ADVERTISEMENT

ಆಗಸ್ಟ್‌ 15ರಂದು ಬೆಂಗಳೂರಿನಲ್ಲಿ ಸ್ವಾತಂತ್ರ್ಯ ನಡಿಗೆ: ಎಚ್‌. ಆಂಜನೇಯ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 13:30 IST
Last Updated 10 ಆಗಸ್ಟ್ 2022, 13:30 IST
ಎಚ್.ಆಂಜನೇಯ
ಎಚ್.ಆಂಜನೇಯ   

ರಾಯಚೂರು: 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್ 15ರಂದು ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ವೃತ್ತದಿಂದ ನ್ಯಾಷನಲ್ ಕಾಲೇಜಿನ ಮೈದಾನದವರೆಗೆ ಬೃಹತ್ ಪಾದಯಾತ್ರೆ ಹಾಗೂ ಬಹಿರಂಗ ಸಮಾವೇಶ ಆಯೋಜಿಸಿದ್ದು ಪಕ್ಷದ ರಾಷ್ಟ್ರೀಯ ಮುಖಂಡರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಭಾಗವಹಿಸಲಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಪಕ್ಷದ ಜಿಲ್ಲಾ ಉಸ್ತುವಾರಿ ಎಚ್. ಆಂಜನೇಯ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೃಹತ ಪಾದಯಾತ್ರೆ, ಬಹಿರಂಗ ಸಮಾವೇಶದಲ್ಲಿ ‍ಪ್ರತಿ ತಾಲ್ಲೂಕಿನಿಂದ ಒಂದು ಸಾವಿರ ಹಾಗೂ ಬೆಂಗಳೂರಿನ ಸಮೀಪದ ಜಿಲ್ಲೆಗಳಿಂದ 5 ರಿಂದ 10 ಸಾವಿರದವರೆಗೆ ಜನರು ಭಾಗವಹಿಸಲಿದ್ದು, ಒಟ್ಟು ಎರಡು ಲಕ್ಷ ಜನ ಸೇರಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ದಾವಣೆಗೆರೆಯಲ್ಲಿ ಈಚೆಗೆ ನಡೆದ ಸಿದ್ದರಾಮೋತ್ಸವ ಕಾರ್ಯಕ್ರಮ ಮೂಲಕ ಕಾಂಗ್ರೆಸ್ ಒಗ್ಗಟ್ಟು ಪ್ರದರ್ಶನ ತೋರಿಸಲಾಗಿದೆ. ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ. ಸುಮಾರು 15 ಲಕ್ಷ ಜನ ಸೇರಿದ್ದು, ದೇಶದಲ್ಲಿಯೇ ಐತಿಹಾಸಿಕವಾಗಿ ದಾಖಲಾಗಿದೆ. ಇಷ್ಟು ಜನ ಸೇರುವ ಮೂಲಕ ಪಕ್ಷಕ್ಕೆ ಅಭೂತಪೂರ್ವ ಬೆಂಬಲತೋರಿದ್ದು ಬಿಜೆಪಿಯ ಭ್ರಷ್ಟಾಚಾರ, ದುರಾಡಳಿತವನ್ನು ಕಿತ್ತೆಸೆಯಲು ಪಣ ತೊಟ್ಟಿದ್ದಾರೆ ಎಂದು ತಿಳಿಸಿದರು.

ADVERTISEMENT

ಬಿಜೆಪಿ ಹಲವೆಡೆ ವಾಮಮಾರ್ಗದಿಂದ ಅಧಿಕಾರ ಹಿಡಿಯುತ್ತಿದ್ದು ಪ್ರಜಾಪ್ರಭುತ್ವದ ಮೇಲೆ ಅತ್ಯಾಚಾರ ಎಸಗುತ್ತಿದ್ದಾರೆ. ಬೆಲೆ ಏರಿಕೆ, ಆಹಾರ ವಸ್ತುಗಳ ಮೇಲೆ ಜಿಎಸ್‍ಟಿ, ಇಂದನ, ಅಡುಗೆ ಅನಿಲ, ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ಗಗನಕ್ಕೆ ಏರಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಮುಂದಿನ ಬಾರಿ ಅಧಿಕಾರ ಕೈತಪ್ಪಲಿದೆ ಎಂದು ಭಾರಿ ಭ್ರಷ್ಟಾಚಾರದಲ್ಲಿ ತೊಡಗಿ ಖಜಾನೆಯನ್ನು ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮುಂದೆ ಸಾಮೂಹಿಕ ನಾಯಕತ್ವದಲ್ಲಿ ಚನಾವಣೆ ಎದುರಿಸಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಎಲ್ಲಾ ಕಾರ್ಯಕರ್ತರು ಪಣ ತೊಟ್ಟಿದ್ದಾರೆ. ಸ್ವಪ್ರತಿಷ್ಠೆ, ಭಿನ್ನಮತ ತೋರಿದ್ದಲ್ಲಿ ಶಿಸ್ತುಕ್ರಮಕ್ಕೆ ಗುರಿಯಾಗುತ್ತಾರೆ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹಾಗೂ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯರ ನಡುವೆ ಭಿನ್ನಮತವಿದೆ ಎಂದು ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಹೆಣದ ಮೇಲೆ ರಾಜಕೀಯ ಮಾಡುತ್ತಿರುವ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ ಬಿ.ಎಸ್.ಯಡಿಯೂರಪ್ಪರನ್ನು ವಿನಯದಿಂದ ವಿದಾಯ ಹೇಳದೇ ಕಣ್ಣೀರಿನಿಂದ ನಿರ್ಗಮಿಸಬೇಕಾಯಿತು. ಯಡಿಯೂರಪ್ಪನವರ ಪುತ್ರ ವಿಜಯೇಂದ್ರರನ್ನು ವಿಧಾನಪರಿಷತ್ ಸದಸ್ಯರಾಗಿ ಮಾಡುತ್ತೇವೆ ಎಂದು ನಿರಾಸೆ ಮೂಡಿಸಿದ್ದಾರೆ ಎಂದು ಟೀಕಿಸಿದರು.

ಸಿದ್ಧರಾಮಯ್ಯ ಅವರ ಬಗ್ಗೆ ಹಗುರವಾಗಿ ಮಾತನಾಡುವ ಸಿ.ಟಿ.ರವಿಯವರದ್ದು ಮೂರ್ಖತನದ ಪರಮಾವಧಿ. ಸಿದ್ದರಾಮಯ್ಯನವರ ಆಡಳಿತ, ವ್ಯಕ್ತಿತ್ವವನ್ನು ಮಾದರಿಯಾಗಿ ರಾಜಕಾರಣದಲ್ಲಿ ಆದರ್ಶವಾಗಿಟ್ಟುಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾಧ್ಯಕ್ಷ ಬಿ.ವಿ.ನಾಯಕ, ಶಾಸಕ ದದ್ದಲ್ ಬಸನಗೌಡ, ಮುಖಂಡ ಜಿ.ಬಸವರಾಜರೆಡ್ಡಿ, ರವಿಬೋಸರಾಜು, ರುದ್ರಪ್ಪ ಅಂಗಡಿ, ಅಮರೇಶ ಹಂಚಿನಾಳ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.