ADVERTISEMENT

ಭಾರಿ ಮಳೆ: ಸಂತ್ರಸ್ತರಾದ ರಾಯಚೂರು ನಗರದ ಜನರು

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2021, 6:59 IST
Last Updated 9 ಅಕ್ಟೋಬರ್ 2021, 6:59 IST
   

ರಾಯಚೂರು: ನಗರದಲ್ಲಿ ಶುಕ್ರವಾರ ರಾತ್ರಿಯಿಡೀ ಸುರಿದ ಅಬ್ಬರದ ಮಳೆಯಿಂದ ರಾಯಚೂರು ನಗರದ ಹಲವು ಬಡಾವಣೆಗಳ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ನಿದ್ರೆ, ಆಹಾರವಿಲ್ಲದೆ ಸಂತ್ರಸ್ತರಾಗಿದ್ದಾರೆ.

ಸಿಯಾತಾಲಾಬ್, ಬಂದರ್ ಗಲ್ಲಿ, ಮೇದಾರ್ ಗಲ್ಲಿ ಹಾಗೂ ಎಲ್ ಬಿಎಸ್ ನಗರದ ನೂರಾರು ಮನೆಗಳಲ್ಲಿ ನೀರು ತುಂಬಿಕೊಂಡಿದೆ. ಜನರು ನಡುರಾತ್ರಿ 1 ಗಂಟೆಯಿಂದ ಜಾಗರಣೆ ಮಾಡುತ್ತಿದ್ದು, ವಯೋವೃದ್ಧರು, ಚಿಕ್ಕಮಕ್ಕಳ ಪರದಾಟ ಹೇಳತೀರದಾಗಿದೆ.

ಆಹಾರ ಪದಾರ್ಥಗಳು, ಶಾಲಾ‌ಮಕ್ಕಳ ಪಠ್ಯಪುಸ್ತಕಗಳು, ಹೊದಿಕೆಗಳು ಸೇರಿದಂತೆ ಮನೆಯಲ್ಲಿದ್ದ ವಸ್ತುಗಳೆಲ್ಲ ತೊಯ್ದು ಹೋಗಿವೆ. ಕುಡಿಯುವುದಕ್ಕೆ ಶುದ್ಧನೀರು ಇಲ್ಲದೆ ಜನರು ತಲೆಮೇಲೆ ಕೈಹೊತ್ತು ಅಸಹಾಯಕತೆಯಿಂದ ಕುಳಿತಿದ್ದಾರೆ.

ADVERTISEMENT

ಬೆಳಗಿನ ಜಾವ ಮಳೆ ಸ್ಥಗಿತವಾಗಿದ್ದರೂ ಮನೆಗಳಲ್ಲಿ ಇನ್ನೂ ನೀರು ಎರಡು ಅಡಿಗಳಷ್ಟು ಸಂಗ್ರಹವಾಗಿದೆ. ಪ್ರತಿದಿನ ವಿವಿಧ ಕೆಲಸಗಳಿಗೆ ತೆರಳಬೇಕಿದ್ದವರು, ಅಸಹಾಯಕರಾಗಿದ್ದಾರೆ.
ಶನಿವಾರ ಮಧ್ಯಾಹ್ನ 12 ಗಂಟೆಯಾದರೂ ಮಳೆನೀರು ಹರಿದುಹೋಗಿಲ್ಲ.‌ ರಾಜಕಾಲುವೆಯಲ್ಲಿ ಸಮರ್ಪಕವಾಗಿ ಮಳೆನೀರು ಹರಿದುಹೋಗದಿರುವುದು ಸಮಸ್ಯೆಗೆ ಕಾರಣ. ಪ್ರತಿವರ್ಷವೂ ಸಮಸ್ಯೆ ಮರುಕಳಿಸಿದರೂ ನಗರಸಭೆಯಿಂದ ಪರಿಹಾರ ಕಲ್ಪಿಸಿಲ್ಲ.

ಶಾಸಕರ ವಿರುದ್ಧ ಆಕ್ರೋಶ: 'ಮಳೆ ನೀರು ಸಂಗ್ರಹವಾದಾಗೊಮ್ಮೆ ಶಾಸಕರು ಸ್ಥಳಕ್ಕೆ ಬಂದು ನೋಡಿಕೊಂಡು ಹೋಗುತ್ತಾರೆ. ಏನೂ ಕೆಲಸ ಮಾಡಿಸಿಲ್ಲ. ಈಗ ಉಪವಾಸ ಇದ್ದರೂ ಸಂಕಷ್ಟ ಕೇಳಲಿಲ್ಲ. ಅಧಿಕಾರಿಗಳೊಂದಿಗೆ ಬಂದು ದೂರದಿಂದ ನೀರು ನುಗ್ಗಿರುವುದನ್ನು ನೋಡಿಕೊಂಡು ಹೋದರು. ಚುನಾವಣೆ ಬಂದಾಗೊಮ್ಮೆ ಕೈ ಮುಗಿದು ಬರುತ್ತಾರೆ. ರಾಜಕಾಲುವೆ ಏಕೆ ದುರಸ್ತಿ ಮಾಡಿಸುತ್ತಿಲ್ಲ' ಎಂದು ಸಿಯಾಯಾಲಾಬ್ ನಿವಾಸಿಗಳಾದ ವೆಂಕಟೇಶ, ಮುಮ್ತಾಜ್ ಅವರು ನಗರ ಶಾಸಕ ಡಾ.ಶಿವರಾಜ ಪಾಟೀಲ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.