ADVERTISEMENT

ಬಸವ ಟಿಫನ್‌ ಸೆಂಟರ್‌ನಲ್ಲಿ ತುಪ್ಪದ ಇಡ್ಲಿ ರುಚಿ

ನಾಗರಾಜ ಚಿನಗುಂಡಿ
Published 13 ಜೂನ್ 2019, 19:45 IST
Last Updated 13 ಜೂನ್ 2019, 19:45 IST
ತುಪ್ಪದ ಇಡ್ಲಿ
ತುಪ್ಪದ ಇಡ್ಲಿ   

ರಾಯಚೂರು: ನಗರದಲ್ಲಿ ಅಗ್ಗದಲ್ಲಿ ಉತ್ತಮ ಗುಣಮಟ್ಟದ ಉಪಹಾರ ಒದಗಿಸುವ ಹೊಟೇಲ್‌ಗಳ ಪೈಕಿ ರಾಯಚೂರಿನ ಬಸವ ಟಿಫನ್‌ ಸೆಂಟರ್ ಕೂಡಾ ಹೆಸರುವಾಸಿ.

ಸರಾಫ್‌ ಬಜಾರ್‌ ರಸ್ತೆಯಿಂದ ಭಂಗಿಕುಂಟಾ ಮಾರ್ಗಕ್ಕೆ ತಿರುಗಿಕೊಳ್ಳುವ ಮೂಲೆಯಲ್ಲಿ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಜನಜಂಗುಳಿ ಕಾಣುತ್ತದೆ. ಟಿಫನ್‌ ಸೆಂಟರ್ ಚಿಕ್ಕಜಾಗದಲ್ಲಿ ಜನರು ಒಬ್ಬರಿಗೊಬ್ಬರು ಹೊಂದಿಕೊಂಡು ನಿಂತು, ಕೆಲವರು ಕುಳಿತು ಗಡಿಬಿಡಿಯಿಂದ ಉಪಹಾರಗಳನ್ನು ಸೇವಿಸುವ ದೃಶ್ಯ ಸಾಮಾನ್ಯವಾಗಿ ಕಂಡು ಬರುತ್ತದೆ.

ರುಚಿ, ಶುಚಿ ಹಾಗೂ ಬಿಸಿಬಿಸಿ ಉಪಹಾರಗಳಿಗೆ ಮನಸೋತು, ಬೇಗನೆ ತಿಂದು ಮುಗಿಸುವ ಧಾವಂತ ಗ್ರಾಹಕರಲ್ಲಿ ಕಂಡು ಬರುತ್ತದೆ. ಈ ಸೆಂಟರ್‌ನಲ್ಲಿ ಯಾವದೇ ಪದಾರ್ಥವನ್ನು ತಯಾರಿಸಿ ಸಂಗ್ರಹಿಸುವುದಿಲ್ಲ. ಬೇಡಿಕೆಗೆ ತಕ್ಕಂತೆ ಇಡ್ಲಿ, ದೋಸೆ, ಪೂರಿ, ವಗ್ಗರಣೆ, ಮಿರ್ಚಿ ಮಾಡಿಕೊಡುತ್ತಾರೆ.

ADVERTISEMENT

ಮಾನ್ವಿ ತಾಲ್ಲೂಕಿನ ಹೊಕ್ರಾಣಿ ಗ್ರಾಮದ ಬಸವರಾಜ ಅವರು 36 ವರ್ಷಗಳ ಹಿಂದೆಯೇ ರಾಯಚೂರಿಗೆ ಬಂದು ಮಿರ್ಚಿ ಬಜ್ಜಿ ವ್ಯಾಪಾರ ಶುರು ಮಾಡಿದರು. 20 ವರ್ಷಗಳವರೆಗೆ ತಳ್ಳುಗಾಡಿಯಲ್ಲೇ ಮಿರ್ಚಿ ಬಜ್ಜಿ ವ್ಯಾಪಾರ ಮಾಡಿಕೊಂಡಿದ್ದರು. ಅದರಲ್ಲಿ ಯಶಸ್ಸು ಸಾಧಿಸಿದ ಬಳಿಕ ಅದೇ ಜಾಗದ ಹಿಂಭಾಗದಲ್ಲಿ ಮಳಿಗೆ ಬಾಡಿಗೆ ಪಡೆದು ಟಿಫನ್‌ ಸೆಂಟರ್‌ ಆರಂಭಿಸಿ 16 ವರ್ಷಗಳಾಗಿವೆ. ಜನರೆಲ್ಲ ’ಮಿರ್ಚಿ ಬಸವರಾಜ’ ಎಂದು ಸಾಮಾನ್ಯವಾಗಿ ಗುರುತಿಸುತ್ತಾರೆ. ಬಸವರಾಜ ಅವರ ಮೂವರು ಪುತ್ರರು ಕೂಡಾ ಟಿಫನ್‌ ಸೆಂಟರ್‌ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಮನೆಮಂದಿ ನಾಲ್ಕು ಜನರು ಹಾಗೂ ಕೆಲವು ಕಾರ್ಮಿಕರು ಒಟ್ಟಾಗಿ ಟಿಫನ್‌ ಸೆಂಟರ್‌ ಮುನ್ನಡೆಸುತ್ತಿದ್ದಾರೆ. ಸರಾಫ್‌ ಬಜಾರ್‌, ಸೂಪರ್‌ ಮಾರ್ಕೆಟ್‌ ಬೇರೆ ಬೇರೆ ವ್ಯಾಪಾರಿಗಳು ಬಸವರಾಜ ಅವರ ಸೆಂಟರ್‌ಗೆ ಭೇಟಿ ಕೊಡುತ್ತಾರೆ. ತುಪ್ಪದ ಇಡ್ಲಿಯನ್ನೇ ಹೆಚ್ಚಾಗಿ ಸೇವಿಸುತ್ತಾರೆ.

ತುಪ್ಪದ ಇಡ್ಲಿ:ಚಟ್ನಿ ಹಾಗೂ ಶೇಂಗಾ ಪುಡಿಯೊಂದಿಗೆ ನಾಲ್ಕು ತುಪ್ಪದ ಇಡ್ಲಿ ಸೇವಿಸಲು ಜನರು ಮುಗಿಬೀಳುತ್ತಾರೆ. ಬೆಳಿಗ್ಗೆ ಹಾಗೂ ಸಂಜೆ ಇಡ್ಲಿ ವ್ಯಾಪಾರ ನಡೆಯುತ್ತದೆ. ವಗ್ಗರಣೆ ಪ್ಲೇಟ್‌ಗೆ ₹22, ಸೆಟ್‌ ದೋಸೆ ₹24, ಎರಡು ಪೂರಿ ₹12. ರುಚಿಯಾದ ಚಟ್ನಿಯೊಂದಿಗೆ ಉಪಹಾರ ಸೇವಿಸುವುದು ತುಂಬಾ ಇಷ್ಟ. ಸಂಜೆ ಹೊತ್ತು ಮಿರ್ಚಿ ಬಜ್ಜಿ ವ್ಯಾಪಾರ ಜೋರಾಗುತ್ತದೆ.

‘ತಂದೆ ಆರಂಭಿಸಿರುವ ಟಿಫನ್‌ ಸೆಂಟರ್‌ನಲ್ಲಿ ವ್ಯಾಪಾರ ಚೆನ್ನಾಗಿದೆ. ಅದೇ ವ್ಯವಹಾರವನ್ನು ನಾವೆಲ್ಲರೂ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಬೆಳಿಗ್ಗೆ 7 ರಿಂದ ಮಧ್ಯಾಹ್ನ 1 ಮತ್ತು ಸಂಜೆ 4 ರಿಂದ 10 ರವರೆಗೂ ಮಾತ್ರ ತೆರೆದಿರುತ್ತದೆ’ ಎಂದು ಹೊಟೇಲ್‌ ಮಾಲೀಕ ಮಲ್ಲಿಕಾರ್ಜುನ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.