ಕವಿತಾಳ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಎರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಧಾರಾಕಾರ ಮಳೆಯಿಂದ ಜಮೀನುಗಳು ಜಲಾವೃತವಾಗಿದ್ದು, ರೈತರಲ್ಲಿ ಆತಂಕ ಮೂಡಿಸಿದೆ.
ಹೋಬಳಿ ವ್ಯಾಪ್ತಿಯಲ್ಲಿ ಅಂದಾಜು 6 ಸಾವಿರ ಹೆಕ್ಟೇರ್ ಹತ್ತಿ, 7 ಸಾವಿರ ಹೆಕ್ಟೇರ್ ತೊಗರಿ ಸೇರಿದಂತೆ 15,750 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳನ್ನು ಬೆಳೆಯಲಾಗಿದೆ. ಸತತ ಮಳೆ ಕಟಾವು ಹಂತದ ಹತ್ತಿ ಮತ್ತು ತೊಗರಿ ಬೆಳೆಗಳಿಗೆ ಸಂಕಷ್ಟ ತಂದೊಡ್ಡಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.
‘ಒಂದು ತಿಂಗಳಿಂದ ಆಗಾಗ ಸುರಿಯುತ್ತಿರುವ ಮಳೆ ಹಾಗೂ ಮೋಡ ಕವಿದ ವಾತಾವರಣ ಸಾಕಷ್ಟು ಹಾನಿ ಉಂಟು ಮಾಡಿದೆ. ಇದೀಗ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಸಮಸ್ಯೆಯಾಗಿದೆ. ಹತ್ತಿ ಬಿಡಿಸುವುದಕ್ಕೂ ಮಳೆ ಅವಕಾಶ ನೀಡುತ್ತಿಲ್ಲ. ಹತ್ತಿ ಕಾಯಿಗಳು ಕಪ್ಪು ಬಣ್ಣಕ್ಕೆ ತಿರುಗಿ ಮುದುಡುತ್ತಿವೆ. ಮತ್ತೊಂದೆಡೆ ಗಿಡದಲ್ಲಿನ ಹತ್ತಿ ಬಿಡಿಸದ ಕಾರಣ ಅದೂ ಹಳದಿ, ಕೆಂಪು ಬಣ್ಣಕ್ಕೆ ತಿರುಗಿ ಹಾಳಾಗುತ್ತಿದೆ. ಈಗಾಗಲೇ ಶೇ 50 ರಷ್ಟು ಹತ್ತಿ ಬೆಳೆ ಹಾಳಾಗಿದೆ’ ಎಂದು ಪಟ್ಟಣದ ರೈತ ಮುಕ್ತಾರ್ ಪಾಷಾ ಹೇಳಿದರು.
‘ಅಂದಾಜು 10 ಎಕರೆ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಿದ್ದು, ಇಲ್ಲಿಯವರೆಗೆ 5 ರಿಂದ 6 ಬಾರಿ ರಸಗೊಬ್ಬರ ಹಾಕಿ ಕ್ರಿಮಿನಾಶಕ ಸಿಂಪಡಣೆ ಮಾಡಲಾಗಿದೆ. ಕಳೆ ತೆಗೆಯಲಾಗಿದೆ. ಇದೆಲ್ಲಕ್ಕೂ ಅಂದಾಜು ₹3.5 ಲಕ್ಷ ಖರ್ಚು ಮಾಡಿದ್ದೇನೆ. ಈಗ ಮಳೆಯಿಂದ ಬಹುತೇಕ ಬೆಳೆಗೆ ಹಾನಿಯಾಗಿದೆ. ಕಾರ್ಮಿಕರು ಸಿಗುತ್ತಿಲ್ಲ. ಹತ್ತಿ ಬಿಡಿಸಲು ಮಳೆ ಆಸ್ಪದ ನೀಡುತ್ತಿಲ್ಲ. ಹೀಗಾಗಿ ನಷ್ಟ ಅನುಭವಿಸುವಂತಾಗಿದೆ’ ಎಂದು ರೈತ ಮೌನೇಶ ಹಿರೇಕುರಬರ ಹೇಳಿದರು.
ನಿರಂತರ ಮಳೆಯಿಂದ ಬೇರು ಕೊಳೆತು ತೊಗರಿ ಬೆಳೆ ನೆಲಕ್ಕುರುಳುತ್ತಿದೆ. ಹತ್ತಿ ಬೆಳೆಗೂ ಹಾನಿಯಾಗಿದೆ. ರೈತರು ನಷ್ಟ ಅನುಭವಿಸುವಂತಾಗಿದೆಗಂಗಪ್ಪ ಕಾರಟಗಿ ಅಮೀನಗಡ ರೈತ
ಜಮೀನಿನಲ್ಲಿ ಮಳೆ ನೀರು ನಿಂತು ಈರುಳ್ಳಿ ಬೆಳೆಗೆ ಹಾನಿಯಾಗಿದೆ. ಲಕ್ಷಾಂತರ ನಷ್ಟ ಉಂಟಾಗಿದೆಹುಸೇನಬಾಷಾ ಪಾಮನಕಲ್ಲೂರು ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.