ADVERTISEMENT

ರಾಯಚೂರು | ಜಿಲ್ಲೆಯಲ್ಲಿ ಮಕ್ಕಳ ಕೈ ಹಿಡಿದ ‘ಬೇಸಿಗೆಯೂಟ’

ಬೇಸಿಗೆ ರಜೆಯಲ್ಲೂ ಮುಂದುವರಿದ ಅಕ್ಷರ ದಾಸೋಹ: ಮುಖ್ಯಶಿಕ್ಷಕರು, ನೋಡಲ್ ಅಧಿಕಾರಿಗಳ ನೇಮಕ

ಬಾವಸಲಿ
Published 27 ಏಪ್ರಿಲ್ 2024, 6:33 IST
Last Updated 27 ಏಪ್ರಿಲ್ 2024, 6:33 IST
ರಾಯಚೂರಿನ ಸಿಯತಲಾಬ್ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಮಕ್ಕಳು ಬಿಸಿಯೂಟ ಸೇವನೆ ಮಾಡಿದರು
ರಾಯಚೂರಿನ ಸಿಯತಲಾಬ್ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಮಕ್ಕಳು ಬಿಸಿಯೂಟ ಸೇವನೆ ಮಾಡಿದರು   

ರಾಯಚೂರು: ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸಲು ಹಾಗೂ ಬಡ ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ಸರ್ಕಾರ ಜಾರಿ ಮಾಡಿದ ಬಿಸಿಯೂಟ ಯೋಜನೆಯನ್ನು ಬೇಸಿಗೆ ರಜೆಯಲ್ಲಿಯೂ ಮುಂದುವರಿಸಿದ ಪರಿಣಾಮ ಅನೇಕ ಮಕ್ಕಳಿಗೆ ಅನುಕೂಲವಾಗಿದೆ.

ಜಿಲ್ಲೆಯಲ್ಲಿ ತೀವ್ರ ಬರ ಪರಿಸ್ಥಿತಿ ಇರುವ ಕಾರಣ ಬಡ ಮಕ್ಕಳಿಗೆ ಸರಿಯಾದ ಸಮಯಕ್ಕೆ ಊಟ ಪಡೆಯಲು ಹಾಗೂ ಹಸಿವಿನಿಂದ ಬಳಲುವುದನ್ನು ತಡೆಯಲು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯಿಂದ ಬೇಸಿಗೆ ರಜೆಯಲ್ಲಿಯೂ ಮಕ್ಕಳಿಗೆ ಬಿಸಿಯೂಟ ನೀಡಲಾಗುತ್ತಿದೆ.

ಬೇಸಿಗೆಯ ಬಿರು ಬಿಸಿಲಿನಿಂದ ಮಕ್ಕಳು ಮಧ್ಯಾಹ್ನ ಶಾಲೆಗೆ ಬರಲು ಹಿಂದೇಟು ಹಾಕುವ ಸಾಧ್ಯತೆ ಇರುವ ಕಾರಣ ಬೆಳಿಗ್ಗೆ 10ರಿಂದ 11.30ರವರೆಗೆ ಬಿಸಿಯೂಟ ಕೊಡಲಾಗುತ್ತಿದೆ.

ADVERTISEMENT

ಜಿಲ್ಲೆಯಲ್ಲಿ ಒಟ್ಟು 1,20,357 ಮಕ್ಕಳು ಬಿಸಿಯೂಟ ಸೇವಿಸುವುದಾಗಿ ಒಪ್ಪಿಗೆ ಪತ್ರ ನೀಡಿದ್ದರು. ಈ ಪೈಕಿ 91,769 ಮಕ್ಕಳು ಊಟ ಸೇವನೆ ಮಾಡುತ್ತಿದ್ದಾರೆ. 1249 ಶಾಲೆಗಳಿಗೆ 2658 ಅಡುಗೆ ಸಿಬ್ಬಂದಿ ಹಾಗೂ 1249 ಮುಖ್ಯ ಶಿಕ್ಷಕರು ಹಾಗೂ 250ಕ್ಕಿಂತ ಹೆಚ್ಚು ಮಕ್ಕಳು ಇರುವ ಕೇಂದ್ರಗಳಲ್ಲಿ 63 ನೋಡಲ್ ಶಿಕ್ಷಕರನ್ನು ನೇಮಕ ಮಾಡಲಾಗಿದೆ. 

‘ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಯ ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಲು ಬೇಸಿಗೆ ರಜೆಯಲ್ಲಿಯೂ ಬಿಸಿಯೂಟ ನೀಡಲಾಗುತ್ತಿದೆ. ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಕ್ಷರ ದಾಸೋಹ ಯೋಜನೆಯ ಅಧಿಕಾರಗಳು ಪ್ರತಿದಿನ ಶಾಲೆಗಳಿಗೆ ಭೇಟಿ ನೀಡುತ್ತಿದ್ದಾರೆ. ಮಕ್ಕಳ ಹಾಜರಾತಿ ಪಡೆಯುತ್ತಿದ್ದಾರೆ’ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಕೆ.ಡಿ ಬಡಿಗೇರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಬಿಸಿಯೂಟಕ್ಕೆ ಮಕ್ಕಳಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಮಕ್ಕಳಿಗೆ ಗುಣಮಟ್ಟ ಹಾಗೂ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಪ್ರತಿ ಶಾಲೆಗೆ ಭೇಟಿ ನೀಡಿ ಸ್ವಚ್ಛತೆ ಹಾಗೂ ಗುಣಮಟ್ಟದ ಬಗ್ಗೆ ಖಾತ್ರಿಪಡಿಸಿಕೊಳ್ಳಲಾಗುತ್ತಿದೆ. ಮಕ್ಕಳಿಗೆ ಊಟ ನೀಡುವ ಮುಂಚೆ ಮುಖ್ಯ ಶಿಕ್ಷಕ ಹಾಗೂ ಅಡುಗೆ ಸಿಬ್ಬಂದಿ ಮೊದಲು ಸೇವಿಸಿ ಮಕ್ಕಳಿಗೆ ಊಟ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಹೆಚ್ಚು ಬಿಸಿಲು ಇರುವ ಕಾರಣ ದೂರದಿಂದ ಶಾಲೆಗೆ ಬರಲು ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ ಮಕ್ಕಳು ತಾವು ವಾಸವಾಗಿರುವ ಮನೆಗಳ ಸಮೀಪದ ಶಾಲೆಯಲ್ಲಿಯೇ ಊಟ ಸೇವಿಸಲು ಅನುಕೂಲ ಕಲ್ಪಿಸಲಾಗಿದೆ’ ಎಂದು ರಾಯಚೂರು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಭಂಡಾರಿ ತಿಳಿಸಿದರು.

‘ಬೇಸಿಗೆ ರಜೆಯಲ್ಲಿ ಬಿಸಿಯೂಟ ನೀಡುವ ಕಾರ್ಯ ಒಳ್ಳೆಯದೇ. ಆದರೆ ರಜಾ ಅವಧಿಯಲ್ಲಿ ನೆಮ್ಮದಿಯಾಗಿ ಕುಟುಂಬದ ಜೊತೆ ಕಾಲ ಕಳೆಯುವ ಉದ್ದೇಶಕ್ಕೆ ತೊಡಕಾಗಿದೆ. ಬಿಸಿಯೂಟ ಸಿಬ್ಬಂದಿಯಿಂದ ಮಕ್ಕಳ ಮನೆಗಳಿಗೆ ಊಟ ಅಥವಾ ಆಹಾರ ಸಾಮಗ್ರಿ ತಲುಪಿಸಿದರೆ ಸೂಕ್ತವಾಗಿರುತ್ತಿತ್ತು’ ಎಂದು ಹೆಸರು ಹೇಳಲು ಇಚ್ಚಿಸದ ಮುಖ್ಯಶಿಕ್ಷಕರೊಬ್ಬರು ಅಳಲು ತೋಡಿಕೊಂಡರು.

ದೇವದುರ್ಗ ತಾಲ್ಲೂಕಿನ ಪಾತರಗುಡ್ಡ ಎಲ್‌ಪಿಎಸ್ ಶಾಲೆಯಲ್ಲಿ ಬಿಸಿಯೂಟ ಸೇವನೆ ಮಾಡುವ ಸಮಯದಲ್ಲಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು

91,769 ಮಕ್ಕಳು ಬಿಸಿಯೂಟ ಸೇವನೆ ಬೆಳಿಗ್ಗೆಯೇ ಶಾಲೆಗೆ ಬರುತ್ತಿರುವ ಮಕ್ಕಳು ಗುಳೆ ಹೋಗಿರುವ ವ್ಯಕ್ತಿಗಳ ಮಕ್ಕಳಿಗೆ ಅನುಕೂಲ

ಸರ್ಕಾರ ನಿಗದಿಪಡಿಸಿದ ಮೆನು ಚಾರ್ಟ್‌ನಂತೆ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಬಿಸಿಯೂಟ ನೀಡಲಾಗುತ್ತಿದೆ. ಆದರೆ ಶಾಲಾ ದಿನಗಳಲ್ಲಿ ನೀಡಲಾಗುತ್ತಿದ್ದ ಮೊಟ್ಟೆ ಬಾಳೆಹಣ್ಣು ಹಾಗೂ ಚಿಕ್ಕಿ ನೀಡುತ್ತಿಲ್ಲ.

-  ಕೆ.ಡಿ ಬಡಿಗೇರ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ

ಸಿಂಧನೂರು ತಾಲ್ಲೂಕಿನಂತಹ ನೀರಾವರಿ ಪ್ರದೇಶಗಳಲ್ಲಿ ಮಕ್ಕಳ ಹಾಜರಾತಿ ಸಂಖ್ಯೆ ಶೇ 50 ತೀವ್ರ ಬರಪೀಡಿತ ದೇವದುರ್ಗ ರಾಯಚೂರು ತಾಲ್ಲೂಕಿನಲ್ಲಿ ಶೇ 70 ರಷ್ಟು ಇದೆ  

-ಈರಣ್ಣ ಕೋಸಗಿ ಅಕ್ಷರ ದಾಸೋಹ ಯೋಜನೆಯ ಜಿಲ್ಲಾ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.