ADVERTISEMENT

ರಾಯಚೂರಿನ ಗಬ್ಬೂರು ಠಾಣೆಗೆ ರಾಜ್ಯದ ಅತ್ಯುತ್ತಮ ಪೊಲೀಸ್ ಠಾಣೆ ಗರಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2019, 5:04 IST
Last Updated 18 ಡಿಸೆಂಬರ್ 2019, 5:04 IST
ಪೋಲಿಸ್‌
ಪೋಲಿಸ್‌   

ರಾಯಚೂರು: ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗಬ್ಬೂರು ಪೊಲೀಸ್ ಠಾಣೆ 2019ನೇ‌ ಸಾಲಿನ ರಾಜ್ಯದ ಅತ್ಯುತ್ತಮ ಪೊಲೀಸ್ ಠಾಣೆ ಪ್ರಶಸ್ತಿಗೆ ಭಾಜನವಾಗಿದೆ.

ಗ್ರ್ಯಾಂಡ್ ತೊರಟನ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು ಕಳೆದ ಅಕ್ಟೋಬರ್‌ ನಲ್ಲಿ ದೇಶದಾದ್ಯಂತ ವಿವಿಧ ಮಾನದಂಡಗಳನ್ನು ಆಧರಿಸಿ ಸಮೀಕ್ಷೆ ಕೈಗೊಂಡಿತ್ತು.

ದೇಶದ 15,579 ಪೊಲೀಸ್ ಠಾಣೆಗಳಲ್ಲಿ ಮೊದಲ ಹಂತದ ಸಮೀಕ್ಷೆ ನಡೆಸಿ, ಪ್ರತಿ ರಾಜ್ಯದಿಂದ ಮೂರು ಠಾಣೆಗಳಂತೆ ಒಟ್ಟು 79 ಪೊಲೀಸ್ ಠಾಣೆಗಳನ್ನು ಗುರುತಿಸಲಾಗಿದೆ. ಈ ಠಾಣೆಗಳಲ್ಲಿ ಕಾರ್ಯದಕ್ಷತೆ, ಕ್ಷಮತೆ, ಸ್ವಚ್ಛತೆ, ಕಟ್ಟಡ ಸೌಲಭ್ಯ, ಸಾರ್ವಜನಿಕರೊಂದಿಗೆ ಸ್ಪಂದನೆ... ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪ್ರಶಸ್ತಿ ಪ್ರಕಟಿಸಲಾಗಿದೆ. ಗಬ್ಬೂರು ಠಾಣೆ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದ್ದು, ದೇಶದಲ್ಲಿ 17 ನೇ ಸ್ಥಾನದಲ್ಲಿದೆ.

ADVERTISEMENT

ಅಪರಾಧ ತಡೆ, ಠಾಣಾ ಮಟ್ಟದ ತನಿಖೆ ಗುಣಮಟ್ಟ, ಕಾನೂನು ಮತ್ತು ಸುವ್ಯವಸ್ಥೆ, ಸಾರ್ವಜನಿಕರಿಗೆ ಪೊಲೀಸರ ಲಭ್ಯತೆ, ಮಹಿಳೆ ಮತ್ತು ಮಕ್ಕಳ ವಿರುದ್ಧ ನಡೆಯುವ ಅಪರಾಧಗಳ ವಿಮರ್ಶೆ, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ವರ್ತನೆ, ಅಸಹಾಯಕ ಸಾರ್ವಜನಿಕ ವರ್ಗಗಳ ರಕ್ಷಣೆ, ರಸ್ತೆ ಸುರಕ್ಷತಾ ಕ್ರಮಗಳಿಗೆ ಸಂಬಂಧಿಸಿದ ಸಮೀಕ್ಷೆಗೆ ಶೇ 80 ರಷ್ಟು ಅಂಕಗಳು ಹಾಗೂ ಸಾರ್ವಜನಿಕರ ಅಭಿಪ್ರಾಯ, ಪೊಲೀಸರು ಘಟನಾ ಸ್ಥಳಕ್ಕೆ ತಲುಪುವ ಸಮಯ, ಠಾಣೆಯ ಸೌಲಭ್ಯ ಹಾಗೂ ಸ್ವಚ್ಚತೆ ವಿಭಾಗಕ್ಕೆ ಶೇ 20 ರಷ್ಟು ಅಂಕಗಳನ್ನು ನಿಗದಿಪಡಿಸಿ ಸಮೀಕ್ಷೆ ನಡೆಸಲಾಗಿದೆ. ಬ್ಯೂರೋ ಆಫ್ ಪೊಲೀಸ್ ರಿಸರ್ಚ್ ಎಂಡ್ ಡೆವಲಪ್ಮೆಂಟ್(ಪಿಪಿಆರ್‌ಬಿ) ಸಮೀಕ್ಷೆಗಾಗಿ ಈ ಮಾನದಂಡಗಳನ್ನು ನಿಗದಿ ಮಾಡಿದೆ.

‘ರಾಯಚೂರು ಜಿಲ್ಲೆಯ ಗಬ್ಬೂರು ಪೊಲೀಸ್ ಠಾಣೆಯನ್ನು ರಾಜ್ಯದ ಅತ್ಯುತ್ತಮ ಪೊಲೀಸ್ ಠಾಣೆಯೆಂದು ಗುರುತಿಸಿರುವುದು ಹೆಗ್ಗಳಿಕೆಯ ವಿಷಯವಾಗಿದೆ’ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.

ಗುಜರಾತ್ ರಾಜ್ಯದ ಕಚ್ ನಲ್ಲಿ 2015 ರಲ್ಲಿ ಪ್ರಧಾನಿ ನೇತೃತ್ವದಲ್ಲಿ ಏರ್ಪಡಿಸಿದ್ದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯ ಬಳಿಕ, ಈ ಪ್ರಶಸ್ತಿಯನ್ನು ಆರಂಭಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.