ADVERTISEMENT

ಡಿ.30ಕ್ಕೆ ಗ್ರಾಪಂ‌ ಚುನಾವಣೆ ಫಲಿತಾಂಶ, ಮತ ಎಣಿಕೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2020, 13:14 IST
Last Updated 29 ಡಿಸೆಂಬರ್ 2020, 13:14 IST
ಆರ್‌.ವೆಂಕಟೇಶಕುಮಾರ್‌
ಆರ್‌.ವೆಂಕಟೇಶಕುಮಾರ್‌   

ರಾಯಚೂರು: ಜಿಲ್ಲೆಯಲ್ಲಿ 172 ಗ್ರಾಮ ಪಂಚಾಯಿತಿಗಳಿಗೆ ನಡೆದ ಚುನಾವಣೆಯ ಮತಗಳನ್ನು ಡಿಸೆಂಬರ್ 30 ರಂದು ಎಣಿಕೆ ಮಾಡುವುದಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಿರವಾರ ತಾಲ್ಲೂಕು ಒಳಗೊಂಡು ಮಾನ್ವಿ ತಾಲ್ಲೂಕು ಕೇಂದ್ರದಲ್ಲೇ ಮತಗಳ ಎಣಿಕೆ ಮಾಡಲಾಗುತ್ತಿದೆ. ಇನ್ನುಳಿದಂತೆ ಆಯಾ ತಾಲ್ಲೂಕು ಕೇಂದ್ರಗಳಲ್ಲಿಯೇ ಮತಗಳ ಎಣಿಕೆಗಾಗಿ ತಾಲ್ಲೂಕು ಆಡಳಿತಗಳು ಸಿದ್ಧತೆ ಮಾಡಿವೆ. ಮತಗಳ ಎಣಿಕೆ ಮಾಡಲಿರುವ ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡಿ, ನಿಯೋಜಿಸಲಾಗಿದೆ.ಮಸ್ಕಿ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳ ಮತಗಳ ಎಣಿಕೆಯು ಮಸ್ಕಿ ಪಟ್ಟಣದ ದೇವನಾಂಪ್ರಿಯ ಅಶೋಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾಡಲಾಗುತ್ತದೆ. ಇದಕ್ಕಾಗಿ 8 ಕೋಣೆಗಳಲ್ಲಿ ಒಟ್ಟು 52 ಮೇಜುಗಳ ವ್ಯವಸ್ಥೆ ಮಾಡಲಾಗಿದೆ. ಒಟ್ಟು 156 ಸಿಬ್ಬಂದಿ ಮತಗಳ‌ ಎಣಿಕೆಗೆ ನಿಯೋಜಿಸಲಾಗಿದ್ದು, 9 ಹೆಚ್ಚುವರಿ ಸಿಬ್ಬಂದಿ ಇದ್ದಾರೆ ಎಂದು ತಿಳಿಸಿದರು.

ರಾಯಚೂರು ತಾಲ್ಲೂಕಿನ ಗ್ರಾಮ ಪಂಚಾಯಿತಿಗಳ ಮತಗಳ ಎಣಿಕೆಯು ನಗರದ ಎಸ್ ಆರ್ ಪಿಯು ಕಾಲೇಜಿನಲ್ಲಿ ಮಾಡಲಾಗುತ್ತದೆ. ಇದಕ್ಕಾಗಿ 15 ಕೋಣೆಗಳಲ್ಲಿ ಒಟ್ಟು 102 ಮೇಜುಗಳ ವ್ಯವಸ್ಥೆ ಮಾಡಲಾಗಿದೆ. ಒಟ್ಟು 306 ಸಿಬ್ಬಂದಿ ಮತಗಳ‌ ಎಣಿಕೆಗೆ ನಿಯೋಜಿಸಲಾಗಿದ್ದು, 24 ಹೆಚ್ಚುವರಿ ಎಣಿಕೆ ಸಿಬ್ಬಂದಿ ಇದ್ದಾರೆ ಎಂದು ಹೇಳಿದರು.

ADVERTISEMENT

ದೇವದುರ್ಗ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳ ಮತಗಳ ಎಣಿಕೆಯು ನಗರದ ಡಾನ್ ಬಾಸ್ಕೊ ಶಾಲೆಯಲ್ಲಿ ಮಾಡಲಾಗುತ್ತದೆ. ಇದಕ್ಕಾಗಿ 18 ಕೋಣೆಗಳಲ್ಲಿ ಒಟ್ಟು 66 ಮೇಜುಗಳ ವ್ಯವಸ್ಥೆ ಮಾಡಲಾಗಿದೆ. ಒಟ್ಟು 198 ಸಿಬ್ಬಂದಿ ಮತಗಳ‌ ಎಣಿಕೆಗೆ ನಿಯೋಜಿಸಲಾಗಿದ್ದು, 18 ಹೆಚ್ಚುವರಿ ಎಣಿಕೆ ಸಿಬ್ಬಂದಿ ಇದ್ದಾರೆ.

ಮಾನ್ವಿ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳ ಮತಗಳ ಎಣಿಕೆಯು ಶ್ರೀ‌ಬಾಸುಮಿಯಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾಡಲಾಗುತ್ತದೆ. ಇದಕ್ಕಾಗಿ 5 ಕೋಣೆಗಳಲ್ಲಿ ಒಟ್ಟು 36 ಮೇಜುಗಳ ವ್ಯವಸ್ಥೆ ಮಾಡಲಾಗಿದೆ. ಒಟ್ಟು 108 ಸಿಬ್ಬಂದಿ ಮತಗಳ‌ ಎಣಿಕೆಗೆ ನಿಯೋಜಿಸಲಾಗಿದ್ದು, 18 ಹೆಚ್ಚುವರಿ ಎಣಿಕೆ ಸಿಬ್ಬಂದಿ ಇದ್ದಾರೆ.

ಲಿಂಗಸುಗೂರು ತಾಲ್ಲೂಕಿನ ಗ್ರಾಮ ಪಂಚಾಯಿತಿಗಳ ಮತಗಳ ಎಣಿಕೆಯು ಸರ್ಕಾರಿ ಪಿಯು ಕಾಲೇಜಿನಲ್ಲಿ ಮಾಡಲಾಗುತ್ತದೆ. ಇದಕ್ಕಾಗಿ 6 ಕೋಣೆಗಳಲ್ಲಿ ಒಟ್ಟು 74 ಮೇಜುಗಳ ವ್ಯವಸ್ಥೆ ಮಾಡಲಾಗಿದೆ. ಒಟ್ಟು 222 ಸಿಬ್ಬಂದಿ ಮತಗಳ‌ ಎಣಿಕೆಗೆ ನಿಯೋಜಿಸಲಾಗಿದ್ದು, 8 ಹೆಚ್ಚುವರಿ ಎಣಿಕೆ ಸಿಬ್ಬಂದಿ ಇದ್ದಾರೆ.

ಸಿಂಧನೂರು ತಾಲ್ಲೂಕಿನ ಗ್ರಾಮ ಪಂಚಾಯಿತಿಗಳ ಮತಗಳ ಎಣಿಕೆಯು ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಮಾಡಲಾಗುತ್ತದೆ. ಇದಕ್ಕಾಗಿ 14 ಕೋಣೆಗಳಲ್ಲಿ ಒಟ್ಟು 99 ಮೇಜುಗಳ ವ್ಯವಸ್ಥೆ ಮಾಡಲಾಗಿದೆ. ಒಟ್ಟು 297 ಸಿಬ್ಬಂದಿ ಮತಗಳ‌ ಎಣಿಕೆಗೆ ನಿಯೋಜಿಸಲಾಗಿದ್ದು, 18 ಹೆಚ್ಚುವರಿ ಎಣಿಕೆ ಸಿಬ್ಬಂದಿ ಇದ್ದಾರೆ ಎಂದು ಹೇಳಿದರು.

ನೀತಿ ಸಂಹಿತೆ ಜಾರಿಗೊಂಡ ನಂತರ ಅಕ್ರಮ ಮದ್ಯ ಸಾಗಾಣಿಕೆಯ 20 ಪ್ರಕರಣಗಳು ಪತ್ತೆಯಾಗಿವೆ. ಅವುಗಳಲ್ಲಿ 18 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ, ₹10.58 ಲಕ್ಷ ರೂ.ಗಳ ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ. ತುಪ್ಪದೂರು ಪ್ರಕರಣಕ್ಕೆ ಸಂಬಂಧಿಸಿದಂತೆ ತಶೀಲ್ದಾರ್‌ ಹಾಗೂ ಚುನಾವಣಾಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಅವರಿಂದ ಉತ್ತರ ಬಂದ ನಂತರ ಕ್ರಮವಹಿಸುವುದಾಗಿ ಹೇಳಿದರು.

417 ಸದಸ್ಯರು ಅವಿರೋಧ ಆಯ್ಕೆ ಆಗಿದ್ದಾರೆ. ಅವಿರೋಧ ಆಯ್ಕೆಯಾಗಿರುವ ಕುರಿತು ಯಾವುದೇ ದೂರುಗಳು ಬಂದಿಲ್ಲ. ಮತ ಏಣಿಕೆ ಕೇಂದ್ರದಲ್ಲಿ ಅಭ್ಯರ್ಥಿ ಹಾಗೂ ಒಬ್ಬ ಏಜೆಂಟ್‍ಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುವುದು. ಕೊರೊನಾ ಹಿನ್ನಲೆಯಲ್ಲಿ ಮಾಸ್ಕ್‌, ಸ್ಯಾನಿಟೈಜರ್ ಬಳಕೆ ಕಡ್ಡಾಯಗೊಳಿಸಲಾಗಿದೆ. ಮತ ಎಣಿಕೆ ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಿದ್ದು ಯಾವುದೇ ಮೆರವಣಿಗೆ ಮಾಡುವಂತಿಲ್ಲ. ಮತ ಏಣಿಕೆ ಕೇಂದ್ರದಲ್ಲಿ ಪೊಲೀಸ್‌ ಹಾಗೂ ಗೃಹ ರಕ್ಷಕ ದಳ ಸಿಬ್ಬಂದಿಯನ್ನು ನಿಯುಕ್ತಿಗೊಳಿಸಲಾಗಿದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಚ್. ದುರುಗೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.