ADVERTISEMENT

ಲಿಂಗಸುಗೂರು: ಹಾಸ್ಟೆಲ್‌ ಉದ್ಘಾಟನೆಗೆ ಕೂಡಿಬಾರದ ಮುಹೂರ್ತ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 5:19 IST
Last Updated 19 ಸೆಪ್ಟೆಂಬರ್ 2025, 5:19 IST
ಲಿಂಗಸುಗೂರಿನ ಹುಲಿಗುಡ್ಡದಲ್ಲಿ ನಿರ್ಮಾಣಗೊಂಡ ಮೆಟ್ರಿಕ್ ನಂತರ ಬಾಲಕಿಯರ ಹಾಸ್ಟೆಲ್ ಕಟ್ಟಡ
ಲಿಂಗಸುಗೂರಿನ ಹುಲಿಗುಡ್ಡದಲ್ಲಿ ನಿರ್ಮಾಣಗೊಂಡ ಮೆಟ್ರಿಕ್ ನಂತರ ಬಾಲಕಿಯರ ಹಾಸ್ಟೆಲ್ ಕಟ್ಟಡ   

ಲಿಂಗಸುಗೂರು: ಪುರಸಭೆ ವ್ಯಾಪ್ತಿಯ ಹುಲಿಗುಡ್ಡದಲ್ಲಿ ನಿರ್ಮಿಸಿರುವ ಹಿಂದುಳಿದ ವರ್ಗಗಳ ಬಾಲಕಿಯರ ಹಾಸ್ಟೆಲ್‌ ಹೊಸ ಕಟ್ಟಡ ನಿರ್ಮಾಣಗೊಂಡು ಆರು ತಿಂಗಳು ಕಳೆದರೂ ಉದ್ಘಾಟನೆಗೆ ಇನ್ನೂ ಯೋಗ ಕೂಡಿ ಬರದಾಗಿದೆ.

2023ನೇ ಸಾಲಿನಲ್ಲಿ ₹ 3.28 ಕೋಟಿ ವೆಚ್ಚದಲ್ಲಿ ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕ ಮಾನಪ್ಪ ವಜ್ಜಲ್ ಅಡಿಗಲ್ಲು ನೆರವೇರಿಸಿದ್ದರು. ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ಈಗಾಗಲೇ ಇಲಾಖೆಗೆ ಹಾಸ್ಟೆಲ್‌ ಕಟ್ಟಡ ಹಸ್ತಾಂತರಗೊಳಿಸಲಾಗಿದೆ.

ಪಟ್ಟಣದ ಖಾಸಗಿ ಬಾಡಿಗೆ ಕಟ್ಟಡದಲ್ಲಿ ಅನೇಕ ವರ್ಷಗಳಿಂದ ಬಾಲಕಿಯರ ಹಾಸ್ಟೆಲ್‌ ನಡೆಸಲಾಗುತ್ತಿದೆ.  ಬಿಸಿಎಂ ಅಧಿಕಾರಿಗಳು ಕಟ್ಟಡ ಉದ್ಘಾಟಿಸಿ ಹೊಸ ಕಟ್ಟಡಕ್ಕೆ ಹಾಸ್ಟೆಲ್ ಸ್ಥಳಾಂತರ ಮಾಡುವ ಮೂಲಕ ಬಾಡಿಗೆ ಕಟ್ಟಡಕ್ಕೆ ಮುಕ್ತಿ ನೀಡುವ ಕೆಲಸ ಮಾಡುತ್ತಿಲ್ಲ. ಹಾಸ್ಟೆಲ್ ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿದ್ದರಿಂದ ಅಲ್ಲಿ ಸಮರ್ಪಕ ಸೌಲಭ್ಯ ಕೊರತೆ ವಿದ್ಯಾರ್ಥಿನಿಯರು ನಿತ್ಯವೂ ಅನುಭವಿಸುತ್ತಿದ್ದಾರೆ. 

ADVERTISEMENT

ಬಿಸಿಎಂ ಇಲಾಖೆಯ 18 ಹಾಸ್ಟೆಲ್‌ಗಳಲ್ಲಿ ಪ್ರಸ್ತುತ 5 ಹಾಸ್ಟೆಲ್‌ಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಸಲಾಗುತ್ತಿದೆ. ಕೆಲವೆಡೆ ಜಾಗದ ಕೊರತೆಯಿಂದಾಗಿ ಹೊಸ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಹಿನ್ನೆಡೆಯಾಗುತ್ತಿದೆ ಎನ್ನಲಾಗಿದೆ.

‘ಬಾಡಿಗೆ ಕಟ್ಟಡದಲ್ಲಿರುವ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯರು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ವಿಳಂಬ ಧೋರಣೆ ಬಿಟ್ಟು ಕೂಡಲೇ ಹಾಸ್ಟೆಲ್‌ ಕಟ್ಟಡ ಉದ್ಘಾಟನೆಗೆ ಮುಂದಾಗಬೇಕು‌ ಎಂದು ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ತಿಮ್ಮಾರೆಡ್ಡಿ ಮುನ್ನೂರು ಒತ್ತಾಯಿಸಿದ್ದಾರೆ.

ಬಾಲಕಿಯರ ಹಾಸ್ಟೆಲ್‌ ಕಟ್ಟಡ ಇಲಾಖೆಗೆ ಹಸ್ತಾಂತರ ಮಾಡಿಕೊಳ್ಳಲಾಗಿದೆ. ಶೀಘ್ರವೇ ಶಾಸಕರ ದಿನಾಂಕ ಪಡೆದು ಉದ್ಘಾಟನೆಗೆ ಕ್ರಮ ವಹಿಸುವೆ.
ರಮೇಶ ರಾಠೋಡ, ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.