ADVERTISEMENT

ಕೊನೆಯಾಗದ ಭಾವಿ ಪಿಯುಸಿ ಉಪನ್ಯಾಸಕರ ಅಲೆದಾಟ!

ನೇಮಕ ಪ್ರಕ್ರಿಯೆ ಬಹುತೇಕ ಮುಗಿದು ಆರು ವರ್ಷಗಳಾದರೂ ಆದೇಶ ನೀಡಿಲ್ಲ

ನಾಗರಾಜ ಚಿನಗುಂಡಿ
Published 16 ಜೂನ್ 2020, 20:30 IST
Last Updated 16 ಜೂನ್ 2020, 20:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ರಾಯಚೂರು: ಪದವಿಪೂರ್ವ ಕಾಲೇಜು ಉಪನ್ಯಾಸಕರ ಹುದ್ದೆಗಳಿಗೆ 2015 ರಲ್ಲಿ ಪರೀಕ್ಷೆ ಬರೆದು ಆಯ್ಕೆಯಾಗಿರುವ ಅರ್ಹರೆಲ್ಲರೂ ಅಂದುಕೊಂಡಂತೆ ಆಗಿದ್ದರೆ, ಸರ್ಕಾರಿ ನೌಕರರಾಗಿ ಐದು ವರ್ಷಗಳಾತ್ತಿತ್ತು. ಆದರೆ, ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಆದೇಶ ಪತ್ರ ನೀಡುವುದನ್ನು ಮಾತ್ರ ಬಾಕಿ ಉಳಿಸಿದ್ದರಿಂದ ರಾಜ್ಯದ ವಿವಿಧೆಡೆ 1,203 ಭಾವಿ ಉಪನ್ಯಾಸಕರು ತ್ರಿಶಂಕು ಸ್ಥಿತಿಯಲ್ಲಿ ಅಲೆದಾಡುತ್ತಿದ್ದಾರೆ.

ಆದೇಶ ಬಾಕಿ ಇರುವುದರಿಂದ, ವರ್ಷದ ಮಧ್ಯದಲ್ಲೇ ಕೆಲಸ ಬಿಡುತ್ತಾರೆ ಎಂದು ಖಾಸಗಿ ಕಾಲೇಜುಗಳಲ್ಲಿಯೂ ಯಾರೂ ಕೆಲಸ ಕೊಡುತ್ತಿಲ್ಲ. ಪೂರ್ಣ ಮನಸ್ಸಿನಿಂದ ಬೇರೆ ಉದ್ಯೋಗ ಮಾಡುವ ಸ್ಥಿತಿಯಲ್ಲೂ ಭಾವಿ ಉಪನ್ಯಾಸಕರಿಲ್ಲ. ಸರ್ಕಾರದತ್ತ ಭರವಸೆಯಿಂದ ಕಣ್ಣುಬಿಟ್ಟು ಕಾಲಕಳೆಯುತ್ತಿದ್ದಾರೆ. ರಾಯಚೂರು ಜಿಲ್ಲೆಯಿಂದ ಸುಮಾರು 80 ಕ್ಕೂ ಹೆಚ್ಚು ಸ್ನಾತಕೋತ್ತರ ಪದವಿಧರರು ಆಯ್ಕೆಯಾಗಿದ್ದಾರೆ. ಜಿಲ್ಲೆಗೆ ಬರುವ ಉಸ್ತುವಾರಿ ಸಚಿವರಿಗೆ, ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮನವಿ ಮೇಲೆ ಮನವಿ ಸಲ್ಲಿಸಿ ಸಂಕಷ್ಟ ಹೇಳಿಕೊಳ್ಳುತ್ತಿದ್ದಾರೆ.

ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ನೇಮಕಾತಿ ಆದೇಶ ವಿಳಂಬಕ್ಕೆ ಸಕಾರಣ ಏನೂ ಇಲ್ಲ. ಪದವಿಪೂರ್ವ ಶಿಕ್ಷಣ ಇಲಾಖೆಯ ಹಾಲಿ ನಿರ್ದೇಶಕಿ ಎಂ.ಕನಗವಲ್ಲಿ ಅವರಿಗೂ ಮನವಿ ಸಲ್ಲಿಕೆಯಾಗಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಂ. ಸುರೇಶಕುಮಾರ್‌ ಅವರಿಗೂ ಗಮನಕ್ಕೆ ತಂದಿದ್ದಾರೆ. ಜೂನ್‌ 18 ರಂದು ಪಿಯುಸಿ ಪರೀಕ್ಷೆ ಮುಕ್ತಾಯದ ಬಳಿಕ ಆದೇಶಪತ್ರ ನೀಡುವ ಪ್ರಕ್ರಿಯೆ ನಡೆಸಲಾಗುವುದು ಎನ್ನುವ ಭರವಸೆ ಸಿಕ್ಕಿದೆ. ಈಗಲಾದರೂ ಆದೇಶಪತ್ರ ಬರಬಹುದು ಎನ್ನುವ ಪೂರ್ಣ ವಿಶ್ವಾಸದಿಂದ ಕಾಯುತ್ತಿದ್ದಾರೆ. ಆದರೆ, ಈ ಹಿಂದೆಯೂ ಭರವಸೆ ಈಡೇರಿಲ್ಲ ಎನ್ನುವ ಕಹಿ ಅನುಭವದಿಂದ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಕೊಡುವುದನ್ನು ಮಾತ್ರ ನಿಲ್ಲಿಸಿಲ್ಲ.

ADVERTISEMENT

ಜೀವನ ನಿರ್ವಹಣೆಗೆ ತಾಪತ್ರಯ ಅನುಭವಿಸುತ್ತಿರುವ ಭಾವಿ ಶಿಕ್ಷಕರು, ನೇಮಕ ಆದೇಶ ಪತ್ರಕ್ಕಾಗಿ ಆಗಾಗ ಬೆಂಗಳೂರಿಗೆ ಅಲೆದಾಡುತ್ತಿದ್ದಾರೆ ‘ಉಪನ್ಯಾಸಕ ಹುದ್ದೆಗಳಿಗೆ ಆಯ್ಕೆಯಾಗಿರುವ ಅರ್ಹರೆಲ್ಲರೂ ಒಗ್ಗಟ್ಟಾಗಿದ್ದೇವೆ. ಬೆಂಗಳೂರಿನಲ್ಲಿ ಸೇರಿ ಸಚಿವರಿಗೆ ಮತ್ತು ಆಧಿಕಾರಿಗಳಿಗೆ ಆಗಾಗ ಮನವಿ ಕೊಡುತ್ತಾ ಬರುತ್ತಿದ್ದೇವೆ. ನಮ್ಮಲ್ಲಿ ಬಹಳಷ್ಟು ಜನರು ಬಡವರಿದ್ದು ಬೆಂಗಳೂರಿಗೆ ಬರುವುದಕ್ಕೆ ಮತ್ತು ನಿತ್ಯ ಜೀವನ ಸಾಗಿಸಲು ಪರದಾಡುತ್ತಿದ್ದಾರೆ. ಸಾಲ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ’ ಎಂದು ಉಪನ್ಯಾಸಕ ಹುದ್ದೆಗೆ ಆಯ್ಕೆಯಾಗಿರುವ ಮಲ್ಲಿಕಾರ್ಜುನ ಕ್ಯಾದಿಗೇರಾ, ಜಾನಕಿ ಎಂ.ಎಸ್‌., ಜಗದೀಶ ಕೆ., ಜಯಪ್ಪ, ಜಲೀಲ್‌ ಅಹ್ಮದ್‌ ಅಳಲು ತೋಡಿಕೊಂಡರು.

ಲಾಕ್‌ಡೌನ್‌ ಇದ್ದರೂ ತಹಶೀಲ್ದಾರ್‌ ಹುದ್ದೆಗಳಿಗೆ, ಭೂದಾಖಲೆಗಳ ಸಹಾಯಕ ನಿರ್ದೇಶಕರ ಹುದ್ದೆಗಳಿಗೆ ಸರ್ಕಾರವು ಆದೇಶ ಪತ್ರಗಳನ್ನು ಕಳುಹಿಸಿದೆ. ಅಲ್ಲದೆ, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 10,500 ಪದವೀಧರ ಶಿಕ್ಷಕರಿಗೆ ಕೌನ್ಸೆಲಿಂಗ್‌ ಮಾಡಿ ನೇಮಕ ಆದೇಶ ನೀಡಲಾಗಿದೆ. ಆದರೆ, ಪಿಯು ಉಪನ್ಯಾಸಕರ ಹುದ್ದೆಗಳಿಗೆ ಮಾತ್ರ ನೇಮಕ ಆದೇಶ ನೀಡುವ ಭಾಗ್ಯ ಬರುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.