ADVERTISEMENT

ಮಸ್ಕಿ | ಮಳೆ: ಕೆರೆಯಾಗುವ ಸೋಮನಾಥ ನಗರ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 5:02 IST
Last Updated 25 ಅಕ್ಟೋಬರ್ 2025, 5:02 IST
ಮಸ್ಕಿಯ ಸೋಮನಾಥ ನಗರದಲ್ಲಿ ಮಳೆ ನೀರು ಮನೆಗಳ ಸುತ್ತ ಸಂಗ್ರಹವಾಗಿ ಹಸಿರು ಬಣ್ಣಕ್ಕೆ ಬಂದಿರುವುದು
ಮಸ್ಕಿಯ ಸೋಮನಾಥ ನಗರದಲ್ಲಿ ಮಳೆ ನೀರು ಮನೆಗಳ ಸುತ್ತ ಸಂಗ್ರಹವಾಗಿ ಹಸಿರು ಬಣ್ಣಕ್ಕೆ ಬಂದಿರುವುದು   

ಮಸ್ಕಿ: ಪಟ್ಟಣದ ಸೋಮನಾಥನಗರ ಪ್ರದೇಶದಲ್ಲಿ ಮಳೆ ಬಂದರೆ ಸಾಕು ಬೀದಿಗಳು ಕೆರೆಯಂತಾಗುತ್ತವೆ. ಒಳಚರಂಡಿ ವ್ಯವಸ್ಥೆಯ ಕೊರತೆ ಮತ್ತು ಪುರಸಭೆಯ ನಿರ್ಲಕ್ಷ್ಯದಿಂದ ಜನ ನಿಂತ ಕೊಳಚೆ ನೀರಿನ ನಡುವೆ ಕಷ್ಟಕರ ಜೀವನ ನಡೆಸುತ್ತಿದ್ದಾರೆ.

ಸೋಮನಾಥನಗರದ ರಸ್ತೆಗಳು ಮತ್ತು ಮನೆಗಳ ಸುತ್ತಮುತ್ತ ನೀರು ನಿಂತು ಹಲವಾರು ದಿನಗಳು ಹರಿಯದೇ ಉಳಿಯುತ್ತದೆ. ಹಸಿರು ಕಪ್ಪು ನೀರಿನ ನಡುವೆ ಮಕ್ಕಳು, ಮಹಿಳೆಯರು ದಿನನಿತ್ಯದ ಚಟುವಟಿಕೆಗಳನ್ನು ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಿಂತ ನೀರಿನಿಂದ ಮಲೇರಿಯಾ, ಡೆಂಗ್ಯೂ ಮುಂತಾದ ಕಾಯಿಲೆಗಳ ಆತಂಕ ಹೆಚ್ಚಾಗಿದೆ.

ಸ್ಥಳೀಯರು ಹಲವು ಬಾರಿ ಪುರಸಭೆಗೆ ಮನವಿ ಸಲ್ಲಿಸಿದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದಾಗಿ ಆರೋಪಿಸಲಾಗಿದೆ. ‘ಮಳೆ ಬಂದರೆ ಮನೆ ಬಿಟ್ಟು ಹೋಗಬೇಕಾದ ಪರಿಸ್ಥಿತಿ. ಆದರೆ ಅಧಿಕಾರಿಗಳು ಸ್ಥಳಕ್ಕೆ ಬರುವುದೂ ಇಲ್ಲ’ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ನೀರಿನ ಹರಿವಿನ ಮಾರ್ಗಗಳು ಮುಚ್ಚಿ ಹೋಗಿರುವುದು ಹಾಗೂ ಒಳಚರಂಡಿ ಶುದ್ಧೀಕರಣದ ಕೊರತೆಯೇ ಈ ಸ್ಥಿತಿಗೆ ಕಾರಣವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಪ್ರದೇಶದಲ್ಲಿ ಸಮರ್ಪಕ ಡ್ರೆನೇಜ್ ಕ್ಲೀನಿಂಗ್ ಹಾಗೂ ನೀರು ಹರಿಯುವ ವ್ಯವಸ್ಥೆ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಆರೋಗ್ಯ ಅಪಾಯ ಎದುರಾಗುವ ಸಾಧ್ಯತೆ ಇದೆ ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಜನರ ಸಮಸ್ಯೆಯನ್ನು ಪರಿಗಣಿಸಿ ಮಸ್ಕಿ ಪುರಸಭೆ ತಕ್ಷಣ ಕ್ರಮ ಕೈಗೊಳ್ಳಬೇಕು ಒಳಚರಂಡಿ ಮತ್ತು ನೀರು ಹರಿಯುವ ವ್ಯವಸ್ಥೆ ಸುಧಾರಿಸಬೇಕು
ಹನುಮೇಶ ನಾಯಕ ಸ್ಥಳೀಯ ನಿವಾಸಿ
ಸೋಮನಾಥ ನಗರದಲ್ಲಿ ಮನೆಗಳ ಸುತ್ತ ನಿಂತ ನೀರನ್ನು ಹೊರ ಹಾಕಲು ಪುರಸಭೆಯಿಂದ ಕ್ರಮ ಕೈಗೊಳ್ಳಲಾಗಿದೆ‌. ಮೊಟಾರ್ ಅಳವಡಿಸಿ ನೀರು ಹೊರ ಹಾಕುವ ಕೆಲಸ ನಡೆದಿದೆ
ನರಸರೆಡ್ಡಿ ಪುರಸಭೆ ಮುಖ್ಯಾಧಿಕಾರಿ 

ಹಕ್ಕುಪತ್ರ ಸೌಲಭ್ಯಕ್ಕಾಗಿ ಹೋರಾಟ

ನೀರಾವರಿ ಇಲಾಖೆಗೆ ಸೇರಿದ ಜಾಗ ಎನ್ನಲಾದ ಸೋಮನಾಥ ನಗರದಲ್ಲಿ 30-40 ವರ್ಷಗಳಿಂದ ನೂರಾರು ಬಡ ಕೂಲಿ ಕಾರ್ಮಿಕರು ಗುಡಿಸಲು ಮನೆಗಳನ್ನು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ‌. ಈ ಜನರಿಗೆ ಹಕ್ಕು ಪತ್ರ ನೀಡಿ ಸರ್ಕಾರದ ಸೌಲಭ್ಯ ಒದಗಿಸಬೇಕು ಎಂದು ಹಲವಾರು ದಿನಗಳಿಂದ ಹೋರಾಟ ನಡೆಸಲಾಗುತ್ತಿದೆ. ಈ ಜಮೀನಿನಲ್ಲಿ ವಾಸ ಮಾಡುವ ಬಡ ಜನರಿಗೆ ಹಕ್ಕುಪತ್ರ ನೀಡುವ ಸಂಬಂಧ ಸರ್ಕಾರ ಮಟ್ಟದಲ್ಲಿ ಕೆಲಸವಾಗಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.