ADVERTISEMENT

‘ಗ್ರಾಮ ಡಿಜಿ ವಿಕಸನ‘ಕ್ಕೆ ಮತ್ತೆ 22 ಗ್ರಾಪಂ ಆಯ್ಕೆ

ಆರ್‌ಡಿಪಿಆರ್‌ ಹಾಗೂ ಶಿಕ್ಷಣ ಫೌಂಡೇಷನ್‌ ಸಹಭಾಗಿತ್ವದಲ್ಲಿ ಜಾರಿ

ನಾಗರಾಜ ಚಿನಗುಂಡಿ
Published 14 ಮೇ 2022, 14:27 IST
Last Updated 14 ಮೇ 2022, 14:27 IST
ರಾಯಚೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೂರ್‌ ಜಹಾರ್‌ ಖಾನಂ ಅವರ ಸಮ್ಮುಖದಲ್ಲಿ ಶಿಕ್ಷಣ ಫೌಂಡೇಷನ್‌ ಅಧಿಕಾರಿಯು ಗ್ರಾಮ ಪಂಚಾಯಿತಿ ಪಿಡಿಓ ಅವರಿಗೆ ’ಗ್ರಾಮ ಡಿಜಿ ವಿಕಸನ‘ಯೋಜನೆ ಉಪಕರಣಗಳನ್ನು ಈಚೆಗೆ ಹಸ್ತಾಂತರಿಸಿದರು.
ರಾಯಚೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೂರ್‌ ಜಹಾರ್‌ ಖಾನಂ ಅವರ ಸಮ್ಮುಖದಲ್ಲಿ ಶಿಕ್ಷಣ ಫೌಂಡೇಷನ್‌ ಅಧಿಕಾರಿಯು ಗ್ರಾಮ ಪಂಚಾಯಿತಿ ಪಿಡಿಓ ಅವರಿಗೆ ’ಗ್ರಾಮ ಡಿಜಿ ವಿಕಸನ‘ಯೋಜನೆ ಉಪಕರಣಗಳನ್ನು ಈಚೆಗೆ ಹಸ್ತಾಂತರಿಸಿದರು.   

ರಾಯಚೂರು: ಗ್ರಾಮ ಪಂಚಾಯಿತಿ ಮಟ್ಟದ ಗ್ರಂಥಾಲಯಗಳನ್ನು ಡಿಜಿಟಲೀಕರಣ ಮಾಡುವ ಕಾರ್ಯ ಮುಂದುವರಿದಿದ್ದು, ’ಗ್ರಾಮ ಡಿಜಿ ವಿಕಸನ‘ ಯೋಜನೆಯಡಿ ಮತ್ತೆ 22 ಗ್ರಾಮ ಪಂಚಾಯಿತಿ ಮಟ್ಟದ ಗ್ರಂಥಾಲಯಗಳನ್ನು ಆಯ್ಕೆ ಮಾಡಲಾಗಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ, ಶಿಕ್ಷಣ ಫೌಂಡೇಷನ್‌ ಜೊತೆಯಾಗಿ ಡೆಲ್‌ ಕಂಪೆನಿ ಸಹಭಾಗಿತ್ವದಲ್ಲಿ ’ಗ್ರಾಮ ಡಿಜಿ ವಿಕಸನ‘ ಯೋಜನೆಯನ್ನು ರೂಪಿಸಿವೆ. ಗ್ರಾಮೀಣ ಭಾಗದ ಯುವಕರ ಜ್ಞಾನ ಸಾಮರ್ಥ್ಯ ಹೆಚ್ಚಿಸುವುದು ಮತ್ತು ತಂತ್ರಜ್ಞಾನ ಕೌಶಲದ ಮೂಲಕ ವೃತ್ತಿಮಾರ್ಗ ಕಂಡುಕೊಳ್ಳಲು ನೆರವಾಗುವುದು ಈ ಯೋಜನೆಯ ಉದ್ದೇಶವಾಗಿದೆ.

ಈ ಮೊದಲೇ ರಾಯಚೂರು ಜಿಲ್ಲೆಯಲ್ಲಿ ಯೋಜನೆ ಅನುಷ್ಠಾನಗೊಳಿಸಿದ್ದು, ಮೊದಲ ಹಂತದಲ್ಲಿ ಒಂಭತ್ತು ಗ್ರಾಮ ಪಂಚಾಯಿತಿ ಗ್ರಂಥಾಲಯಗಳನ್ನು ಆಯ್ಕೆ ಮಾಡಲಾಗಿತ್ತು. ಎರಡನೇ ಹಂತದಲ್ಲಿ 22 ಗ್ರಂಥಾಲಯಗಳನ್ನು ಆಯ್ಕೆ ಮಾಡಿ, ಡಿಜಿಟಲೀಕರಣಕ್ಕೆ ಸಂಬಂಧಿಸಿ ಕೆಲವೊಂದು ಉಪಕರಣಗಳನ್ನು ಒದಗಿಸಲಾಗಿದೆ.

ADVERTISEMENT

ಈ ಯೋಜನೆಯಡಿ ಪ್ರತಿ ಗ್ರಂಥಾಲಯಕ್ಕೂ ನಾಲ್ಕು ಸ್ಮಾರ್ಟ್‌ಫೋನ್‌ಗಳು ಹಾಗೂ 32 ಇಂಚಿನ ಒಂದು ಟಿವಿ ಒದಗಿಸಲಾಗುತ್ತಿದೆ. ರಾಯಚೂರು ತಾಲ್ಲೂಕಿನ ಗಾಣದಾಳ, ಗಿಲ್ಲೇಸುಗೂರು, ಎಲೆಬಿಚ್ಚಾಲಿ, ಮಟಮಾರಿ, ಜಾಗರಕಲ್‌ ವೆಂಕಟಾಪುರ, ಚಿಕ್ಕಸುಗೂರು, ಕಾಡ್ಲೂರು, ಮಾನ್ವಿ ತಾಲ್ಲೂಕಿನ ಅರೋಲಿ, ಪೋತ್ನಾಳ್‌, ಹಿರೇಕೊಟ್ನೆಕಲ್‌, ಜಾನೇಕಲ್‌, ಸಿರವಾರ ತಾಲ್ಲೂಕಿನ ಕೆ.ಗುಡದಿನ್ನಿ, ದೇವದುರ್ಗ ತಾಲ್ಲೂಕಿನ ಗಬ್ಬೂರು, ಮಸರಕಲ್‌, ಗಲಗ, ಮಲದಕಲ್‌, ಸಿಂಧನೂರು ತಾಲ್ಲೂಕಿನ ರಾಘಲಪರ್ವಿ, ಗೊನವಾರ, ಜವಳಗೇರಾ, ಮಾಡಸಿರವಾರ, ಬಾದರ್ಲಿ, ಅಲಬನೂರ ಗ್ರಾಮ ಪಂಚಾಯಿತಿ ಕೇಂದ್ರಗಳ ಗ್ರಂಥಾಲಯಗಳಿಗೆ ಸೌಲಭ್ಯ ಒದಗಿಸಲಾಗಿದೆ.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೂರ್‌ ಜಹಾರ್‌ ಖಾನಂ ಅವರ ಸಮ್ಮುಖದಲ್ಲಿ ಶಿಕ್ಷಣ ಫೌಂಡೇಷನ್‌ನಿಂದ ಆಯಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕೈಗೆ ಉಪಕರಣಗಳನ್ನು ಈಚೆಗೆ ಹಸ್ತಾಂತರ ಮಾಡಲಾಗಿದೆ. ಉಪ‍ಕರಣಗಳನ್ನು ಅಳವಡಿಸುವುದು ಮತ್ತು ನಿರ್ವಹಣೆ ಮಾಡುವುದು ಸೇರಿದಂತೆ ಅವುಗಳಿಗೆ ಇಂಟರ್‌ನೆಟ್‌ ಸೌಲಭ್ಯ ಒದಗಿಸುವ ಕುರಿತಾಗಿ ಸೂಕ್ತ ಮಾರ್ಗದರ್ಶನಗಳನ್ನು ನೀಡಲಾಗಿದೆ.

ಗ್ರಂಥಾಲಯಗಳಲ್ಲಿ ಟಿವಿ ಅಳವಡಿಸುವುದು ಮತ್ತು ಸ್ಮಾರ್ಟ್‌ಫೋನ್‌ ಒದಗಿಸುವುದು, ಅವುಗಳಿಗೆ ಗ್ರಾಮ ಪಂಚಾಯಿತಿಯಿಂದ ಇಂಟರ್‌ನೆಟ್‌ ಸೌಲಭ್ಯ ಒದಗಿಸಿಕೊಡುವುದು ಪಿಡಿಓ ಜವಾಬ್ದಾರಿ. ಉಪಕರಣಗಳನ್ನು ಪರಿಣಾಮಕಾರಿ ಬಳಕೆಮಾಡಿ, ಸುರಕ್ಷಿತವಾಗಿ ಇಟ್ಟುಕೊಳ್ಳುವ ಕುರಿತು ಗ್ರಂಥಪಾಲಕರಿಗೆ ಮನವರಿಕೆ ಮಾಡಿಕೊಡುವುದು ಕೂಡಾ ಪಿಡಿಓ ಜವಾಬ್ದಾರಿ.

ಉಪಕರಣಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಮತ್ತು ಅವು ಸರಿಯಾಗಿ ಕಾರ್ಯನಿರ್ವಹಿಸದಿರುವ ಸಂದರ್ಭದಲ್ಲಿ ಶಿಕ್ಷಣ ಸಂಯೋಜನಕರಿಗೆ ಮಾಹಿತಿ ನೀಡಬೇಕು. ಗ್ರಂಥಾಲಯಕ್ಕೆ ಬರುವವರಿಗೆ ಕಲಿಕೆಗೆ ಪೂರಕವಾಗಿ ಮೊಬೈಲ್‌ ಫೋನ್‌ ಬಳಿಸಿಕೊಳ್ಳುವುದಕ್ಕೆ ನೆರವಾಗುವುದು ಗ್ರಂಥಪಾಲಕರ ಜವಾಬ್ದಾರಿ.

ಶಿಕ್ಷಣ ಫೌಂಡೇಷನ್‌ನಿಂದ ಆಗಾಗ ನಡೆಸುವ ಆನ್‌ಲೈನ್‌ ಮತ್ತು ಆಫ್‌ಲೈನ್‌ ತರಗತಿಗಳಿಗೆ ಸಮುದಾಯದ ಆಸಕ್ತ ಕಲಿಕಾರ್ಥಿಗಳು ಭಾಗವಹಿಸುವಂತೆ ಮಾಡುವುದು ಕೂಡಾ ಗ್ರಂಥಪಾಲಕರ ಕೆಲಸ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.