ಸಿರವಾರ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯಲಿರುವ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ತಾಲ್ಲೂಕಿನ ಹೀರಾ ಗ್ರಾಮದ ಸಿಂಧು, ಮಂಜುನಾಥ ಹೀರಾ ದಂಪತಿ ಆಯ್ಕೆಯಾಗಿದ್ದಾರೆ. ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಜಿಲ್ಲೆಯಲ್ಲಿ ಮಣ್ಣಿನ ಆರೋಗ್ಯ ಕಾಪಾಡುವುದು, ಸಾವಯವ ಕೃಷಿಗೆ ಆದ್ಯತೆ ಸೇರಿ ಕೃಷಿ ಕ್ಷೇತ್ರಕ್ಕೆ ದಂಪತಿ ನೀಡಿದ ಕೊಡುಗೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಹೀರಾ ದಂಪತಿಯನ್ನು ಆಹ್ವಾನಿಸಿದೆ. ಕೃಷಿ ಕೌಶಲ್ಯ ರೈತ ಉತ್ಪಾದಕರ ಕಂಪನಿಯನ್ನೂ ಸ್ಥಾಪಿಸಿರುವ ದಂಪತಿ ಕೃಷಿ ಕ್ಷೇತ್ರದ ಏಳಿಗೆಗೆ ಹೆಚ್ಚಿನ ಕೊಡುಗೆ ನೀಡಿದ್ದಾರೆ.
ರಾಯಚೂರು ಹಾಗೂ ಸಿರವಾರ ತಾಲ್ಲೂಕಿನಾದ್ಯಂತ ರೈತರಿಗೆ ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ, ಯಾವ ಮಣ್ಣಿನಲ್ಲಿ ಯಾವ ಬೆಳೆ ಬೆಳೆಯಬೇಕು. ಸಾವಯವ ಕೃಷಿಯಲ್ಲಿ ಲಾಭ ಗಳಿಸುವುದು ಹೇಗೆ, ರಸಗೊಬ್ಬರ, ಕ್ರಿಮಿನಾಶಕಗಳನ್ನು ಬಳಸದೆಯೇ ಮಣ್ಣಿನ ಆರೋಗ್ಯ ಕಾಪಾಡಿಕೊಂಡು ಹೇಗೆ ಲಾಭದಾಯಕ ಕೃಷಿ ಕೈಗೊಳ್ಳುವುದು ಎನ್ನುವುದೂ ಸೇರಿ ರೈತರಿಗೆ ಹತ್ತಾರು ರೀತಿಯಲ್ಲಿ ಮಂಜುನಾಥ ದಂಪತಿ ನೆರವಾಗಿದ್ದಾರೆ.
ಸಿಂಧು–ಮಂಜುನಾಥ ಹೀರಾ ದಂಪತಿ ಶ್ರಮದ ಫಲವಾಗಿ ಇಂದು ಸಿರವಾರ ತಾಲ್ಲೂಕಿನಾದ್ಯಂತ ಮಣ್ಣಿನ ಆರೋಗ್ಯ ಸುಧಾರಿಸಿದೆ. ರೈತರು ಸಾಂಪ್ರದಾಯಿಕ ಕೃಷಿಯ ಜೊತೆಗೆ ವೈಜ್ಞಾನಿಕ ಕೃಷಿಯಲ್ಲೂ ತೊಡಗಿಸಿಕೊಂಡು ಲಾಭ ಗಳಿಸಲು ದಂಪತಿ ಶ್ರಮಿಸುತ್ತಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಳ್ಳುತ್ತಿರುವುದು ಸಂತಸದ ಸಂಗತಿ ಎಂದು ಹೀರಾ ಗ್ರಾಮದ ಬಸವರಾಜ ದೊಡ್ಮನಿ ಮತ್ತು ರೈತರು ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.