ರಾಯಚೂರು: ಶಿಲ್ಪಾ ಮೆಡಿಕೇರ್ ಲಿಮಿಟೆಡ್, ಶಿಲ್ಪಾ ಫೌಂಡೇಶನ್ ಹಾಗೂ ಗ್ರೀನ್ ರಾಯಚೂರು ವತಿಯಿಂದ ರಾಯಚೂರು ಮಹಾನಗರ ಪಾಲಿಕೆಗೆ 2,000ಕ್ಕೂ ಹೆಚ್ಚು ಸಸಿಗಳನ್ನು ಹಸ್ತಾಂತರಿಸಲಾಯಿತು.
ಶಿಲ್ಪಾ ಮೆಡಿಕೇರ್ ಚೇರಮನ್ ವಿಷ್ಣುಕಾಂತ ಬೂತಡಾ ಅವರು ಮಹಾನಗರ ಪಾಲಿಕೆ ಕಚೇರಿ ಮುಂಭಾಗದಲ್ಲಿ ಆಯುಕ್ತ ಜುಬಿನ್ ಮೊಹಾಪಾತ್ರ ಅವರಿಗೆ ಸಾಂಕೇತಿಕವಾಗಿ ಸಸಿ ನೀಡುವ ಮೂಲಕ ಸಸಿಗಳನ್ನು ಹಸ್ತಾಂತರಿಸಿದರು.
ಆಯುಕ್ತ ಜುಬಿನ್ ಮೊಹಾಪಾತ್ರಾ ಮಾತನಾಡಿ, ‘ಮಹಾನಗರ ಪಾಲಿಕೆ ವತಿಯಿಂದ ನಗರವನ್ನು ಸ್ವಚ್ಛಗೊಳಿಸುವುದರ ಜೊತೆಗೆ ಹಸಿರು ಕ್ರಾಂತಿ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಶಿಲ್ಪಾ ಮೆಡಿಕೇರ್ ಕಂಪನಿ ಹಾಗೂ ಗ್ರೀನ್ ರಾಯಚೂರು ಸಂಸ್ಥೆ ಸಹ ಜೊತೆಯಾಗಿದ್ದು ಖುಷಿ ತಂದಿದೆ’ ಎಂದರು.
‘ಬರುವ ದಿನಗಳಲ್ಲಿ ರಾಯಚೂರಿನಲ್ಲಿ ಶೇ 33ರಷ್ಟು ಹಸಿರು ಹೊದಿಕೆ ಕಾಣುವಂತಾಗಲು ಶ್ರಮಿಸಲಿ. ಸಾರ್ವಜನಿಕರು ಸಹ ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.
ಶಿಲ್ಪಾ ಮೆಡಿಕೇರ್ ಚೇರಮನ್ ವಿಷ್ಣುಕಾಂತ ಬೂತಡಾ ಮಾತನಾಡಿ, ‘ನಮ್ಮ ಸಂಸ್ಥೆ ಹಾಗೂ ಗ್ರೀನ್ ರಾಯಚೂರು ಸಂಸ್ಥೆ 2017ರಿಂದ ನಗರದಲ್ಲಿ ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಕಾರ್ಯ ಮಾಡುತ್ತಿದೆ. ಈ ಬಾರಿ 2,000 ಸಸಿಗಳನ್ನು ಮಹಾನಗರ ಪಾಲಿಕೆಗೆ ನೀಡಲಾಗಿದೆ’ ಎಂದು ತಿಳಿಸಿದರು.
ಮಹಾನಗರ ಪಾಲಿಕೆಯ ಅಧಿಕಾರಿ ಮೇನಕಾ ಪಾಟೀಲ, ಕಾಂಗ್ರೆಸ್ ಮುಖಂಡರಾದ ಎಂ.ಈರಣ್ಣ , ಗ್ರೀನ್ ರಾಯಚೂರು ಸಂಸ್ಥೆಯ ಅಧ್ಯಕ್ಷೆ ಸರಸ್ವತಿ ಕಿಲಕಲೆ, ಉಪಾಧ್ಯಕ್ಷ ಡಾ.ಸಿ.ಪಿ.ಪಾಟೀಲ, ರಮೇಶಚಂದ್ರ ಜೈನ್, ಕಾರ್ಯದರ್ಶಿ ರಾಜೇಂದ್ರಕುಮಾರ್ ಶಿವಾಳೆ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.