ADVERTISEMENT

ಕಲಿಕಾ ಗುಣಮಟ್ಟ ಹೆಚ್ಚಿಸಲು ಶಿಕ್ಷಕರು ಶ್ರಮಿಸಿ

ಹಸಲೇ ಫ್ರೀ ಫೌಂಡೇಷನ್‌ನಿಂದ ಸರ್ಕಾರಿ ಶಾಲೆಗಳಿಗೆ ಉಚಿತ ಟ್ಯಾಬ್‌ ಕೊಡುಗೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2019, 14:13 IST
Last Updated 21 ನವೆಂಬರ್ 2019, 14:13 IST
ರಾಯಚೂರಿನ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಯೋಗದಲ್ಲಿ ಹಸಲೇಫ್ರೀ ಫೌಂಡೇಷನ್‌ನಿಂದ ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ಟ್ಯಾಬ್‌ಗಳನ್ನು ವಿತರಿಸಲಾಯಿತು
ರಾಯಚೂರಿನ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಯೋಗದಲ್ಲಿ ಹಸಲೇಫ್ರೀ ಫೌಂಡೇಷನ್‌ನಿಂದ ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ಟ್ಯಾಬ್‌ಗಳನ್ನು ವಿತರಿಸಲಾಯಿತು   

ರಾಯಚೂರು: ನೀತಿ ಆಯೋಗವು ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳನ್ನು ಮಹತ್ವಾಕಾಂಕ್ಷಿ ಜಿಲ್ಲೆಗಳೆಂದು ಆಯ್ಕೆ ಮಾಡಿದ್ದು, ಮಕ್ಕಳ ಕಲಿಕಾ ಗುಣಮಟ್ಟ ಸುಧಾರಿಸಲು ನೆರವು ಒದಗಿಸುತ್ತಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಶಿಕ್ಷಕರು ಗುರುತಿಸಿ ಗುಣಮಟ್ಟ ಸುಧಾರಿಸಲು ಯತ್ನಿಸುವಂತೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ.ನಂದನೂರು ಕರೆ ನೀಡಿದರು.

ನಗರದ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಯೋಗದಲ್ಲಿ ಹಸಲೇ ಫ್ರೀ ಫೌಂಡೇಶನ್‌ನಿಂದ ಸರ್ಕಾರಿ ಶಾಲೆಗೆ ಉಚಿತ ಟ್ಯಾಬ್‌ ವಿತರಿಸಿ ಮಾತನಾಡಿದರು.

ಇಂಗ್ಲಿಷ್‌, ಗಣಿತ ಹಾಗೂ ವಿಜ್ಞಾನ ಕಲಿಕೆಯನ್ನು ಸರಳೀಕರಣ ಮಾಡಬೇಕಿದೆ.ಈಗ ಹಸನ್ ಫ್ರೀ ಫೌಂಡೇಶನ್ ವತಿಯಿಂದ ಫ್ಯೂಚರ್ ಶಾಂದಾರ್ ಯೋಜನೆಯಡಿಯಲ್ಲಿ ಈ ಟ್ಯಾಬ್‌ಗಳನ್ನು ವಿತರಿಸಲಾಗುತ್ತದೆ‌. ಇದು ಮಕ್ಕಳ ಕಲಿಕೆಗೆ ಬಹಳ ಅನುಕೂಲಕರವಾಗಿದ್ದು ಈ ಟ್ಯಾಬ್‌ನಲ್ಲಿ ಮಕ್ಕಳು ಯಾವುದೇ ಪ್ರಶ್ನೆ ಕೇಳಿದರೂ ಅದು 10 ಸೆಕೆಂಡ್‌ನಲ್ಲಿ ಅವರಿಗೆ ಉತ್ತರ ಒದಗಿಸುತ್ತದೆ ಎಂದು ತಿಳಿಸಿದರು.

ADVERTISEMENT

ಹಸಲೇಫ್ರೀ ಫೌಂಡೇಶನ್ ಅಧಿಕಾರಿ ಮುಕುಂದ ಕೃಷ್ಣಮೂರ್ತಿ ಮಾತನಾಡಿ, ದೇಶದಲ್ಲಿ ಹಿಂದುಳಿದ ಜಿಲ್ಲೆಗಳನ್ನು ಕೇಂದ್ರ ಸರ್ಕಾರವು ಗುರುತಿಸಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ತಾಂತ್ರಿಕತೆಯನ್ನು ಪರಿಚಯಿಸಲು ಉತ್ಸುಕವಾಗಿದ್ದು, ಮುಂಬರುವ ದಿನಗಳಲ್ಲಿ ಪ್ರತಿ ಶಾಲೆಯ 25 ಮಕ್ಕಳಿಗೆ ಟ್ಯಾಬ್‌ ವಿತರಿಸುವ ಗುರಿ ಇದೆ ಎಂದರು.

ಟ್ಯಾಬ್‌ ಎದುರು ಇಂಗ್ಲಿಷ್‌ನಲ್ಲಿ ಪ್ರಶ್ನೆ ಕೇಳಿದರೆ ಅದು ಉತ್ತರಿಸುತ್ತದೆ. ಒಂದು ವೇಳೆ ಉತ್ತರ ಗೊತ್ತಾಗದಿದ್ದರೂ ಪ್ರಶ್ನೆಯನ್ನು ಉಳಿಸಿಕೊಂಡು, ಅನಂತರ ಇಂಟರ್‌ನೆಟ್‌ ಮೂಲಕ ಉತ್ತರ ಶೋಧಿಸಿ ಸಂಗ್ರಹಿಸಿಕೊಳ್ಳುತ್ತದೆ. ಮತ್ತೊಮ್ಮೆ ಇದೇ ಪ್ರಶ್ನೆ ಕೇಳಿದಾಗ ಉತ್ತರಿಸುತ್ತದೆ. ಕಲಿಕೆಗೆ ಪೂರಕವಾಗುವಂತೆ ಸಾಫ್ಟವೇರ್‌ ಅಳವಡಿಸಲಾಗಿದೆ ಎಂದು ತಿಳಿಸಿದರು.

ಭಾರತ ಜ್ಞಾನ ವಿಜ್ಞಾನ ಸಮಿತಿಯ ಸೈಯದ್ ಹಫೀಜುಲ್ಲಾ ಹಾಗೂ ಪ್ರಾದೇಶಿಕ ವಿಜ್ಞಾನ ಕೇಂದ್ರದಅಜಿತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.