ಜಾಲಹಳ್ಳಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಜೆಟ್‌ನಲ್ಲಿ ಮಠ, ಮಾನ್ಯ ಅಭಿವೃದ್ದಿಗೆ ಪ್ರತ್ಯೇಕ ಅನುದಾನ ಮೀಸಲಿಡಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ಹೇಳಿದರು.
ಕಲಬುರಗಿ ವಿಭಾಗದ ಕಾಗಿನೆಲೆ ಕನಕಗುರು ಪೀಠ ತಿಂಥಣಿ ಬ್ರಿಜ್‌ನಲ್ಲಿ ಹಮ್ಮಿಕೊಂಡ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.
ಈ ಹಿಂದೆ ನಾನು ಅಧಿಕಾರದಲ್ಲಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರದಿಂದ ₹238 ಕೋಟಿ ಅನುದಾನ ಮೀಸಲಿಟ್ಟು ಮಠ, ಮಾನ್ಯಗಳ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಿದ್ದೇನೆ. ಅದೇ ತರಹ ಈಗಿನ ರಾಜ್ಯ ಸರ್ಕಾರ ಕೂಡ ಬಜೆಟ್‌ನಲ್ಲಿಯೇ ಮೀಸಲಿಡಲು ಅಧಿಕಾರದಲ್ಲಿರುವ ನಾಯಕರು ಮನಸು ಮಾಡಬೇಕು ಎಂದರು.
ಹಾಲುಮತ ಭಾಸ್ಕರ ಪ್ರಶಸ್ತಿಯನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಾಲುಮತ ಅಧ್ಯಯನ ಪೀಠದ ಸಂಚಾಲಕ ಎಫ್.ಟಿ. ಹಳ್ಳಿಕೇರಿ ಅವರಿಗೆ, ಕನಕ ರತ್ನ ಪ್ರಶಸ್ತಿಯನ್ನು ನ್ಯೂಸ್ ಫಸ್ಟ್ ಚಾನೆಲ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರವಿಕುಮಾರ್, ಸಮಾಜ ಸೇವೆಗಾಗಿ ನೀಡುವ ಸಿದ್ಧಶ್ರೀ ಪ್ರಶಸ್ತಿಯನ್ನು ಬೆಂಗಳೂರಿನ ಕಾಳಿದಾಸ ಹೆಲ್ತ್ ಎಜುಕೇಶನ್ ಮತ್ತು ಅಹಿಲ್ಯಾ ಟ್ರಸ್ಟ್‌ನ ಡಾ.ವಿಜಯಲಕ್ಷ್ಮಿ, ಡಾ.ಪರಮೇಶ ದಂಪತಿಗಳಿಗೆ ನೀಡಲಾಯಿತು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ತಿಂಥಣಿ ಬ್ರಿಜ್ ಕಾಗಿನೆಲೆ ಕನಕಗುರು ಪೀಠದ ಸಿದ್ಧರಾಮಾನಂದ ಸ್ವಾಮೀಜಿ ಮಾತನಾಡಿ, ಸಮಾಜದ ಕೆಲವರು ಈಚೆಗೆ ಹಾಲುಮತ ಸಂಸ್ಕೃತಿ ವೈಭವದ ಹೆಸರಲ್ಲಿ ಧರ್ಮ ಬದಲಾವಣೆ ಮಾಡುತ್ತಾರೆ ಎಂದು ಅನಾವಶ್ಯಕವಾಗಿ ಗೊಂದಲ ಸೃಷ್ಟಿಸಿದರು. ಕುರುಬ ಸಮಾಜದ ಜನತೆ ಪ್ರತಿ ವರ್ಷ ಸೇರಿಸುವ ಉದ್ದೇಶದಿಂದ ಮಾತ್ರ ಹಾಲುಮತ ಕಾರ್ಯಕ್ರಮ ನಡೆಸುವುದು. ನಿಮ್ಮ ಮಕ್ಕಳಿಗೆ ಶಾಲೆಗಳಿಗೆ ಹೆಸರು ಬರೆಸುವಗಾಗ ಜಾತಿಯಲ್ಲಿ ಕುರುಬ ಎಂದೇ ಬರೆಯಿಸಿ ಎಂದರು.
ಹೊಸದುರ್ಗದ ಕಾಗಿನೆಲೆ ಪೀಠದ ಈಶ್ವರನಂದ ಸ್ವಾಮೀಜಿ, ಮಾಜಿ ಸಂಸದ ವಿರೂಪಾಕ್ಷಪ್ಪ, ಶಾಸಕ ದೊಡ್ಡನಗೌಡ ಪಾಟೀಲ್, ಕಾಂತೇಶ ಈಶ್ವರಪ್ಪ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ರಾಷ್ಟ್ರೀಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಬಸವರಾಜ ಗುರಿಕಾರ, ರಾಜ್ಯ ಮಹಿಳಾ ಕುರುಬ ಸಂಘದ ಅಧ್ಯಕ್ಷೆ ಕೆ.ಆರ್ ಪ್ರಭಾವತಿ, ಅಮೇತಪ್ಪ ಕಂದಕೂರು, ಚಿದನಂದ ಗುರುವಿನ, ಚಂದಪ್ಪ ಬುದ್ದಿನ್ನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಚಂದ್ರಶೇಖರ ಬಗಲಿ, ವಕೀಲ ಮಹಾತೇಶ ಕೌಲಗಿ ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.