ADVERTISEMENT

‘ರಾಯಚೂರು ವಿವಿ ವಿಷನ್’ ಯೋಜನೆಗೆ ಸಿಗದ ಮನ್ನಣೆ

ನಾಗರಾಜ ಚಿನಗುಂಡಿ
Published 11 ಮಾರ್ಚ್ 2020, 14:31 IST
Last Updated 11 ಮಾರ್ಚ್ 2020, 14:31 IST
ಡಾ.ಮುಜಾಫರ್‌ ಅಸ್ಸಾದಿ, ರಾಯಚೂರು ವಿಶ್ವವಿದ್ಯಾಲಯದ ವಿಶೇಷಾಧಿಕಾರಿ
ಡಾ.ಮುಜಾಫರ್‌ ಅಸ್ಸಾದಿ, ರಾಯಚೂರು ವಿಶ್ವವಿದ್ಯಾಲಯದ ವಿಶೇಷಾಧಿಕಾರಿ   

ರಾಯಚೂರು: ನೂತನ ರಾಯಚೂರು ವಿಶ್ವವಿದ್ಯಾಲಯವನ್ನು ಶಾಂತಿನಿಕೇತನ ಮಾದರಿಯಲ್ಲಿ ಅಭಿವೃದ್ಧಿ ಮಾಡಬೇಕಾಗಿದೆ ಎಂದು ವಿಶ್ವವಿದ್ಯಾಲಯಕ್ಕೆ ವಿಶೇಷಾಧಿಕಾರಿಯಾಗಿ ಬಂದಿದ್ದ ಪ್ರೊ.ಮುಜಾಫರ್‌ ಅಸ್ಸಾದಿ ಅವರು ಮಂಡಿಸಿದ್ದ ‘ರಾಯಚೂರು ವಿಶ್ವವಿದ್ಯಾಲಯ ವಿಷನ್‌’ ಯೋಜನೆಗೆ ಸರ್ಕಾರದಿಂದ ಮನ್ನಣೆ ದೊರೆಯಲಿಲ್ಲ.

ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಸಿ.ಎನ್‌, ಅವರು ಈಚೆಗೆ ಯರಗೇರಾ ಕ್ಯಾಂಪಸ್‌ಗೆ ಭೇಟಿ ನೀಡಿದ್ದ ವೇಳೆ ‘ವಿಷನ್‌ ಯೋಜನೆ’ಯನ್ನು ಅವರು ಮಂಡಿಸಿದ್ದರು. ಆದರೆ, ಪ್ರಸ್ತಾಪಿತ ರಾಯಚೂರು ವಿಶ್ವವಿದ್ಯಾಲಯ ಇನ್ನೂ ಕಾರ್ಯಾರಂಭ ಮಾಡುವ ಪೂರ್ವದಲ್ಲಿಯೇ ವಿಶೇಷಾಧಿಕಾರಿಯನ್ನು ಸರ್ಕಾರ ಬದಲಾವಣೆ ಮಾಡಿದೆ.

’ವಿಶೇಷ ಅಧಿಕಾರಿ ಸ್ಥಾನಕ್ಕೆ ಬೇರೆಯವರನ್ನು ನಿಯೋಜಿಸುತ್ತಾರೆ ಎನ್ನುವ ವಿಚಾರ 15 ದಿನಗಳಿಂದ ದಟ್ಟವಾಗಿತ್ತು. ಹೀಗಾಗಿ ಅಧಿಕಾರ ಬಿಟ್ಟುಕೊಡಲು ಮಾನಸಿಕ ಸಿದ್ಧತೆ ಇತ್ತು. ಆದರೆ, ಶೈಕ್ಷಣಿಕ ವಲಯದ ಹುದ್ದೆಗಳು ಕೂಡಾ ರಾಜಕೀಯದ ಭಾಗ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಇದರಿಂದ ಜನರಲ್ಲಿ ತಪ್ಪು ಪರಿಕಲ್ಪನೆ ಬೆಳೆಯುತ್ತದೆ’ ಎಂದು ಪ್ರೊ.ಮುಜಾಫರ್‌ ಅಸ್ಸಾದಿ ಅವರು ಅಸಮಾಧಾನ ಹೊರಹಾಕಿದರು.

ADVERTISEMENT

ನೂತನ ವಿಶೇಷಾಧಿಕಾರಿ: ‍ಪ್ರಸ್ತಾಪಿತ ರಾಯಚೂರು ವಿಶ್ವವಿದ್ಯಾಲಯಕ್ಕೆ ನೂತನ ವಿಶೇಷಾಧಿಕಾರಿಯಾಗಿ ಸರ್ಕಾರವು ನೇಮಕ ಮಾಡಿರುವ ಪ್ರೊ.ಜಿ.ಕೋಟ್ರೇಶ್ವರ ಅವರು ಈಗಾಗಲೇ ಅಧಿಕಾರ ವಹಿಸಿಕೊಂಡಿದ್ದು, ಯರಗೇರಾದಲ್ಲಿರುವ ಗುಲಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಬೋಧಕ, ಬೋಧಕೇತರ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ.

ನೂತನ ರಾಯಚೂರು ವಿಶ್ವವಿದ್ಯಾಲಯವನ್ನು ಮೈಸೂರು ವಿಶ್ವವಿದ್ಯಾಲಯ ಮಾದರಿಯಲ್ಲಿ ಅಭಿವೃದ್ಧಿ ಮಾಡುವ ಕನಸು ಅವರದ್ದಾಗಿದೆ. ’25 ವರ್ಷಗಳಿಂದ ಮೈಸೂರು ವಿಶ್ವವಿದ್ಯಾಲಯದಲ್ಲಿ ಅನುಭವ ಪಡೆದಿದ್ದೇನೆ. ಈ ಭಾಗಕ್ಕೆ ಸಂಬಂಧಿಸಿದವ ಆಗಿರುವುದರಿಂದ ಮಾದರಿ ರೀತಿಯಲ್ಲಿ ವಿಶ್ವವಿದ್ಯಾಲಯ ಕಟ್ಟಬೇಕು ಎನ್ನುವ ಕನಸಿದೆ. ಸರ್ಕಾರ ಕೂಡಾ ಎಲ್ಲದಕ್ಕೂ ಸಹಕಾರ ನೀಡುವ ಭರವಸೆ ನೀಡಿದೆ’ ಎಂದು ಪ್ರೊ. ಜಿ.ಕೋಟ್ರೇಶ್ವರ ‘ಪ್ರಜಾವಾಣಿ’ಗೆ ವಿವರಿಸಿದರು.

‘ಯರಗೇರಾ ಕ್ಯಾಂಪಸ್‌ ತುಂಬಾ ಸುಂದರವಾಗಿದೆ. ನೀರಿನ ಲಭ್ಯತೆ ಚೆನ್ನಾಗಿದ್ದು, ಕ್ಯಾಂಪಸ್‌ ಹಸಿರುಮಯ ಮಾಡಲಾಗುವುದು. ಸಾಕಷ್ಟು ಕಾಯಕಲ್ಪದ ಅಗತ್ಯವಿದೆ. ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕಿದೆ. ಬಸ್‌ ಸೌಕರ್ಯವಿಲ್ಲ. ಕ್ಯಾಂಟಿನ್‌ ಇಲ್ಲ. ಹುದ್ದೆಗಳು ಭರ್ತಿಯಾಗಬೇಕಿದೆ. ಇದೆಲ್ಲವನ್ನು ಸರ್ಕಾರದ ಗಮನಕ್ಕೆ ತರಲಾಗುವುದು’ ಎಂದರು.

‘ಅತಿ ಶೀಘ್ರದಲ್ಲೇ ವಿಶ್ವವಿದ್ಯಾಲಯ ಕಾಯ್ದೆಯನ್ನು ಸರ್ಕಾರ ಅಂಗೀಕಾರ ಮಾಡಲಿದ್ದು, ರಾಯಚೂರು ವಿಶ್ವವಿದ್ಯಾಲಯಕ್ಕೆ ಅಗತ್ಯ ಅನುದಾನ ಒದಗಿಸುವ ಭರವಸೆಯನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ನೀಡಿದ್ದಾರೆ. ಸರ್ಕಾರದ ಅಧಿಕಾರಿಗಳೊಂದಿಗೆ ಸದಾ ಸಂಪರ್ಕದಲ್ಲಿದ್ದು, ಈಗಿರುವ 16 ಸ್ನಾತಕೋತ್ತರ ವಿಭಾಗಗಳ ಜೊತೆಯಲ್ಲಿ ಇನ್ನೂ 10 ಹೊಸ ವಿಭಾಗಗಳನ್ನು ಪ್ರಾರಂಭಿಸಲಾಗುವುದು’ ಎಂದು ಹೇಳಿದರು.

‘ಎಲೆಕ್ಟ್ರಾನಿಕ್‌ ವಿಭಾಗದಲ್ಲಿ ಮಾತ್ರ ಕಾಯಂ ಪ್ರಾಧ್ಯಾಪಕರಿದ್ದಾರೆ. ನಾಡಿನ ಭಾಷೆ ಕನ್ನಡ ವಿಭಾಗದಲ್ಲೇ ಒಬ್ಬರೂ ಕಾಯಂ ಪ್ರಾಧ್ಯಾಪಕರಿಲ್ಲ. ಸಮಸ್ಯೆಗಳಿಗೆಲ್ಲ ಪರಿಹಾರ ಕಂಡುಕೊಳ್ಳುವ ಕಾರ್ಯ ಪ್ರಾರಂಭಿಸುತ್ತೇನೆ. ಎಲ್ಲರ ಸಹಕಾರ ಅಗತ್ಯವಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.