುದು. ಎರಡನೇ ಹಂತದಲ್ಲಿ ಪ್ರತಿ ಜಿಲ್ಲೆಯಲ್ಲೂ ಮಾಡಲಾಗುವುದು. ಪೊಲೀಸ್‌ ವ್ಯವಸ್ಥೆಯ ಆಧುನೀಕರಣದ ಅಗತ್ಯವಿದ್ದು, ಮೊದಲ ಚರಣ ಈಗಾಗಲೇ ₹100 ಕೋಟಿ ಅನುದಾನದಲ್ಲಿ ಆರಂಭಿಸಲಾಗಿದೆ. ಕೇಂದ್ರ ಸರ್ಕಾರದ ಅನುದಾನದಲ್ಲೂ ಈ ಯೋಜನೆ ಕಾರ್ಯಗತ ಮಾಡಲಾಗುವುದು ಎಂದು ತಿಳಿಸಿದರು.

ADVERTISEMENT

ಪೊಲೀಸ್‌ ಠಾಣೆಗಳ ಅಭಿವೃದ್ಧಿ, ವಾಹನಗಳ ಖರೀದಿ, ಶಸ್ತ್ರಾಸ್ತ್ರಗಳ ಕರೀದಿ, ಕ್ಯಾಮರಾ ಸೇರಿದಂತೆ ಹಲವು ಸೌಲಭ್ಯಗಳನ್ನು ಹೆಚ್ಚಿಸಲಾಗುವುದು. ಎಲ್ಲ ಹಂತದಲ್ಲೂ ಪ್ರಯೋಗಾಲಯ ಕಾರ್ಯಕ್ಷಮತೆ ಹೆಚ್ಚಿಸಲಾಗಿದೆ. ಬೆರಳಚ್ಚು, ವಿಷ ಪದಾರ್ಥ, ಮಾದಕದ್ರವ್ಯ ಹಾಗೂ ಸೈಬರ್‌ಗೆ ಸಂಬಂಧಿಸಿದ ಪರೀಕ್ಷೆ ನಡೆಸಲಾಗುವುದು ಎಂದು ಹೇಳಿದರು.

ಮಾನವ ಕಳ್ಳಸಾಗಣೆ ಅಂತರರಾಷ್ಟ್ರೀಯ ಮಟ್ಟದ ಅಪರಾಧವಾಗಿದೆ. ಶಶ್ತ್ರಾಸ್ತ್ರ ಸಾಗಣೆ, ಮಾದಕದ್ರವ್ಯ ಹಾಗೂ ಮಾನವ ಸಾಗಣೆ ಅಪರಾಧಗಳನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ಈ ಮೂರು ಪ್ರಕರಣಗಳ ಅಪರಾಧವನ್ನು ಬೇಧಿಸಲು ಅಗತ್ಯ ಕಾರ್ಯಪಡೆ ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.

ಪೊಲೀಸ್‌ ಠಾಣೆಗಳ ಆಧುನೀಕರಣ ಮಾಡುವುದಕ್ಕೆ ಸಂಬಂಧಿಸಿದಂತೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಯಿಂದ ಪಡೆದುಕೊಳ್ಳಬೇಕಿದ್ದ ಅನುದಾನದ ನೆರವು ಪಡೆದಿಲ್ಲ. ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕಿದೆ. ಈ ಭಾಗದಲ್ಲಿ ಇದುವರೆಗೂ ಆಗದಿರುವ ಕೆಲಸಗಳನ್ನು ಮಾಡಿಕೊಡಲಾಗುವುದು. 371 (ಜೆ) ಪ್ರಮಾಣಪತ್ರ ಆಧರಿಸಿ ಬಡ್ತಿ ನೀಡುವ ಹಂತದಲ್ಲಿ ಸಮಗ್ರ ಪರಿಶೀಲನೆ ಮಾಡುವುದಕ್ಕೆ ಸೂಚಿಸಲಾಗಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಿವನಗೌಡ ನಾಯಕ, ಕರ್ನಾಟಕ ರಾಜ್ಯ ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಶಿವರಾಜ ಪಾಟೀಲ, ಶಾಸಕ ವೆಂಕಟರಾವ್‌ ನಾಡಗೌಡ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.