ADVERTISEMENT

ಮಾದಿಗ ಸಮಯದಾಯದ ನಾಯಕರಿಗೆ ನಿಗಮ ಮಂಡಳಿಯಲ್ಲಿ ಸ್ಥಾನಮಾನ ನೀಡುವಂತೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಜುಲೈ 2023, 14:36 IST
Last Updated 9 ಜುಲೈ 2023, 14:36 IST

ರಾಯಚೂರು: ‘ಜಿಲ್ಲಾ ಮಾದಿಗ ಸಮುದಾಯದ ಹಿರಿಯ ಸಂಘಟಕರಿಗೆ ನಿಗಮ ಮಂಡಳಿಗಳಿಗೆ ನಾಮನಿರ್ದೇಶನ ಮಾಡಬೇಕು’ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ(ಎಂಆರ್ ಎಚ್ಎಸ್) ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತಪ್ಪ ಮನ್ನಾಪೂರ ಸರ್ಕಾರಕ್ಕೆ ಒತ್ತಾಯಿಸಿದರು.

ಜಿಲ್ಲೆಯ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾದ ಲಿಂಗಸೂಗೂರು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 20 ವರ್ಷಗಳಿಂದ ಪರಿಶಿಷ್ಟ ಜಾತಿಯ ಮಾದಿಗ ಸಮುದಾಯಕ್ಕೆ ಎಲ್ಲ ರಾಜಕೀಯ ಪಕ್ಷಗಳು ಟಿಕೆಟ್ ವಂಚನೆ ಮಾಡಿವೆ.  ಕಾಂಗ್ರೆಸ್‌ ಸರ್ಕಾರದ ಈ ಬಾರಿ ಜಿಲ್ಲೆಯ ಮಾದಿಗ ಸಮುದಾಯಕ್ಕೆ ರಾಜಕೀಯ ಕ್ಷೇತ್ರದ ಇತರೆ ನಿಗಮ, ಮಂಡಳಿಗಳ ಸ್ಥಾನಗಳನ್ನು ನೀಡಬೇಕು ಎಂದು ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಮನವಿ ಮಾಡಿದರು.

1997 ರಿಂದ ಆರಂಭಗೊಂಡ ಜಿಲ್ಲೆಯ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟದ ಹಿರಿಯ ಶ್ರೇಣಿ ನಾಯಕರಾದ ಶಿವಪುತ್ರಪ್ಪ ಬೇರಿ, ಜೆ. ಬಿ.ರಾಜು,ಎಸ್.ಮಾರೆಪ್ಪ, ಹೇಮರಾಜ ಅಸ್ಕಿಹಾಳ, ಶಿವಪ್ಪ ಬಲ್ಲಿದ, ಹನುಮಂತ ಮನ್ನಾಪೂರ, ತಿಮ್ಮಪ್ಪ ಗುಂಜಳ್ಳಿ ಆಂಜಿನೆಯ್ಯ ಉಟ್ಕೂರು, ಶಿವರಾಯ ಅಕ್ಕಾರಕಿ ಸೇರಿ ಇನ್ನು ಅನೇಕ ಹೋರಾಟಗಾರರು ಮಾದಿಗ‌ ಮೀಸಲಾತಿ ಹೋರಾಟಕ್ಕೆ ಜೀವತುಂಬಿ ಮುನ್ನಡೆಸಿದ್ದಾರೆ ಎಂದರು.

ADVERTISEMENT

ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟಕ್ಕೆ ರಾಯಚೂರು ಜಿಲ್ಲೆಯು ನಾಯಕತ್ವ ನೀಡಿದ ಹೆಮ್ಮೆ ಇದೆ.‌ ಜಿಲ್ಲೆಯ ಹಿರಿಯ ಸಂಘಟಕರಾದ ಹೇಮರಾಜ ಅಸ್ಕಿಹಾಳ ಅವರಿಗೆ ನಿಗಮ ಮಂಡಳಿಗಳಲ್ಲಿ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿದರು.

ಸಂಘದ ಮುಖಂಡರಾದ ನರಸಿಂಹಲು, ಎ.ರಾಮು, ಅಬ್ರಹಾಂ,‌ ರವಿಕುಮಾರ ಗಬ್ಬೂರು, ಅಂಜಿನೇಯ ಉಟ್ಕೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.